ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಮೊದಲ ಬಾರಿಗೆ ಆರಂಭಿಸಿದವನು ಹೆರಾಕ್ಲೀಸ್. ತನ್ನ ತಂದೆ ಸ್ಯೂಸ್ ದೇವನ ಗೌರವಾರ್ಥ ಅವನು ಇದನ್ನು ಆರಂಭಿಸಿದ.
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಒಮ್ಮೆ ಸ್ವರ್ಗ ಲೋಕದ ಮೇಲೆ ರಾಕ್ಷಸರು ಆಕ್ರಮಣ ನಡೆಸಲು ಸಜ್ಜಾಗುತ್ತಿದ್ದರು. ಭೂಮಿಯಲ್ಲಿ ಹುಟ್ಟಿದ ವೀರನೊಬ್ಬನ ಸಹಾಯ ಪಡೆಯದೆ ಅವರನ್ನು ಎದುರಿಸಲು ಸಾಧ್ಯವಿಲ್ಲ ಎಂದು ದೈವವಾಣಿಯಾಗಿತ್ತು. ಇದನ್ನು ನಿಮಿತ್ತ ಮಾಡಿಕೊಂಡು ಮಹಾ ದೇವ ಸ್ಯೂಸ್, ಟ್ರೋಜನ್ ನಗರದ ಅರಸ ಆಂಫಿಟ್ರಿಯೋನನ ಹೆಂಡತಿ ಅಲ್ಕ್ ಮೀನಿಯಿಂದ ಗಂಡುಮಗುವನ್ನು ಪಡೆದ. ಆ ಮಗು ಆಂಟಿಫ್ರಿಯೋನನ ಸುಪರ್ದಿಯಲ್ಲೇ ಬೆಳೆಯಿತು. ಅವನೇ ಗ್ರೀಕ್ ಪುರಾಣದಲ್ಲಿ ಸುಪ್ರಸಿದ್ಧನಾದ ಹೆರಾಕ್ಲೀಸ್.
ಹೆರಾಕ್ಲೀಸ್ ಬೆಳೆದು ದೊಡ್ಡವನಾಗುವವ ವೇಳೆಗೆ ರಾಕ್ಷಸರು ದೇವತೆಗಳ ಮೇಲೆ ಯುದ್ಧ ಹೂಡಿದ್ದರು. ಸ್ಯೂಸ್ ದೇವ ತನ್ನ ಮಗ ಹೆರಾಕ್ಲೀಸನನ್ನು ನೆನೆದು ಸ್ವರ್ಗಕ್ಕೆ ಕರೆಸಿಕೊಂಡ. ಹೆರಾಕ್ಲೀಸ್ ದೇವತೆಗಳ ನಿರೀಕ್ಷೆಗೂ ಮೀರಿ ಯುದ್ಧವನ್ನು ಮುನ್ನಡೆಸಿ ರಾಕ್ಷಸರನ್ನು ಹೊಡೆದಟ್ಟಿದ. ಸ್ವರ್ಗ ಲೋಕ ಮರಳಿ ದೇವತೆಗಳ ಕೈಸೇರಿತು.
ಈ ಯುದ್ಧ ಮುಗಿಸಿ ಮರಳಿದ ಹೆರಾಕ್ಲೀಸ್ ಕೊಂಚ ವಿಶ್ರಾಂತಿ ಬಯಸಿದ್ದ. ಕ್ರೀಡಾವಿನೋದದಲ್ಲಿ ಕಾಲ ಕಳೆಯಲು ನಿರ್ಧರಿಸಿದ. ಅದರಂತೆ ಪೀಸ ಬಳಿಯ ಒಲಿಂಪಿಯಾ ನಗರಕ್ಕೆ ಬಂದು, ತನ್ನ ತಂದೆ ಸ್ಯೂಸ್ ದೇವನ ಗೌರವಾರ್ಥವಾಗಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸುವುದಾಗಿ ಘೋಷಿಸಿದ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡಾಕೂಟ ನಡೆಸುವುದೆಂದು ತೀರ್ಮಾನವಾಯಿತು.
ಒಲಿಂಪಿಕ್ಸ್ ಕ್ರೀಡೆಗಳನ್ನು ನಡೆಸಲೆಂದೇ ಹೆರಾಕ್ಲೀಸ್ 12 ಕ್ರೀಡಾಂಗಣಗಳನ್ನು ನಿರ್ಮಿಸಿದ. 200 ಹೆಜ್ಜೆಗಳಷ್ಟು ದಾಪುಗಾಲಿಟ್ಟು ಅವನು ಅಳೆದ ವಿಸ್ತೀರ್ಣವೇ ‘ಸ್ಟೇಡಿಯಸ್’ (ಕ್ರೀಡಾಂಗಣ) ಆಯಿತು. ರೋಮನ್ನರು ಇದನ್ನು ‘ಸ್ಟೇಡಿಯಮ್’ ಎಂದೂ ಲ್ಯಾಟಿನ್ ಭಾಷೆಯಲ್ಲಿ ಸ್ಟೇಜ್ ಎಂದೂ ಕರೆದರು.
ಹೆರಾಕ್ಲೀಸ್ ನಂತರದಲ್ಲಿಯೂ ಸಾಕಷ್ಟು ವರ್ಷಗಳ ಕಾಲ ಒಲಿಂಪಿಕ್ಸ್ ಕ್ರೀಡೆಗಳು ನಡೆದವು. ಆದರೆ ನಂತರದಲ್ಲಿ ಏಕಾಏಕಿ ಸ್ಥಗಿತಗೊಂಡು ಕೇವಲ ಪೌರಾಣಿಕ ಸಂಗತಿಯಾಗಿ ಮಾತ್ರ ಉಳಿದುಹೋಯಿತು. ಒಲಿಂಪಿಕ್ಸ್ ಕ್ರೀಡೆಗಳಿಗೆ ಕಾಯಕಲ್ಪ ದೊರೆತು ಪುನರಾರಂಭಗೊಂಡಿದ್ದು 17ನೇ ಶತಮಾನದಲ್ಲಿ. ಅಂದಿನಿಂದ ಇಂದಿನವರೆಗೆ ಒಲಿಂಪಿಕ್ಸ್ ಕ್ರೀಡೆಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರತಿಷ್ಠಿತ ಕ್ರೀಡಾಕೂಟವಾಗಿ ನಡೆಯುತ್ತ ಬಂದಿದೆ.