ಯಾವುದೇ ಸಂಭಾಷಣೆಯಲ್ಲಿ ಅಥವಾ ಸಭೆಯಲ್ಲಿ ನಾವು ಹೇಳುವುದಕ್ಕೆ ಹೆಚ್ಚು ಉತ್ಸಾಹಿಗಳಾಗಿರುತ್ತೇವೆಯೇ, ಕೇಳಿಸಿಕೊಳ್ಳುವುದರಲ್ಲೋ? ನಮ್ಮ ವ್ಯಕ್ತಿತ್ವವನ್ನು ಇಷ್ಟು ಮಾತ್ರದಿಂದಲೇ ಅಳೆಯಬಹುದಾಗಿದೆ.
ಯಾವುದೋ ಒಂದು ಘಟನೆಯ ಬಗ್ಗೆ ಒಬ್ಬರು ಮಾತನಾಡುತ್ತಾ ಇರುತ್ತಾರೆ. ಆ ಘಟನೆ ಬಗ್ಗೆ ಎದುರಿನವರಿಗೆ ಬೇರೆಯದೇ ಅಭಿಪ್ರಾಯ ಇರುತ್ತದೆ. ಅವರು ಆ ವ್ಯಕ್ತಿಗೆ ಸಂಪೂರ್ಣ ಮಾತನಾಡಲು ಬಿಡದೆ ನಡುನಡುವೆ ಬಾಯಿ ಹಾಕುತ್ತಾ ಇರುತ್ತಾರೆ. ಅವರಿಗೆ ಕೇಳಿಸಿಕೊಳ್ಳುವುದಕ್ಕಿಂತ ತಮ್ಮ ಪ್ರತಿಕ್ರಿಯೆಯನ್ನು ಹೇಳುವದಕ್ಕೇ ಹೆಚ್ಚು ಧಾವಂತ.
ಯಾಕೆ ಹೀಗಾಗುತ್ತದೆ? ಮಾತನ್ನು ಕೇಳಿಸಿಕೊಳ್ಳದೆ ಪ್ರತಿಕ್ರಿಯಿಸುವುದು ಯಾವ ಮನಸ್ಥಿತಿಯನ್ನು ಸೂಚಿಸುತ್ತದೆ? ಇದು ಕೇವಲ ಎರಡು ಮನಸ್ಥಿತಿಗಳಿಂದ ಮಾತ್ರ ಸಾಧ್ಯ. ಮೊದಲನೆಯದು – ಅಹಂಕಾರದ ಉಡಾಫೆ ಮನಸ್ಥಿತಿ. ಎರಡನೆಯದು – ಪೂರ್ವಾಗ್ರಹ ಪೀಡಿತ ಮನಸ್ಥಿತಿ. ಎದುರಿಗೆ ಇರುವವರಿಗೆ ಏನೂ ಗೊತ್ತಿಲ್ಲ, ನಾನು ತಿಳಿದಿರುವುದೇ ಸರಿ ಅನ್ನುವಂಥ ಭಾವನೆ ಈ ರೀತಿಯ ವರ್ತನೆಗೆ ಕಾರಣವಾಗುತ್ತದೆ.
ಗುಂಪಿನಲ್ಲಿ ಅಥವಾ ವೇದಿಕೆಯ ಮೇಲೆ ಮಾತನಾಡಲು ಧೈರ್ಯ ಬೇಕು. ನಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮಂಡಿಸಲಿಕ್ಕೂ ಧೈರ್ಯ ಬೇಕು; ನಿಜವೇ. ಆದರೆ ಅದಕ್ಕಿಂತ ಹೆಚ್ಚಿನ ಧೈರ್ಯ ನಮಗೆ ಕೇಳಿಸಿಕೊಳ್ಳಲು ಇರಬೇಕಾಗುತ್ತದೆ. ಏಕೆಂದರೆ ಕೇಳಿಸಿಕೊಳ್ಳುವ ಪ್ರಕ್ರಿಯೆ ನಮ್ರತೆಯನ್ನು ಬೇಡುತ್ತದೆ. ಸಭ್ಯತೆಯನ್ನೂ, ಉದಾತ್ತತೆಯನ್ನೂ ಬೇಡುತ್ತದೆ. ಮತ್ತು, ನಮ್ರವಾಗಿರುವುದು, ಉದಾತ್ತವಾಗಿರುವುದು ಧೀರರಿಗೆ ಮಾತ್ರ ಸಾಧ್ಯವಾಗುವ ಸಂಗತಿಗಳು. ಹೇಡಿಗಳು ತಾವು ಸೋಲುವ ಭಯದಿಂದ, ತಮ್ಮ ಬಂಡವಾಳ ಬಯಲಾಗುವ ಆತಂಕದಿಂದ ಸದಾ ಕಾಲವೂ ಡಿಫೆನ್ಸ್ ಮೋಡ್’ನಲ್ಲಿರುತ್ತಾರೆ. ಪ್ರತಿಕ್ರಿಯೆಯಲ್ಲೇ ಅವರ ಆಸಕ್ತಿಯೆಲ್ಲವೂ ಕೇಂದ್ರಿತವಾಗಿರುತ್ತದೆ. ಅವರು ಕೇಳಿಸಿಕೊಳ್ಳುವುದು ಬಹಳ ಕಡಿಮೆ.
ನೀವು ಯಾವ ಬಗೆಯವರು? ಯೋಚಿಸಿ ನೋಡಿ.