ಅಕ್ಕರೆ ಹೃದಯದ ರಕ್ಕಸಿ ‘ಹಿಡಿಂಬೆ’

ಪಾಂಡವರ ಧರ್ಮಯುದ್ಧದಲ್ಲಿ ಮಗನೂ ಪಾಲ್ಗೊಂಡು ಕಾದಾಡಲೆಂದು ರಣಾರತಿ ಎತ್ತಿ ತಿಲಕವಿಟ್ಟು ಕಳುಹಿಸಿದ ಹಿಡಿಂಬೆಯ ಮನಸ್ಥಿತಿ ಎಲ್ಲಾ ಸೈನಿಕರ ತಾಯಿ, ಪತ್ನಿಯಂತೆ ಬಹುಶಃ ತ್ಯಾಗೋನ್ನತ್ಯದಿ ಮಡುಗಟ್ಟಿ ಹಿಮವಾಗಿಬಿಟ್ಟಿತ್ತೇನೋ. ಹಿಡಿಂಬೆಯ ಮಗ ಘಟೋತ್ಗಜ ಕುರುಕ್ಷೇತ್ರದಿಂದ ಜೀವಂತವಾಗಿ ಮತ್ತೆ ಬರಲೇ ಇಲ್ಲ. ಹಿಡಿಂಬೆಯ ಕಾಯುವಿಕೆಯೂ ಮುಗಿಯಲೇ ಇಲ್ಲ….  ~ ಸಿರಿ ಆಚಾರ್ಯ

Scene_from_the_Story_of_the_Marriage_of_Abhimanyu_and_Vatsala

ಹಿಡಿಂಬೆ, ಅಸುರ ಕುಲದವಳಾದರೂ ಶ್ರೀಹರಿಯ ಅವತಾರವಾದ ಶ್ರೀ ವೇದವ್ಯಾಸರ ಪೌರೋಹಿತ್ಯದಲ್ಲಿ ಭೀಮನ ಕೈ ಹಿಡಿದ ಅದೃಷ್ಟವಂತೆ. ಭೀಮನ ಮೊದಲ ಪತ್ನಿ ಇವಳೇ. ಅತ್ಯಲ್ಪ ಕಾಲವಾದರೂ ಇದ್ದಷ್ಟು ದಿನ  ಅತ್ಯುತ್ಕಟ ಪ್ರೀತಿಯಲಿ ಭೀಮನೊಡನೇ ಬಾಳಿದವಳು. ಮಗನ ಹಡೆಯುತಲೇ ಮುಂದೆ ಸಾಗಲೇಬೇಕಾದ ಕರ್ಮ ಕರ್ತವ್ಯಕ್ಕಾಗಿ ಪಯಣ ಮುಂದುವರೆಸಿದ ಗಂಡನೊಡನೆ ತೆರಳಲಾಗದ ಹತಭಾಗ್ಯೆ.  ಮಗನ ಲಾಲನೆ ಪಾಲನೆಯಲ್ಲೇ ಪತಿಯ ಅಗಲಿಕೆ ಮರೆತು ಮಗನನ್ನು ತಂದೆ ಭೀಮನಂತೆಯೇ ಕಾಡಿನ ನಾಯಕನನ್ನಾಗಿ ಬೆಳೆಸಿದ ಧೀರೋದಾತ್ತ ಹೆಣ್ಣು ಈ ಚಿರವಿರಹಿ ಹಿಡಿಂಬೆ.  ಎದೆಯುದ್ದ ಬೆಳೆದ ಮಗ  ತಿರುಗಿಬರನೆಂದು ಮನ ಹೇಳುತ್ತಿದ್ದರೂ ನಿರ್ಲಿಪ್ತಿಯಲ್ಲಿ ರಣವೀಳ್ಯದೊಡನೇ ಮಗನನ್ನು ತಂದೆ ಭೀಮನೊಡನೆಯೇ ಕುರುಕ್ಷೇತ್ರಕ್ಕೆ ಕಳುಹಿಸಿಕೊಟ್ಟ ಧೀರ ತ್ಯಾಗಮಯಿ  ಹೆಣ್ಣು ಈ ಹಿಡಿಂಬೆ. 

ಕಳೆದ ಜನ್ಮದ ಪಾಪಪುಣ್ಯಗಳು ನಮ್ಮ ಈ ಜನ್ಮದ ಕರ್ಮಗಳನ್ನು ನಿಯಂತ್ರಿಸುವುದು ಬಲ್ಲೆವಾದರೂ ನಮ್ಮ ಜೀವಾತ್ಮಕ್ಕಿರುವ ಜ್ಞಾನಮಟ್ಟಕ್ಕೆ ತಕ್ಕಂತೆ  ಅರ್ಥೈಸಿಕೊಳ್ಳುತ್ತ ಪ್ರಶ್ನಿಸುತ್ತಾ ಪಾಪಪುಣ್ಯಗಳ ಕಂತೆಗಳನ್ನು ಬೆನ್ನಿಗೇರಿಸಿಕೊಳ್ಳುತ್ತಿರುತ್ತೇವೆ. ಹಾಗೇ ಕರ್ಮಾನುಸಾರ ಅಸುರೆಯಾದ ಈ ಹಿಡಿಂಬೆಯೂ ಹಿಂದಿನ ಜನ್ಮದಲ್ಲಿ ಶ್ರೀ ಎಂಬ ಹೆಸರುಳ್ಳ ಒಬ್ಬ ಅಪ್ಸರಾಸ್ತ್ರೀಯಾಗಿದ್ದವಳು. ದೇವೇಂದ್ರನ ಹೆಂಡತಿ ಶಚೀದೇವಿಯೊಡನೆಯೇ ಸ್ಪರ್ಧಿಸಹೋಗಿ ನಂತರ ಶಚೀದೇವಿಯ ಶಾಪದ ದೆಸೆಯಿಂದ ರಾಕ್ಷಸೀ ಶರೀರವನ್ನು ಹೊಂದಿದವಳು.  ಅವಳಲ್ಲಿ ಮುಖ್ಯಪ್ರಾಣನ ಹೆಂಡತಿಯಾದ ಭಾರತಿಯ ಆವೇಶವೂ ಇತ್ತೆನ್ನುತ್ತಾರೆ. ಮುಖ್ಯಪ್ರಾಣದೇವರ ಮುಂದಿನ ಅವತಾರವೇ ಭೀಮಸೇನನಾದ್ದರಿಂದಲೇ ಭೀಮನಲ್ಲಿ ಅನುರಕ್ತಳಾಗಿ  ಪ್ರಣಯಭಿಕ್ಷೆಯನ್ನು ಬೇಡಿದವಳು ಹಿಡಿಂಬೆ.  ಭಾರತೀದೇವಿಯೂ ಹಿಡಿಂಬೆಗೋಸ್ಕರ ತನ್ನ ಆವೇಶವನ್ನು ಕೊಟ್ಟು ತನಗೆ ಪ್ರಿಯನಾದ ವಾಯು(ಮುಖ್ಯಪ್ರಾಣ)ನ ಅಂಗಸಂಗದಿಂದ ಹಿಡಿಂಬೆಗೆ ಶಾಪದಿಂದ ವಿಮುಕ್ತಿಯೆಂದು ವರವನ್ನಿತ್ತಿದ್ದಳು. ಆ ಪ್ರೇರಣೆಯಿಂದಲೇ ಹಿಡಿಂಬೆ ಭೀಮನಲ್ಲಿ ಅತೀಪ್ರೀತಿ ಹೊಂದಿ ಅವನಲ್ಲೇ ಮನವನ್ನಿಟ್ಟವಳು.

ಹಿಡಿಂಬೆಯು  ರಾಗದ್ವೇಷಗಳನ್ನು ತುಸು ಹೆಚ್ಚೇ ಹೊಂದಿರುವ ತಾಮಸೀ ಪೃವೃತ್ತಿಯೇ ಹೆಚ್ಚಾದ ರಾಕ್ಷಸೀ ಕುಲದಲ್ಲಿ ಜನಿಸಿದವಳು.   ಮಾಯಾಯುದ್ಧದಲ್ಲೂ, ಮಾಯಾವಿದ್ಯೆಯಲ್ಲೂ ಬಲು ಪಳಗಿದವಳು. ಕಾಡಿನ ರಾಜನಾಗಿದ್ದ ಕ್ರೂರಿ ಮಹಾಶಕ್ತಿಶಾಲಿ ಅಣ್ಣ ಹಿಡಿಂಬಾಸುರನ ಕೈಗೊಂಬೆಯಾಗಿ  ದಟ್ಟಕಾಡಿಗೆ ಬರುವ ಯಾತ್ರಿಕರನ್ನು ಕೊಂದು ತಿನ್ನುವ ಕಾಯಕದಲ್ಲಿ ಹಿಡಿಂಬೆ ಅಣ್ಣನ ಬಲಗೈಯಾಗಿದ್ದವಳು.

ಇತ್ತ ಹಸ್ತಿನಾಪುರವನ್ನು ಆಳುತ್ತಿದ್ದ  ಪಾಂಡವರನ್ನು ಕೌರವರ ವಂಚನೆಯ ಅರಗಿನ ಮನೆಯಿಂದ ಪಾರಾಗಿ ಕಾಡು ಸೇರಿದ್ದರು. ನರಮಾಂಸದ ವಾಸನೆ ಹಿಡಿದ ಹಿಡಿಂಬನು ತಂಗಿ ಹಿಡಿಂಬೆಯನ್ನು ಅವರನ್ನೆಲ್ಲಾ ಎಳೆದುಕೊಂಡು ಬಾ ಎಂದು ಆಜ್ಞಾಪಿಸಿದಾಗ ಹೊರಟು ಬಂದ ಹಿಡಿಂಬೆಯು ಭೀಮನನ್ನು ನೋಡುತ್ತಲೇ ಪ್ರೇಮಪರವಶಳಾದಳು.  ತಡ ಮಾಡದ ಆ ಪ್ರೇಮೋನ್ಮತ್ತೆ ತನ್ನ ಭೀಕರ ರೂಪವನ್ನು ಬದಲಾಯಿಸಿಕೊಂಡು ಒಬ್ಬ ಸುಂದರ ಸ್ತ್ರೀಯಾಗಿ ಮಾರ್ಪಟ್ಟು ಭೀಮನ ಹತ್ತಿರ ಪ್ರೇಮಭಿಕ್ಷೆಯನ್ನು ಕೇಳೇಬಿಟ್ಟಳು. ಧೀರ ಶಿರೋಮಣಿಯಾದ ಭೀಮಸೇನ ಅಷ್ಟೇ ಸಂಯಮಿಯೂ ಸಹ. ಅವಳನ್ನು ಕಣ್ಣಿತ್ತಿಯೂ ನೋಡದಂತಹ ಅವನು ಅಸಡ್ಡೆಯಿಂದ ತಿರಸ್ಕರಿಸಿದನು.

ಪರಿಪರಿಯಾಗಿ ಅವಳು ಬೇಡಿಕೊಂಡರೂ ಕರಗದಂತಹ ಕಲ್ಲಂತೆ ಭೀಮ ಭಾವನಾರಾಹಿತ್ಯವಾಗಿ ಕೂತಿರುವಾಗ ತಂಗಿಯನ್ನು ಹುಡುಕಿಕೊಂಡು ಬಂದ ಹಿಡಿಂಬಾಸುರ ಮನುಷ್ಯರ ವಾಸನೆಗೆ ಮತ್ತನಾಗಿ ಅಟ್ಟಹಾಸ ಮಾಡಿದನಷ್ಟೇ.  ಅಣ್ಣ, ತಮ್ಮಂದಿರು ಮತ್ತು ತಾಯಿಯ ನಿದ್ದೆಗೆಲ್ಲಿ ಭಂಗ ಬರುವುದೋ ಎಂಬ ಕೋಪಾವೇಶ ರೋಷದಲ್ಲಿ ಭೀಮ ಹಿಡಿಂಬನನ್ನಿತ್ತಿ ನೆಲಕ್ಕೆ ಬಡಿದನಷ್ಟೇ. ಹಿಡಿಂಬ ಮತ್ತೆ ಏಳಲಿಲ್ಲ. ಆದರೇ ಈ ಶಬ್ಧಕ್ಕೆ ಎಲ್ಲರೂ ಎಚ್ಚರವಾದರು. ಭಯದಿಂದ ತತ್ತರಿಸಿದ ಕುಂತಿ ಒಬ್ಬನೇ ಯುದ್ಧ ಮಾಡುವುದು ಉಚಿತವಲ್ಲ ಎಂದು ಆಕ್ಷೇಪಿಸಿದವಳು ಹಿಡಿಂಬೆಯನ್ನು ಕಂಡು ಚಕಿತಳಾದಳು.  ಅಣ್ಣ ಸತ್ತ ದುಃಖಕ್ಕಿಂತ ಭೀಮನ ತಿರಸ್ಕಾರದಲಿ ಖಿನ್ನಳಾಗಿದ್ದ ಹಿಡಿಂಬೆಯು ಮತ್ತೆ ಎಲ್ಲರನ್ನೂ ಪರಿಪರಿಯಾಗಿ ಭೀಮನನ್ನು ತನ್ನ ಗಂಡನಾಗಲು ಒಪ್ಪಿಸುವಂತೆ ಅಂಗಲಾಚಿದಳು.

ಪ್ರೇಮದ ಶಕ್ತಿ ಶರಣಾಗತಿಯಲ್ಲೇ ಅನ್ನುವಂತೆ ಕುಂತಿಯೂ ಹಿಡಿಂಬೆಯ ಕೈ ಹಿಡಿಯುವಂತೆ ಭೀಮನ ಒಲಿಸಲು ಪ್ರಯತ್ನಿಸಿದಳು. ಕೋಪೋದ್ರಿಕ್ತ ಭೀಮ ರಾಕ್ಷಸನ ತಂಗಿಯನ್ನು ವರಿಸಲಾರೆ ಎಂದು ಪಟ್ಟುಹಿಡಿದು ಕೂತಾಗ ಅವನನ್ನೊಪ್ಪಿಸಲು  ಆ ಸಮಯದಲ್ಲಿ ಮುನಿಪುಂಗವ ಶ್ರೀ ಭಗವಾನ್ ವೇದವ್ಯಾಸರೇ ಬರಬೇಕಾಯಿತು. “ಹಿಡಿಂಬೆಯನ್ನು ಮದುವೆಯಾಗಿ ಪುತ್ರಜನನವಾಗುವವರೆಗೆ ಕಾಡಿನಲ್ಲೇ ಇದ್ದು ಸಂಸಾರಸುಖ ಅನುಭವಿಸು. ನಿನ್ನ ಮಗನಿಂದ ನಿನಗೆ ಭವಿಷ್ಯದಲ್ಲಿ ಸಹಾಯವಾಗಲಿದೆ” ಎಂದು ಆಜ್ಞಾಪಿಸಿ ವೇದವ್ಯಾಸರು ಅಂತರ್ಧಾನವಾದರು.

ವೃಕೋದರನು ವೇದವ್ಯಾಸರ ಆಜ್ಞೆಯಂತೆ ಹಿಡಿಂಬೆಯನ್ನು ಮದುವೆಯದನು.  ಹಿಡಿಂಬೆ ಭೀಮ  ಅನೇಕ ತಿಂಗಳುಗಳ ಕಾಲ ಕಾಡಿನಲ್ಲೇ, ಸರೋವರ, ಹಚ್ಚಹಸಿರ ನಡುವೆ ಅತ್ಯುನ್ನತ ಪ್ರೇಮದಲ್ಲಿ, ಸಂಸಾರಸುಖದಲ್ಲಿ ಸ್ವಚ್ಛಂದ ವಿಹರಿಸಿದರು. ಮಗ ಘಟೋತ್ಕಚನ ಜನನಕೆ ಎಲ್ಲರಲ್ಲೂ ಹರುಷ ಉಕ್ಕಿ ಹರಿಯಿತು. ಹುಟ್ಟಿದ ಸಮಯದಲ್ಲೇ ಅವನ ತಲೆ ಘಟದಷ್ಟು ಗಟ್ಟಿಯಾಗಿದ್ದುದಕ್ಕೆ ಅವನಿಗೀ ಹೆಸರು. ಮತ್ತೆ ಸಾಕ್ಷಾತ್ ವೇದವ್ಯಾಸರೇ ಬಂದು ಮಗುವಿಗೆ ಕಾಡಿನ ರಾಜನೆಂದು ಪಟ್ಟಾಭಿಷೇಕಗೈದರು.  ನಂತರವೇ ಶುರುವಾದದ್ದು ಹಿಡಿಂಬೆಯ ಕಷ್ಟಕಾಲ. ಪತಿ ತನ್ನನ್ನು ಬಿಟ್ಟು ಹೋಗಲೇಬೇಕಾದ ಕಠಿಣ ಪರಿಸ್ಥಿತಿ.  ಅವರ ಜೊತೆ ಹೋಗಲು ಅಸುರಳಾದ ಕಾರಣ, ತನ್ನ ಕಾಡನ್ನು, ಕಾಡಿನ ಪ್ರಭುತ್ವವನ್ನು ಬಿಡಲಾಗದ ಅಸಹಾಯಕತೆ.  

Marriage_of_Bhima_and_Hidimbi_Aranyak_Parva_Mahabharata

ಭೀಮನಿಗೂ ಅಷ್ಟು ಹೊತ್ತಿಗೆ ಅವಳಲ್ಲಿ ಅವಿಚ್ಛಿನ್ನ ಪ್ರೇಮವಾಗಿಬಿಟ್ಟಿತ್ತು. ಪ್ರೀತಿಯ ಮತ್ತು ವೀರತ್ವದ ವಿಷಯದಲ್ಲಿ ಭೀಮ ಯಾವಾಗಲೂ ಅಗ್ರೇಸರನೇ..ಆದರೆ ವಿಯೋಗ ಅನಿವಾರ್ಯವಾದಾಗ ಪ್ರೇಮ ಪರಾಕಾಷ್ಟೆ ಮನವನ್ನು ಒರೆ ಹಚ್ಚಿ ಪರೀಕ್ಷಿಸುತ್ತದೆ. ಅದೆಲ್ಲ ಹೇಗೇ ತಡೆದುಕೊಂಡಳೋ ಎಂದು ಅವಳೆಡೆ ಮನ ಮರುಗಿದರೂ ಮಗುವೊಂದಿತ್ತಲ್ಲಾ ಅವಳ ಬಳಿ ಭೀಮನ ಛಾಯೆಯಾಗಿ ಎಂದು ಮನ ಸಮಾಧಾನಿಸಿಕೊಳ್ಳುತ್ತದೆ.  ಅಷ್ಟಲ್ಲದೇ ವಿಧಿಯಾಟದ ಗೊಂಬೆಗಳಲ್ಲವೇ ಪಾಂಡವರೂ ಸಹ. ಕ್ಷತ್ರಿಯರಾದ ಪಾಂಡವರಿಗೆ ನಡೆಯಬೇಕಾದ, ಸಾಧಿಸಬೇಕಾದ ನೂರು ಗಂತವ್ಯಗಳು ಕಣ್ಣ ಮುಂದಿರುವಾಗ ಕಾಡಿನಲ್ಲೇ ಇರಲಾದೀತೇ..? ಇದನ್ನೆಲ್ಲಾ ಚೆನ್ನಾಗಿ ಬಲ್ಲ ಹಿಡಿಂಬೆಯನ್ನು ಬಿಟ್ಟು  ಹೊರಡಲೇಬೇಕಿತ್ತು. ಹೊರಟೇ ಬಿಟ್ಟ ಭೀಮ.  ಹಿಡಿಂಬೆಯನ್ನು ಬಿಟ್ಟು, ಘಟೋತ್ಕಚನನ್ನು ಬಿಟ್ಟು, ಕಳೆದ ಸಂಸಾರ ಸುಖದ ಕ್ಷಣಗಳನ್ನು ಹಿಡಿಂಬೆಯ ಮಡಿಲಲ್ಲಿ ಹಾಕುತ್ತಾ ಹಾಗೆಯೇ ಇನ್ನೆಂದೋ ಅವಳನ್ನು ನೋಡಲು ಬರುವನೆಂಬ ಸಣ್ಣ ಆಸೆಯನ್ನೂ ಅವಳ ಮನದಲ್ಲಿ ತುಂಬುತ್ತಾ.  ಹೊರಟುಬಿಟ್ಟ ಭೀಮಸೇನ  ಅವಳ ಕಾಯುವಿಕೆಯ ಋತುಮಾನವನ್ನು ಜೀವಂತವಾಗಿಟ್ಟು.

ವರ್ಷಗಳು ಕಳೆದಂತೆ ತನ್ನಂತೆ ಮಾಯಾ ಯುದ್ಧದಲ್ಲಿ ಪರಿಣತನನ್ನಾಗಿ, ತಂದೆ ಭೀಮನಂತೆ ಮಹಾವೀರನ್ನಾಗಿ,  ಅಸೀಮ ನಾಯಕನಾಗಿ ಬೆಳೆಸಿದ ಮಗ ಘಟೋತ್ಕಚನ ಮದುವೆಯ ಸಂಭ್ರಮದಿ ಮತ್ತೊಂದು ಸಂಭ್ರಮ ಹಿಡಿಂಬೆಗೆ. ಪತಿ ಭೀಮ ಮನೆಗೆ ಬಂದದ್ದು ಅವಳ ಕಾಯುವಿಕೆಯ ಹೋಮದ ಉದ್ಯಾಪನೆಯಂತೆ ಅನಿಸಿ ಅವಳ ಸಡಗರ ನೂರ್ಮಡಿಯಾದಂತಿತ್ತು. ಆದರವನು ಬಂದಿದ್ದು ಮಗನನ್ನು ಯುದ್ಧಕ್ಕೆ ಕಳಿಸಿಕೊಡು ಎಂದು ಕೇಳಲು. ಆಘಾತಗೊಂಡರೂ ಹಿಡಿಂಬೆಗೆ ಕುರುಕ್ಷೇತ್ರದ ಮಹಾಸಂಗ್ರಾಮಕ್ಕೆ ಮಗ ತಂದೆಯ ಸಹಾಯಕ್ಕೆ ಹೋಗುವುದು  ಆನಂದ ತಂದರೂ ಮರಳಿ ಬರುವನೋ ಇಲ್ಲವೋ ಎಂಬ ಯುದ್ಧಪೂರ್ವ ಆತಂಕ. ಆದರೂ ಪಾಂಡವರ ಧರ್ಮಯುದ್ಧದಲ್ಲಿ ಮಗನೂ ಪಾಲ್ಗೊಂಡು ಕಾದಾಡಲೆಂದು ರಣಾರತಿ ಎತ್ತಿ ತಿಲಕವಿಟ್ಟು ಕಳುಹಿಸಿದ ಹಿಡಿಂಬೆಯ ಮನಸ್ಥಿತಿ ಎಲ್ಲಾ ಸೈನಿಕರ ತಾಯಿ, ಪತ್ನಿಯಂತೆ ಬಹುಶಃ ತ್ಯಾಗೋನ್ನತ್ಯದಿ ಮಡುಗಟ್ಟಿ ಹಿಮವಾಗಿಬಿಟ್ಟಿತ್ತೇನೋ. ಹಿಡಿಂಬೆಯ ಮಗ ಘಟೋತ್ಗಜ ಕುರುಕ್ಷೇತ್ರದಿಂದ ಜೀವಂತವಾಗಿ ಮತ್ತೆ ಬರಲೇ ಇಲ್ಲ. ಹಿಡಿಂಬೆಯ ಕಾಯುವಿಕೆಯೂ ಮುಗಿಯಲೇ ಇಲ್ಲ.  

ಪ್ರೀತಿಯನ್ನು ಕಳೆದುಕೊಂಡೂ ಜೀವನ ಪ್ರೀತಿ ಮತ್ತು ಕರ್ತವ್ಯಪ್ರಜ್ಞೆಯೇ ಮೂರ್ತಿವೆತ್ತಂತೆ ಕಾಣಸಿಗುವ ಕೆಲವು ಪಾತ್ರಗಳು ತಮ್ಮ ಪಾತ್ರವನ್ನು ಸಮರ್ಥಿಸಿಕೊಳ್ಳಲು ನೂರು ಕರ್ಮವಿಚಾರಗಳನ್ನು ಮುಂದಿಟ್ಟರೂ ಮನದ ಮೂಲೆಯಲ್ಲೆಲ್ಲೋ ವಿಷಾದದ ಅಕ್ಷರಗಳನ್ನು ಬರೆಯುವುದು ಸುಳ್ಳಲ್ಲ. 
 

 

Leave a Reply