ಅಲೆಗಳನ್ನು ಸಮಸ್ಯೆ ಎಂದಲ್ಲ, ಸಾಧ್ಯತೆಗಳೆಂದು ಭಾವಿಸಿ…

ಬದುಕಿನಲ್ಲಿ ಯಾವ ಪ್ರಯತ್ನಕ್ಕೂ ಅಂತ್ಯ ಎನ್ನುವುದೊಂದಿಲ್ಲ. ಎಲ್ಲವೂ ಮುಗಿದೇಹೋಯ್ತು ಅಂದುಕೊಳ್ಳುವಾಗಲೇ ಹೊಸ ಸಾಧ್ಯತೆ ನಮಗಾಗಿ ತೆರೆದುಕೊಳ್ಳುತ್ತಿರುತ್ತದೆ. ಕಣ್ಣುಬಿಟ್ಟು ನೋಡುವ ಎಚ್ಚರ ನಮ್ಮಲ್ಲಿ ಇರಬೇಕಷ್ಟೆ.

 

daari

ಮುದ್ರದಲ್ಲಿ ಅಲೆಗಳು ಒಂದಾದಮೇಲೆ ಒಂದು ಏಳುತ್ತಲೇ ಇರುತ್ತವೆ. ಒಂದು ಎದ್ದು ದಡ ಮುಟ್ಟಿ ತೀರಿತು ಎನ್ನುವಾಗ ಮತ್ತೊಂದು ಎದ್ದು ಬರುತ್ತದೆ. ಅದಕ್ಕೆ ದಣಿವೇ ಇಲ್ಲ. ನಾವು ಸಾಮಾನ್ಯವಾಗಿ ಈ ಅಲೆಗಳನ್ನು ಸಮಸ್ಯೆಗಳಿಗೆ ಹೋಲಿಸುತ್ತೇವೆ. ಸಮಸ್ಯೆಗಳು ಮುಗಿಯುವುದೇ ಇಲ್ಲ, ಒಂದು ತೀರಿತು ಎಂದಕೂಡಲೇ ಮತ್ತೊಂದು ಉದ್ಭವವಾಗುತ್ತದೆ ಎಂದು ಗೊಣಗುತ್ತೇವೆ. ಆದರೆ ಯಾವಾಗಲೂ ನಾವೇಕೆ ನಕಾರಾತ್ಮಕವಾಗಿಯೇ ಯೋಚಿಸಬೇಕು? 

ಹಾಗೆ ನಿರಂತರವಾಗಿ ಮೂಡುವ ಅಲೆಗಳನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ. ಅವನ್ನು ಸಾಧ್ಯತೆಗಳಿಗೆ, ಅವಕಾಶಗಳಿಗೆ ಹೋಲಿಸಿ ನೋಡಿ. ಒಂದು ಅವಕಾಶ ಮುಗಿದರೇನಂತೆ, ಇನ್ನೊಂದು ಬಂದೇ ಬರುತ್ತದೆ. ಈಗ ಸಾಧಿಸಲಾಗದೆ ಹೋದರೆ ಏನಂತೆ, ಮತ್ತೊಮ್ಮೆ ಸಾಧ್ಯವಾಗಿಯೇ ತೀರುತ್ತದೆ ಅನ್ನುವ ವಿಶ್ವಾಸವಿಡಿ. ಯಾವ ಅಲೆ ಬೇಕಿದ್ದರೂ ನಿಮ್ಮ ಪಾಲಿಗೆ ಮೊದಲ ಅಲೆಯಾಗಬಹುದು. ಅನಂತ ಅವಕಾಶಗಳಲ್ಲಿ ನಿಮ್ಮ ಪಾಲಿನ ಮೊದಲ ಅವಕಾಶ ಯಾವಾಗ ಬೇಕಾದರೂ ಒದಗಿಬರಬಹುದು. 

ಮೂಡಿ, ಮರಳಿಯೂ ಹೋದ ಅಲೆಗಳ ಬಗ್ಗೆ ಚಿಂತಿಸುತ್ತ ಕುಳಿತರೆ ಫಲವಿಲ್ಲ. ಕೈಮೀರಿದ ಸಂಗತಿಗಳ ಬಗ್ಗೆ ಹಳಹಳಿಸಿ ಪ್ರಯೋಜನವೂ ಇಲ್ಲ. ಆದ್ದರಿಂದ, ನೀವು ದೃಢ ನಿಶ್ಚಯ ತಾಳಿದ ಕ್ಷಣವೇ ಹೊಸ ಕ್ಷಣ. ಪ್ರಯತ್ನ ಶುರುಮಾಡಿ, ನಿಶ್ಚಿತ ಗುರಿಯನ್ನು, ಅಂತ್ಯವನ್ನು ಖಚಿತವಾಗಿ ತಲಪುವಿರಿ. 

Leave a Reply