ಜಗತ್ತಿನಾದ್ಯಂತ ವಿವಿಧ ಜನಪದಗಳು ಹೆಣೆದ ಸೃಷ್ಟಿಕಥೆಗಳು ತಮ್ಮ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿವೆ. ಸ್ವಾರಸ್ಯಕರವಾದ ಈ ಕಥನಗಳ ಗರ್ಭದಲ್ಲಿ ಅಡಗಿರುವ ಗೂಢಾರ್ಥಗಳನ್ನು ಹೆಕ್ಕಿ ತೆಗೆಯುವುದು ಓದಿನ ಒಂದು ಚೆಂದದ ಅನುಭವವೇ ಸರಿ.
ಸಂಗ್ರಹ ಮತ್ತು ಅನುವಾದ : ಕೆ.ಎಸ್.ಇಂದ್ರಾಣಿ
ಮೊದಲು ಹಾಲಿನ ದೊಡ್ಡ ಹನಿ ಇತ್ತು.
ದೇವರು ಇಳಿದು ಬಂದು ಕಲ್ಲನ್ನು ಸೃಷ್ಟಿಸಿದ.
ಕಲ್ಲು ಕಬ್ಬಿಣವನ್ನು ಸೃಷ್ಟಿಸಿತು
ಕಬ್ಬಿಣ ಬೆಂಕಿಯನ್ನು ಸೃಷ್ಟಿಸಿತು
ಬೆಂಕಿ ನೀರನ್ನು ಸೃಷ್ಟಿಸಿತು
ದೇವರು ಎರಡನೇ ಬಾರಿ ಭೂವಿಗಿಳಿದ
ಪಂಚ ಭೂತಗಳ ಬೆಸೆದು ಮನುಷ್ಯನನ್ನು ಸೃಷ್ಟಿಸಿದ
ಆದರೆ ಮನುಷ್ಯಗರ್ವಿಷ್ಠನಾದ
ಆಗ ದೇವರು ಆತನನ್ನು ಕುರುಡನಾಗಿಸಿದ
ಕುರುಡುತನ ಅವನನ್ನು ಸೋಲಿಸಿತು
ಆದರೆ ಕುರುಡತನಕ್ಕೆ ಗರ್ವ ಬಂದಾಗ
ದೇವರು ನಿದ್ರೆಯನ್ನು ಸೃಷ್ಟಿಸಿದ.
ನಿದ್ರೆ ಅಂಧತ್ವವನ್ನು ಸೋಲಿಸಿತು
ನಿದ್ರೆಗೆ ಗರ್ವ ಬಂದಿತು.
ಆಗ ದೇವರು ಚಿಂತೆಯನ್ನು ಸೃಷ್ಟಿಸಿದ
ಚಿಂತೆ ನಿದ್ರೆಯನ್ನು ಸೋಲಿಸಿತು
ಚಿಂತೆಗೆ ಗರ್ವ ಬಂದಿತು.
ಆಗ ದೇವರು ಸಾವನ್ನು ಸೃಷ್ಟಿಸಿದ
ಆದರೆ ಸಾವು ಗರ್ವಿಷ್ಠ ಆದಾಗ
ದೇವರು ಮೂರನೇ ಬಾರಿ
ಗುನೋ – ಅನಂತವಾಗಿ ಇಳಿದು ಬಂದು ಸಾವನ್ನು ಸೋಲಿಸಿದ
(ಒಂದು ಫುಲಾನಿ ಕಥೆ | ಮಾಲಿ)