ಸಂತೋಷದಿಂದ ಇರಲು ಕಷ್ಟಪಡಬೇಕಿಲ್ಲ!

ಸಂತಸದಿಂದಿರಲು ಹೆಚ್ಚು ಕಷ್ಟ ಪಡಬೇಕಿಲ್ಲ. ಸಂತಸದಿಂದ ಇರುತ್ತೇನೆಂದು ನಿರ್ಧಾರ ಮಾಡಿಕೊಂಡರೆ ಸಾಕು!

happy

ಸಂತೋಷ ಒಂದು ಮನಸ್ಥಿತಿ. ಕೆಲವೊಮ್ಮೆ ಅದು ತಾನಾಗಿ ಒದಗಿಬರುತ್ತದೆ. ಬಹಳಷ್ಟು ಸಲ ಅದು ನಮ್ಮ ನಿರ್ಧಾರದಿಂದ ಹೊಮ್ಮುತ್ತದೆ. ನಾವು ಸಂತಸದಿಂದ ಇರುವಾಗ ನಮಗದು ಗೊತ್ತಾಗುವುದಿಲ್ಲ. ನಮ್ಮ ಈ ಸ್ಥಿತಿ ನಮ್ಮ ಆಯ್ಕೆಯಾಗಿದೆ, ನಮ್ಮ ನಿರ್ಧಾರವಾಗಿದೆ ಎಂಬುದನ್ನು ನಾವು ಗಮನಿಸಿರುವುದಿಲ್ಲ. ನಾವು ಸಂತೋಷಪಡಲು ಬಯಸದೇ ಹೋದರೆ ನಮ್ಮಿಂದ ಆ ಸ್ಥಿತಿಯನ್ನು ಹೊಂದಲು ಸಾಧ್ಯವಿದೆಯೆ? ಖಂಡಿತಾ ಇಲ್ಲ, ಅಲ್ಲವೆ? 

ನಾವು ಬಹಳ ಬಾರಿ ಒಂದು ತಪ್ಪು ಮಾಡುತ್ತೇವೆ. ನಮ್ಮ ನಿರ್ಧಾರ ಮಾತ್ರದಿಂದ ಹೊಂದಬಹುದಾದ ಆನಂದಸ್ಥಿತಿಯನ್ನು ಕಡೆಗಣಿಸಿ, ಇನ್ನೆಲ್ಲೋ ಹುಡುಕಲು ಹೊರಡುತ್ತೇವೆ. ನಮಗೆ ಯಾವಾಗಲೂ ಹಿತ ನೀಡುವ ಸಂಗೀತ ಕೆಲವೊಮ್ಮೆ ಕರಕರೆ ಅನ್ನಿಸುವುದು ಯಾಕೆ ಹೇಳಿ? ನಮ್ಮ ಪ್ರೀತಿಪಾತ್ರರು ಜೊತೆಯಾದರೆ ಖುಷಿ ಪಡುವ ನಾವು ಕೆಲವೊಮ್ಮೆ ಒಂಟಿಯಾಗಿ ಬಿಟ್ಟರೆ ಸಾಕೆಂದು ಭುಜ ಕೊಡವೋದು ಯಾಕೆ ಹೇಳಿ? ಅದು ಹೇಗೆ ನಮಗೆ ಸಂತಸ ನೀಡುವ ವಸ್ತು/ವ್ಯಕ್ತಿ/ಸಂಗತಿಗಳು ಇದ್ದಕ್ಕಿದ್ದಂತೆ ನಮ್ಮನ್ನು ಆ ಸ್ಥಿತಿಯಿಂದ ಹೊರತಾಗಿಡಲು ಸಾಧ್ಯ? 

ಯಾಕೆಂದರೆ, ನಾವು ಕಾರಣಗಳೊಂದಿಗೆ ಸಂತಸವನ್ನು ತಳಕು ಹಾಕಿಕೊಂಡಿರುತ್ತೇವೆ. ಯಾವುದೋ ವಿಷಯದ ಕುರಿತು ನಮ್ಮ ಅಸಮಾಧಾನ, ನಮ್ಮ ವೈಫಲ್ಯ, ನಮ್ಮ ಬೇಸರಗಳು ನಮ್ಮನ್ನು ಸಂತೋಷವನ್ನೇ ನಿರಾಕರಿಸುವ ಸ್ಥಿತಿಗೆ ತಂದಿರುತ್ತವೆ. ಪ್ರಜ್ಞಾಪೂರ್ವಕವಾಗಿ ಈ ನಿರಾಕರಣೆಯನ್ನು ಹೊರಗಿಟ್ಟರೆ, ನಮ್ಮ ಸಂತೋಷವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಾಗದು; ಸ್ವತಃ ನಾವು ಕೂಡಾ!!

Leave a Reply