ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಬಣ್ಣ ಕಾರಣ ಕಣ್ಣ ಕುರುಡಿಗೆ
ಕಿವಿಯ ಕಿವುಡಿಗೆ ಶಬ್ದವು.
ಸ್ವಾದ, ಪರಿಮಳ, ರುಚಿಗೆ ಕಂಟಕ
ಹೊಳಹು ಬುದ್ಧಿಗೆ ವೈರಿಯು.
ಜೂಜು, ಬೇಟೆ, ಮನದ ಸೊಕ್ಕು
ಬಯಕೆ, ಭಯಕೆ ಬೀಜವು.
ಕಣ್ಣು ಕಂಡ ಬೆರಗ ಸೋಸಿ
ಚೆಲುವ ಬಸಿಯಿತು ಮಮತೆಯು
ಬೆಳಕ ಕಳಚಿ ಇರುಳ ರಮಿಸಿ
ಸಂತ ಜಗಕೆ ತಾಯಿಯು.