ಮಾಸ್ತಿಯವರ ಅಂತರಗಂಗೆಯಿಂದ; ವೇದ – ಸಂಹಿತೆಗಳು ~ ಭಾಗ 2

sam

ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರ ಪರಿಚಯ ಸರಣಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಅಂತರಗಂಗೆ’ ಕೃತಿಯ ಆಯ್ದ ಅಧ್ಯಾಯಗಳನ್ನು ಪ್ರಕಟಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೊದಲ ಕಂತು ವೇದಗಳ ಪರಿಚಯ. ಈ ಸಂಚಿಕೆಯಲ್ಲಿ ಸಂಹಿತೆಗಳ ಬಗೆಗಿನ ಲೇಖನದ ಎರಡನೇ ಕಂತನ್ನು ನೀಡಲಾಗಿದೆ.
ಮೊದಲ ಕಂತಿನ ಕೊಂಡಿ ಇಲ್ಲಿದೆ : https://aralimara.com/2018/05/21/masti1/

ಅಧ್ಯಾಯ 1 : ವೇದಗಳು ~ ಸಂಹಿತೆಗಳು (ಭಾಗ 2)
ಸೃಷ್ಟಿಯ ಸೊಬಗಿಗೆ ನಮ್ಮ ಪೂರ್ವಿಕರು ಹೇಗೆ ಮನಸೋತಿದ್ದರು ಎನ್ನುವುದು ಇವರಲ್ಲಿ ಒಬ್ಬ ಋಷಿ ರಚಿಸಿದ ಈ ಸೂಕ್ತದಲ್ಲಿ ಸ್ಪಷ್ಟವಾಗುತ್ತದೆ.
“ಉಷಸ್ಸು, ಒಬ್ಬ ನರ್ತಕಿಯಂತೆ ತನ್ನ ವರ್ಣ ವಸ್ತ್ರಗಳನ್ನು ಬಿಚ್ಚಿ ಎಸೆದು ಆಕಳು ಕೆಚ್ಚಲನ್ನು ತೆರೆಯುವಂತೆ ತನ್ನ ಎದೆ ತೆರೆದಿದ್ದಾಳೆ. ಕೊಟ್ಟಿಗೆಯಿಂದ ದನವನ್ನು ಬಿಡುವಂತೆ, ಕತ್ತಲನ್ನು ಬಿಟ್ಟು ಅಟ್ಟಿ, ವಿಶ್ವಭುವನಕ್ಕೆ ಬೆಳಕನ್ನು ಮಾಡಿದ್ದಾಳೆ. ಇವಳು ಪುರಾತನಳು. ಹಾಗೆಯೇ ಮರಳಿ ಮರಳಿ ಹೊಸತಾಗಿ ಉದಿಸುವವಳು. ಈ ಮುನ್ನ ಧರಿಸಿದ ವರ್ಣಗಳನ್ನು ಮತ್ತೆ ಧರಿಸಿ ಇವಳು ಶೋಭಿಸುತ್ತಾಳೆ. ಒಬ್ಬ ಕಿರಾತ ಹಕ್ಕಿಗಳ ಪುಕ್ಕವನ್ನು ಕಿತ್ತು ಎಸೆಯುವಂತೆ ಈ ದೇವತೆ ಮರ್ತ್ಯರ ಆಯುಸ್ಸನ್ನು ಜೀರ್ಣಿಸುತ್ತಾಳೆ. ಓ ವಾಜಿನೀವತಿ ಉಷಾ! ನಿನ್ನ ವರ್ಣವರ್ಣದ ಕುದುರೆಗಳನ್ನು ಕ್ರಮವಾಗಿ ಯೋಜಿಸಿ ನಮಗೆ ಸಮಸ್ತ ಸೌಭಾಗ್ಯವನ್ನು ತಂದುಕೊಡು”
ಉಷೆಯ ಕುರಿತು ಮತ್ತೊಂದು ಸೂಕ್ತದ ಒಂದು ವಾಕ್ಯ ಇದು :
“ಕಳೆದ ಅಸಂಖ್ಯಾತ ಉದಯಗಳ ಶ್ರೇಣಿಯಲ್ಲಿ ಕೊನೆಯ ಉದಯವೂ ಬರುವ ಅಸಂಖ್ಯಾತ ಉದಯಗಳ ಮೊದಲ ಉದಯವೂ ಆಗಿ ಉಷೆ ಬಂದಿದ್ದಾಳೆ.”
ಋಗ್ವೇದದ ಸೂಕ್ತಗಳು ಇಂದ್ರ, ರುದ್ರ, ಮರುತ್ತುಗಳು, ವರುಣ, ಅಗ್ನಿ ಆದಿತ್ಯರು, ದ್ಯಾವಾ ಪೃಥಿವೀ, ಸೋಮ, ರಾತ್ರಿ – ಹೀಗೆ ಪ್ರಕೃತಿಯಲ್ಲಿ ಕಾಣುವ ದೈವೀಶಕ್ತಿಗಳನ್ನು ಹಾಗೂ ತತ್ತ್ವಗಳನ್ನು ಹೊಗಳುತ್ತವೆ, ಪೂಜಿಸುತ್ತವೆ. ಇಂದ್ರನನ್ನು ಕುರಿತ ಒಂದು ಸೂಕ್ತದ ಎರಡು ಋಕ್ಕುಗಳ ಅರ್ಥ ಇದು :
“ಯಾವ ದೇವನು ಹುಟ್ಟಿನಿಂದ ಮನೋವಂತರ ಮೊದಲಿಗನಾಗಿ ಇತರ ದೇವತೆಗಳನ್ನು ತಮ್ಮ ಕಾರ್ಯಗಳ ಮೂಲಕ ಅಧೀನರಾಗಿ ಮಾಡಿದನೋ, ಯಾರ ಬಲದ ದೆಸೆಯಿಂದ ದ್ಯಾವಾ ಪೃಥಿವಿಗಳು ಭಯಪಟ್ಟು ನಡುಗಿದವೋ, ಮಹಾಪರಾಕ್ರಮಶಾಲಿಯಾದ ಆತನೇ ಇಂದ್ರ!”
ರುದ್ರರನ್ನು ಕುರಿತ ಸೂಕ್ತದ ಒಂದು ಮಂತ್ರ ಇದು :
“ಹೇ ರುದ್ರ! ಓಘವನ್ನು ಹರಿಸಿ, ಸುಖವನ್ನು ನೀಡುವ ನಿನ್ನ ರಕ್ಷಕ ಹಸ್ತ, ಅದು ಈಗ ಎಲ್ಲಿ? ದುರದೃಷ್ಟದಿಂದ ಬರುವ ಎಲ್ಲ ಕಷ್ಟವನ್ನೂ ನಿವಾರಿಸುವ ಮಹಿಮಾವಂತನೇ! ಬೇಗ ನನ್ನಲ್ಲಿ ಅನುಗ್ರಹ ಮಾಡು”
ಹೀಗೆ ಮರುತ್ತುಗಳನ್ನು, ವರುಣನನ್ನು, ಅಗ್ನಿಯನ್ನು, ಆದಿತ್ಯರನ್ನು, ಸೋಮನನ್ನು, ದ್ಯಾವಾಪೃಥಿವೀಗಳನ್ನು ಸ್ತುತಿಸುವ ಮಂತ್ರಗಳೂ ಇವೆ. ಈ ಮಂತ್ರಗಳಲ್ಲೆಲ್ಲ ಮುಖ್ಯವಾಗಿ ಒಂದು ಮನೋಧರ್ಮ ಕಾಣುತ್ತದೆ. ಸೃಷ್ಟಿಯಲ್ಲಿ ಕಾಣುವ ಯಾವುದೇ ತತ್ತ್ವ ಹೊರನೋಟಕ್ಕೆ ಏನಾಗಿ ಕಾಣುತ್ತದೆಯೋ ದಿಟದಲ್ಲಿ ಅದು ಅಷ್ಟು ಮಾತ್ರವಲ್ಲ; ಅದಕ್ಕೆ ಆಧಾರವಾಗಿ ಒಂದು ದೈವೀ ಸತ್ವ ಇದೆ. ದಿಟದಲ್ಲಿ ದೈವದಿಂದ ಒಂದೊಂದು ವಸ್ತುವೂ ತನ್ನ ಯೋಗ್ಯತೆಯನ್ನು ಪಡೆದಿದೆ. ಈ ಕಾರಣದಿಂದ ಬುದ್ಧಿವಂತನಾದ ಮನುಷ್ಯ ಎಲ್ಲ ತತ್ತ್ವಗಳಲ್ಲಿಯೂ ದೈವವನ್ನು ಕಾಣಬೇಕು; ಅದರ ವಿಷಯದಲ್ಲಿ ಎಚ್ಚರದಿಂದ, ಭಕ್ತಿಯಿಂದ ನಡೆದುಕೊಳ್ಳಬೇಕು; ಅದರ ಅನುಗ್ರಹವನ್ನು ಗಳಿಸಬೇಕು, ಆ ಮೂಲಕ ಸುಖವನ್ನು ಕಾಣಬೇಕು. ಈ ಸೂಕ್ತಗಳ ಉಕ್ತಿ ಜನರ ತಿಳುವಳಿಕೆಯ ಪರಿಣತ ಸ್ಥಿತಿಯನ್ನು ಪ್ರಕಟಿಸುವುದು ಎಷ್ಟು ದಿಟವೋ, ಅಷ್ಟೇ ದಿಟ ಈ ದೈವೀ ರಕ್ಷಣದ ಕಲ್ಪನೆ ಇದರ ಕರ್ತೃಗಳ ಪರಿಪೂರ್ಣವಾದ ಪರಿಣತ ಜ್ಞಾನವನ್ನು ಪ್ರಕಟಿಸುತ್ತದೆ ಎನ್ನುವುದು.
ಇದರ ಮೇಲೆ ಕಾಣುವ ಒಂದು ಸಂಗತಿ, ಇದುವರೆಗೆ ಬೇರೆಬೇರೆ ಎಂದು ಹೊಗಳಿರುವ ಈ ತತ್ತ್ವಗಳು ದಿಟದಲ್ಲಿ ಬೇರೆ ಅಲ್ಲ, ಒಂದೇ ಎನ್ನುವುದು.
ಒಂದು ಮಂತ್ರ ಹೇಳುತ್ತದೆ:
“ಸುವರ್ಣ ಪಕ್ಷದ ಈ ತತ್ತ್ವ, ಇರುವುದು ಒಂದೇ; ಬಲ್ಲ ಜನ ಬೇರೆ ಬೇರೆ ಹೆಸರುಗಳಿಂದ ಇದನ್ನು ಕರೆಯುತ್ತಾರೆ”.
“ಬಲ್ಲವರು ಅದನ್ನು ಇಂದ್ರ ಎಂದು, ಅಗ್ನಿ ಎಂದು, ವರುಣ ಎಂದು, ಸ್ವರ್ಣ ಪಕ್ಷದ ದಿವ್ಯ ಮರುತ್ತು ಎಂದು ಕರೆಯುತ್ತಾರೆ. ಇರುವ ಒಂದಕ್ಕೆ ಜ್ಞಾನಿಗಳು ಹಲವು ಹೆಸರನ್ನು ಕೊಡುತ್ತಾರೆ. ಅಗ್ನಿ ಎನ್ನುತ್ತಾರೆ, ಯಮ ಎನ್ನುತ್ತಾರೆ, ಮಾತರಿಶ್ವನ್ ಎನ್ನುತ್ತಾರೆ. ಈ ಎಲ್ಲ ದೇವತೆಗಳ ಮೂಲದೇವತೆ ಒಂದೇ”.
(ಮುಂದುವರಿಯುತ್ತದೆ….)

(ಆಕರ : ಅಂತರಗಂಗೆ | ಮಾಸ್ತಿ ವೆಂಕಟೇಶ ಅಯ್ಯಂಗಾರ್)

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

  1. ಕರಣಂ ಪವನ್ ಪ್ರಸಾದ್

    ಈ ಜಾಲತಾಣ ತುಂಬಾ ಚೆನ್ನಾಗಿ ರೂಪುಗೊಳ್ಳುತ್ತಿದೆ. ಜಿಜ್ಞಾಸುಗಳಿಗೆ ರುಚಿದಾಯಕವಾಗಿದೆ. ಇಂಥಹ ಜಾಲತಾಣಗಳಿಗೆ ‘ಹಿಟ್’ ಕಡಿಮೆ ಇರಬಹುದು, ಆದರೆ ಪ್ರಜ್ಞಾವಂತರನ್ನು ಹಿಡಿದಿಡುತ್ತದೆ. ಗುಣಮಟ್ಟ ಬಹಳ ಕಾಲ ಬಾಳುತ್ತದೆ… ಇದರ ಹಿಂದಿರುವ ಉತ್ಸಾಹಿಗಳಿಗೆ ಶುಭವಾಗಲಿ.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.