
ಒಂದು ಝೆನ್ ಕಪ್ಪೆ, ತನ್ನ ಶಿಷ್ಯ ಕಪ್ಪೆಗೆ ಪ್ರಕೃತಿಯಲ್ಲಿನ ಸಮತೋಲನದ ಬಗ್ಗೆ ಪಾಠ ಮಾಡುತ್ತಿತ್ತು.
“ನೋಡು, ನೊಣ ಹೇಗೆ ಆ ಹುಳುವನ್ನು ಬಾಯಿಗೆ ಹಾಕಿಕೊಂಡಿತು, ಈಗ ನೋಡು (ನುಂಗುತ್ತಾ) ನಾನು ಹೇಗೆ ಆ ನೊಣವನ್ನು ತಿಂದು ಮುಗಿಸಿದೆ… ಇದೆಲ್ಲಾ ಪ್ರಕೃತಿಯ ನಿಯಮ.”
“ಕೊಂದು ಬದುಕುವುದು ಸಾಧು ಅಲ್ಲ ಅಲ್ಲವೆ?” ಕೇಳಿತು ಶಿಷ್ಯ ಕಪ್ಪೆ.
“ಅದು ಹೇಗೆ ಅಂದ್ರೆ……”
ಮಾತು ಮುಗಿಸುವುದರ ಮೊದಲೇ, ಒಂದು ಹಾವು ಝೆನ್ ಕಪ್ಪೆಯನ್ನು ನುಂಗಲು ಶುರು ಮಾಡಿತು.
“ಹೇಗೆ, ಹೇಗೆ…?” ಕೂಗಿ ಕೇಳಿತು ಶಿಷ್ಯ ಕಪ್ಪೆ.
“ಹೇಗಂದ್ರೆ…. ಅದು ಸರಿಯೋ ತಪ್ಪೋ ಅಂತ ನಿರ್ಧಾರ ಆಗೋದು, ನೀನು ಸಮಸ್ಯೆಯನ್ನ ಒಳಗಿಂದ ನೋಡ್ತಿದೀಯೋ ಅಥವಾ ಹೊರಗಿಂದ ನೋಡ್ತಿದೀಯೋ ಅನ್ನೋದರ ಮೇಲೆ….”
ಹಾವಿನ ಹೊಟ್ಟೆಯೊಳಗಿಂದ ಸಣ್ಣ ದನಿ ಹೊರ ಬಂತು.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)