ಅಧ್ಯಾಯ 1 : ವೇದಗಳು ~ ಹಿರಣ್ಯಗರ್ಭ ಸ್ತುತಿ (ಭಾಗ 3)

samಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪರಿಚಯಿಸು ಈ ಸರಣಿಯಲ್ಲಿ ಇದು ಮೂರನೆಯ ಕಂತು. ಕಳೆದೆರಡು ಕಂತುಗಳಲ್ಲಿ ಸಂಹಿತೆಗಳ ಕಿರುಪರಿಚಯವಾಯಿತು. ಈ ಸಂಚಿಕೆಯಲ್ಲಿ ಮಾಸ್ತಿಯವರ ಅಂತರಗಂಗೆ ಕೃತಿಯಿಂದ ‘ವೇದೋಕ್ತ ಹಿರಣ್ಯಗರ್ಭ ಸ್ತುತಿ’ಯನ್ನು ನೀಡಲಾಗಿದೆ.

ರಂಭದಲ್ಲಿ ಹಿರಣ್ಯಗರ್ಭನು ಜನಿಸಿದನು. ಜನಿಸಿದವನು ಎಲ್ಲದರ ಏಕಪ್ರಭು ಆದನು. ಪೃಥಿವಿಯನ್ನೂ ಅಂತರಿಕ್ಷವನ್ನೂ ಧರಿಸಿದನು.

ಅವನು ಆತ್ಮದಾತ, ಬಲದಾತ. ಅವನ ಆಜ್ಞೆಯನ್ನು ವಿಶ್ವ ನಡೆಸುತ್ತದೆ. ದೇವತೆಗಳೂ ನಡೆಸುತ್ತಾರೆ. ಅಮರತ್ವ ಅವನ ನೆರಳು. ಮೃತ್ಯು ಕೂಡಾ ಅವನ ನೆರಳೇ. ಉಸಿರಾಡುವ, ಎವೆಯಿಕ್ಕುವ, ಜಗತ್ತಿಗೆ ಅವನು ತನ್ನ ಮಹಿಮೆಯ ಕಾರಣ ಏಕಪ್ರಭು ಆಗಿದ್ದಾನೆ; ಅವನು ದ್ವಪದ, ಚತುಷ್ಪದ ಜೀವರಾಶಿಯನ್ನು ಆಳುತ್ತಾನೆ.

ಹಿರಣ್ಯಗರ್ಭನ ಮಹತ್ವವನ್ನು ನದಿ ಸಮುದ್ರಗಳ ಸಹಿತ ಹಿಮವಂತನು ಹೊಗಳುತ್ತಾನೆ. ಈ ದಿಕ್ಕುಗಳೆಲ್ಲ ಅವನ ತೋಳುಗಳು. ಅವನಿಂದ ಅಂತರಿಕ್ಷ ಗಹನವಾಗಿದೆ. ಪೃಥಿವಿ ದೃಢವಾಗಿದೆ. ಸ್ವರ್ಗ – ನರಕಗಳು ಅವನಿಂದ ಸ್ತಂಭಿತವಾಗಿದೆ. ಅವನು ಆಕಾಶದಲ್ಲಿ ನೀರನ್ನು ಸೃಜಿಸಿದನು.

hiranyagarbha

ದ್ಯಾವಾ ಪೃಥಿವೀ ಎರಡೂ ಅವನ ಸಂಕಲ್ಪದಿಂದ ಸ್ಥಾಪನೆಗೊಂಡು, ಭಯದಿಂದ ಅವನನ್ನು ಗೌರವಿಸುತ್ತವೆ. ಸೂರ್ಯನು ಅವನಿಂದಲೇ ಉದಿಸಿ ಸ್ತುತಿಸುತ್ತಾನೆ. ನೀರು ಮಹಾಪ್ರವಾಹವಾಗಿ ಅವನಿಂದ ಹರಿದು ವಿಶ್ವವನ್ನು ಹೊಕ್ಕು, ಗರ್ಭವನ್ನು ಇರಿಸಿ, ಅಗ್ನಿಯನ್ನು ಹೆರುತ್ತದೆ. ಮೇಲಾಗಿ ಅವನು ದೇವತೆಗಳ ಏಕೈಕ ಶ್ವಾಸವಾಗಿ ನಿಂತಿದ್ದಾನೆ.

ಅವನು ತನ್ನ ಮಹಿಮಾವಂತ ದೃಷ್ಟಿಯಿಂದ ಜಲರಾಶಿಯನ್ನು ನೋಡಿದನು. ಶಕ್ತಿಯನ್ನು ನೀಡಿದನು. ಯಜ್ಞವನ್ನು ಏರ್ಪಡಿಸಿದನು. ದೇವತೆಗಳ ಅಧಿದೈವತ ಆದನು.

ಪೃಥಿವಿಯ ಜನಿತಾ ಆಗಿ ಸತ್ಯ ಧರ್ಮದಿಂದ ದಿವವನ್ನು, ಹಾಗೆಯೇ ಹೊಳೆಯುವ ಮಹಾ ಜಲರಾಶಿಯನ್ನು ಪಡೆದ ಆ ದೈವ ನಮ್ಮನ್ನು ಹಿಂಸಿಸದಿರಲಿ.

ನಾವು ಹವಿಸ್ಸನ್ನು ಅರ್ಪಿಸೋಣ ಯಾರಿಗೆ?
ಈ ಒಬ್ಬನೇ ದೇವನಿಗೆ.

(ಆಕರ : ಅಂತರಗಂಗೆ | ಮಾಸ್ತಿ ವೆಂಕಟೇಶ ಅಯ್ಯಂಗಾರ್)

Leave a Reply