ಈ ಉಪನಿಷತ್ತುಗಳನ್ನು ರಚಿಸಿದವರೂ ಋಷಿಗಳೇ. ಇವರು ಜನಸಾಮಾನ್ಯರು ಆವರೆಗೆ ಕಲಿತಿದ್ದ ವಿದ್ಯೆಯನ್ನು ಅಪರಾ ವಿದ್ಯೆ ಎಂದು ಕರೆದರು. ತಾವು ಉಪಾಸನೆ ಮಾಡಿದ ಹೊಸ ವಿದ್ಯೆಯನ್ನು ಪರಾ ವಿದ್ಯೆ ಎಂದು ಕರೆದರು.
ವೇದಗಳ ಕಾಲ ನಮ್ಮ ಪೂರ್ವಿಕರ ಬೆಳವಣಿಗೆಯ ಆರಂಭದ ಕಾಲ. ಜಾಣ ಜನ ಲೋಕವನ್ನು ನೋಡಿ, ಅದರ ಚೆಲುವಿಗೆ ಮನ ಕೊಟ್ಟು, ಪ್ರಕೃತಿಯ ಹಿಂದಿನ ದೈವೀ ಶಕ್ತಿಯ ಇದಿರಲ್ಲಿ ಮಣಿದು, ಶುಭವನ್ನು ಬೇಡಿ, ಅದನ್ನು ತಕ್ಕಷ್ಟು ಪಡೆದು, ಅನುಭವಿಸಿ, ಸಂತೋಷದಿಂದ ಹಾಡಿದ ಕಾಲ.
ಇಷ್ಟು ಸಂತೋಷವನ್ನು ಅನುಭವಿಸಲು ಒದಗುವ ಜಾಣ ಈ ಅನುಭವದಿಂದ ತೃಪ್ತಿ ಹೊಂದಿ ಅಲ್ಲಿಯೇ ನಿಲ್ಲುವುದಿಲ್ಲ; ಮುಂದೆ ಏನು ಎಂದು ಯೋಚಿಸುತ್ತದೆ. ಅಭ್ಯುದಯದಿಂದ ಸಂಪೂರ್ಣ ತೃಪ್ತಿಯನ್ನು ಪಡೆಯದೆ ನಿಃಶ್ರೇಯಸ್ಸಿಗೆ ಹಾತೊರೆಯುತ್ತದೆ. ವೇದಕಾಲದ ಋಷಿಗಳಿಗೆ ಈ ಸ್ಥಿತಿ ಬಂದಿತು. ಆಗ ಅವರು ಅದುವರೆಗಿನ ತಮ್ಮ ಮನಸ್ಸು ಒಂದು ಕರ್ಮದಲ್ಲೇ ನಿರತವಾಗಿತ್ತು ಎಂಬುದನ್ನು ಕಂಡರು; ಜ್ಞಾನಕರ್ಮದಿಂದ ಮುಂದಿನ ಕರ್ತವ್ಯವನ್ನು ಗ್ರಹಿಸಿದರು; ವಿಚಾರದಲ್ಲಿ ತೊಡಗಿದರು. ಈ ವಿಚಾರಗಳ ಸಾರ ಅವರು ನಮಗೆ ಬಿಟ್ಟುಹೋಗಿರುವ ಸಂಪತ್ತಿನ ಬಹುಮುಖ್ಯವಾದ ಉಪನಿಷತ್ತುಗಳಲ್ಲಿದೆ.
ಈ ಉಪನಿಷತ್ತುಗಳನ್ನು ರಚಿಸಿದವರೂ ಋಷಿಗಳೇ. ಇವರು ಜನಸಾಮಾನ್ಯರು ಆವರೆಗೆ ಕಲಿತಿದ್ದ ವಿದ್ಯೆಯನ್ನು ಅಪರಾ ವಿದ್ಯೆ ಎಂದು ಕರೆದರು. ತಾವು ಉಪಾಸನೆ ಮಾಡಿದ ಹೊಸ ವಿದ್ಯೆಯನ್ನು ಪರಾ ವಿದ್ಯೆ ಎಂದು ಕರೆದರು.
ಮೊದಲನೆಯದಾಗಿ ಅಗ್ನಿ, ವಾಯು, ಇಂದ್ರ, ಮಿತ್ರ, ವರುಣ, ವಿಷ್ಣು, ರುದ್ರ, ಸೋಮ ಎಂಬಿತ್ಯಾದಿ ಹೆಸರುಗಳಿಂದ ಕರೆದು; ಈ ಸತ್ವಗಳೆಲ್ಲ ಒಂದೇ ಸತ್ವದ ಹಲವು ರೂಪಗಳು ಎಂಬುದನ್ನು ಕಂಡುಕೊಂಡರು. ಈ ವಿಚಾರ ನಿಶ್ಚಯವಾದ ಮೇಲೆ, ಇವರು ಆ ಒಂದೇ ತತ್ತ್ವದ ಸ್ವರೂಪವೇನು, ಅದನ್ನು ಕಾಣುವುದು ಹೇಗೆ, ಅದನ್ನು ಸೇರುವುದು ಹೇಗೆ ಮುಂತಾಗಿ ವಿಚಾರ ನಡೆಸಿದರು. ಹತ್ತಾರು ರೀತಿಯ ಮನಸ್ಸಿನ ಈ ಜನ ಮಾಡಿದ ಯೋಚನೆ ತೀರಾ ಸಹಜವಾಗಿ ಹತ್ತಾರು ದಾರಿಯಲ್ಲಿ ಹರಿಯಿತು. ಅದರ ಉಕ್ತಿ ಹತ್ತಾರು ಸಂಗತಿಯನ್ನು ಪ್ರಕಟಗೊಳಿಸಿತು.
ಈ ಪ್ರಕ್ರಿಯೆ ಹಲವು ಶತಮಾನಗಳ ಕಾಲ ನಡೆದಿರಬೇಕು. ಈ ವೈಚಾರಿಕ ಚಿಂತನ ಮಂಥನದ ಮೊತ್ತವನ್ನು ಸಂಪ್ರದಾಯವು ವೇದದ ಜ್ಞಾನ ಕಾಂಡ ಎಂದು ಕರೆದಿದೆ. ಹಿಂದಿನದು ಯಜ್ಞಗಳನ್ನು ಕುರಿತ ಭಾಗ – ಕರ್ಮ ಕಾಂಡ. ಜ್ಞಾನ ಕಾಂಡದ ವಿಷಯ ಜ್ಞಾನ.
ಉಪನಿಷತ್ತುಗಳ ಮೊದಲ ಹಂತದಲ್ಲಿರುವುದು ಪ್ರಾರ್ಥನೆ. ಆ ಬಳಿಕ ಉಪದೇಶ.
ಇಂದ್ರ, ವರುಣ, ಆರ್ಯಮ, ಬೃಹಸ್ಪತಿ, ಉರುಕ್ರಮನಾದ ವಿಷ್ಣು, ಬ್ರಹ್ಮ ಮೊದಲಾದವರನ್ನು ಪ್ರಾರ್ಥಿಸಿದ ನಂತರ; ಗುರು ಶಿಷ್ಯರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸಲಾಗುತ್ತದೆ. ಅನಂತರ;
“ಪೂರ್ಣ ತೇಜಸ್ಸಿನಿಂದ ಉದಿಸಿದ ಮಹಾಪ್ರಭು ನನಗೆ ಮೇಧಸ್ಸನ್ನು ಅನುಗ್ರಹಿಸಲಿ. ನನಗೆ ಅಮರವಾದ ಶ್ರುತಿ ಲಭಿಸಲಿ. ದೇಹ ದೃಢವಾಗಿ ಕಾರ್ಯೋನ್ಮುಖವಾಗಿರಲಿ. ನನ್ನ ಮಾತು ಇಂಪಾಗಿರಲಿ, ರುಚಿಯಾಗಿರಲಿ. ನಾನು ನನ್ನ ಕಿವಿದುಂಬಿ ಕೇಳುವಂತೆ ಅನುಗ್ರಹಿಸು” ಎಂಬ ಪ್ರಾರ್ಥಿಸಲಾಗುತ್ತದೆ.
ಹಾಗೆಯೇ;
“ಪ್ರಭುವೇ! ನನಗೆ ಉಣ್ಣೆದುಂಬಿದ ಕುರಿಗಳು ಮತ್ತು ದನಗಳನ್ನೊಳಗೊಂಡ ಸಂಪತ್ತನ್ನು ಅನುಗ್ರಹಿಸು. ಸುದೈವವು ನನಗೆ ತಡ ಮಾಡದೆ ಸರ್ವಕಾಲಕ್ಕೂ ಅನ್ನ ಪಾನ ಪಶು ಹಾಗೂ ವಸ್ತ್ರಗಳನ್ನು ಹೆಚ್ಚುಹೆಚ್ಚಾಗಿ ತರುತ್ತಿರಲಿ. ಹಾಗೆ ತರುವುದು ನಿಲ್ಲದೆ ಇರಲಿ. ಸದಾಕಾಲ ಬ್ರಹ್ಮಚಾರಿ ವಿದ್ಯಾರ್ಥಿಗಳು ನನ್ನ ಬಳಿಗೆ ವಿದ್ಯೆ ಕಲಿಯಲು ಬರುತ್ತಿರಲಿ. ದೂರದಿಂದ, ಎಲ್ಲ ಕಡೆಯಿಂದ ಬಹುಸಂಖ್ಯೆಯಲ್ಲಿ ಬರುವ ಇವರು ಸಮಶಮ ಉಳ್ಳವರಾಗಿರಲಿ” ಎಂಬ ಪ್ರಾರ್ಥನೆಯೂ ಇದೆ.
(ಆಕರ : ಅಂತರಗಂಗೆ | ಮಾಸ್ತಿ ವೆಂಕಟೇಶ ಅಯ್ಯಂಗಾರ್)