~ ಯಾದಿರಾ
ರಾ-ಉಮ್ ಆಶ್ರಮದಲ್ಲಿ ಕಲಿಕೆ ಮತ್ತು ಬೋಧನೆಗೆ ನಿರ್ದಿಷ್ಟ ವಿಧಾನಗಳೇನೂ ಇರಲಿಲ್ಲ. ಆಶ್ರಮದ ಅಂತೇವಾಸವೇ ಒಂದು ಬಗೆಯ ಕಲಿಕೆಯಾಗಿತ್ತು. ಹೀಗಾಗಿ ಹಿರಿಯ ಶಿಷ್ಯರು ಮತ್ತು ಮತ್ತು ಕಿರಿಯ ಶಿಷ್ಯರ ನಡುವಣ ಸಂವಾದ ಸದಾ ನಡೆಯುತ್ತಲೇ ಇರುತ್ತಿತ್ತು.
ಒಂದು ದಿನ ವಾ-ಐನ್-ಸಾಇಲ್ ರೊಟ್ಟಿ ತಟ್ಟುತ್ತಿದ್ದ. ಅದನ್ನು ಸುಡುತ್ತಿದ್ದವನು ಯವನನಾಗಿದ್ದ ಕಿರಿಯ ಶಿಷ್ಯ. ಅವನಿಗೆ ಪೂರ್ವದ ಎಲ್ಲದರ ಕುರಿತೂ ಕುತೂಹಲ. ಕಾರ್ಯ-ಕಾರಣದ ವರ್ತುಲದೊಳಗೆ ಆಲೋಚಿಸುವ ವಿಧಾನದಲ್ಲಿ ಪ್ರಾಥಮಿಕ ಕಲಿಕೆಯನ್ನು ಮುಗಿಸಿ ಬಂದಿದ್ದ ಅವನು ಪೂರ್ವದ ಮಹರ್ಷಿಗಳು ಹೇಳಿದ್ದಲ್ಲವನ್ನೂ ಕೌತುಕದಿಂದ ಕೆದಕಲು ಪ್ರಯತ್ನಿಸುತ್ತಿದ್ದ.
ವಾ-ಐನ್-ಸಾಇಲ್ ಒಂದೇ ಕೈಯಲ್ಲಿ ರೊಟ್ಟಿ ತಟ್ಟುವುದನ್ನು ತದೇಕ ಚಿತ್ತನಾಗಿ ನೋಡುತ್ತಿದ್ದ ಆ ಯವನನಿಗೇ ಏನೋ ಸ್ಫುರಿಸಿತು. ತಕ್ಷಣ ಕೇಳಿದ ‘ಒಂದೇ ಕೈಯ ಚಪ್ಪಾಳೆಯನ್ನು ಆಲಿಸುವುದು ಹೇಗೆ?’
ವಾ-ಐನ್ ಮರು ಮಾತನಾಡದೆ ರೊಟ್ಟಿ ತಟ್ಟುವಿಕೆಯನ್ನು ಮುಂದುವರಿಸಿದ. ಆ ಕಿರಿಯ ಶಿಷ್ಯ ಪ್ರಶ್ನೆಯನ್ನು ಕೇಳುತ್ತಲೇ ಇದ್ದ. ರೊಟ್ಟಿ ಸುಡುವ ಕೆಲಸ ಮುಗಿದು ವಾ-ಐನ್ ಎದ್ದು ಹೋದ. ಈ ಕಿರಿಯ ಶಿಷ್ಯನಿಗೆ ತನ್ನ ಪ್ರಶ್ನೆಗೆ ಉತ್ತರ ದೊರೆಯಲಿಲ್ಲವಲ್ಲ ಎಂದು ಬೇಸರವೂ ಕೋಪವೂ ಬಂತು. ಆದರೂ ಅವನು ಪ್ರಶ್ನೆ ಕೇಳುವ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಕಂಡವರಲ್ಲೆಲ್ಲಾ ಈ ಪ್ರಶ್ನೆ ಕೇಳುತ್ತಾ ಹೋದ.
ಮರುದಿನ ಮುಂಜಾನೆ ದಿನ ಆರಂಭವಾದಾಗಲೇ ಈ ಶಿಷ್ಯನಿಗೆ ರಾ-ಉಮ್ ಕಾಣಸಿಕ್ಕಳು. ಪ್ರಾತಃ ಕರ್ಮಗಳಿಗಾಗಿ ತೆರಳುತ್ತಿದ್ದ ಅವಳ ಬಳಿ ‘ಏಕ ಹಸ್ತದ ಚಪ್ಪಾಳೆಯ ಧ್ವನಿಯನ್ನು ಕೇಳುವುದು ಹೇಗೆ?’ ಎಂದು ಪ್ರಶ್ನಿಸಿದ.
ರಾ-ಉಮ್ ಕೈಯೆತ್ತಿ ಅವನ ಕಪಾಳಕ್ಕೆ ಭಾರಿಸಿ ಹೇಳಿದಳು ‘ನಾನು ಬಳಸಿದ್ದು ಏಕ ಹಸ್ತ. ಈಗ ಕೇಳಿದ್ದು ಚಪ್ಪಾಳೆಯ ಧ್ವನಿ’
ಆ ಹೊತ್ತಿಗೆ ಪಾನೀಯದ ಬಟ್ಟಲನ್ನು ಹಿಡಿದು ಓಡೋಡಿ ಬಂದ ವಾ-ಐನ್-ಸಾಇಲ್ ಅದನ್ನು ಕಿರಿಯ ಶಿಷ್ಯನ ಕೈಗೆ ಕೊಟ್ಟು ‘ತಣ್ಣಗಾಗುವ ಮೊದಲು ಕುಡಿ’ ಎಂದ.