ಬುಲ್ಲೇ ಶಾಹ್ ಮೊಘಲ್ ಅವಧಿಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಜೀವಿಸಿದ್ದ ಸೂಫೀ ಸಂತ ಕವಿ. ಸೈಯದ್ ಅಬ್ದುಲ್ಲಾಹ್ ಶಾಹ್ ಖಾದ್ರಿ ಈತನ ಮೂಲ ಹೆಸರು. ಪುಖ್ತೋ (ಅಥವಾ ಪಷ್ತೋ) ಹಾಗೂ ಪಂಜಾಬಿ ಭಾಷೆಗಳಲ್ಲಿ ‘ಕಾಪಿ’ ಶೈಲಿಯಲ್ಲಿ ಅನೇಕ ಗೀತೆಗಳನ್ನು ರಚಿಸಿದ್ದಾರೆ.
ಕೆ. ಸಚ್ಚಿದಾನಂದನ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಬುಲ್ಲೆ , ನಮಾಜಿನ ಚಾಪೆಯನ್ನು ದಿಟ್ಟಿಸಿದ
ಚಾಪೆ ಹೊತ್ತಿಕೊಂಡು ಉರಿಯಿತು.
ಬುಲ್ಲೆ
ಜಪಮಣಿಗೆ ಬೆರಳು ಮುಟ್ಚಿಸಿದ,
ಜಪಮಣಿ ಹಾವಾಗಿ ಭುಸುಗುಟ್ಟಿತು.
ಬುಲ್ಲೆ
ಕಾಜಿಯತ್ತ ಬೆರಳು ಮಾಡಿದ,
ಕಾಜಿ ಕಬ್ಬಿಣದ ಕಂಬವಾಗಿ ಎದ್ದು ನಿಂತ.
ಬುಲ್ಲೆ
ಮಸೀದಿಯತ್ತ ಹೆಜ್ಜೆ ಹಾಕಿದ,
ಮಸೀದಿ ಖರ್ಜೂರದ ಮರವಾಗಿ ಸ್ವಾಗತಿಸಿತು.
ಬುಲ್ಲೆ
ಪವಿತ್ರ ಕೊಳದಲ್ಲಿ ಕಾಲಿಟ್ಟ,
ಕೊಳ ಹೂವಿನ ಹಾಸಿಗೆಯಾಯ್ತು.
ಬುಲ್ಲೆ
ಪೇಟೆಯಲ್ಲಿ ಸುತ್ತಾಡಿದ,
ಬಡ್ಡಿ ವ್ಯವಹಾರ ಮಾಡುವವರೆಲ್ಲ ಹಂದಿಗಳಾದರು.
ಬುಲ್ಲೆ
ಗೋಧಿಯ ಹೊಲದಲ್ಲಿ ತಾಳ ಹಾಕುತ್ತ ಹಾಡಲು ಶುರು ಮಾಡಿದ,
ಜಮೀನುದಾರರು ಉಳುವ ಎತ್ತಾದರು.
ಬುಲ್ಲೆ
ಕಾಡಿನಲ್ಲಿ ಕುಣಿಯತೊಡಗಿದ,
ಸಿಂಹಗಳು ಬಾಲ ಅಲ್ಲಾಡಿಸತೊಡಗಿದವು
ಬುಲ್ಲೆ
ಊರ ಪೂಜಾರಿಗಳ ದಾರಿಗೆ ಅಡ್ಡ ಬಂದ,
“ಎಲ್ಲ ಕಲ್ಲುಗಳೂ ದೇವರೇ ಒಂದಕ್ಕೇ ಏಕೆ ಪೂಜೆ?”
ಬುಲ್ಲೆ
ಹಜ್ ಗೆ ಹೊರಟವರನ್ನ ನಿಲ್ಲಿಸಿ ಕೇಳಿದ,
“ಮೆಕ್ಕಾ ಎದೆಯಲ್ಲಿರುವಾಗ, ಹಡಗಿಗೆ ಯಾಕೆ ಖರ್ಚು?”
ಬುಲ್ಲೆ ಘೋಷಿಸಿದ, “ನಾನೊಂದು ಹೆಣ್ಣು”;
ಊರ ಗಂಡಸರೆಲ್ಲ ತಮ್ಮ ಪಂಜರ ಹಾರಿ ಬಂದರು.
ಬುಲ್ಲೆ ಎದೆ ತಟ್ಟಿ ಚೀರಿದ, “ನಾನೊಬ್ಬ ಕಾಫಿರ್”;
ಮುಸಲ್ಮಾನರೆಲ್ಲ ದೇವತೆಗಳಾದರು.
ಬುಲ್ಲೆ ವಿಷದ ಬಟ್ಟಲನ್ನ ತುಟಿಗೆ ಕೊಂಡೊಯ್ದ,
ವಿಷವೆಲ್ಲ ಜೇನ ಹನಿಯಾಯಿತು.
ಬುಲ್ಲೆ ಸಾರಿದ
“ಪ್ರೇಮವೇ ದಾರಿ, ಪ್ರೇಮವೇ ಗುರಿ”;
ಮನುಷ್ಯರು, ಮೃಗಗಳು ಹೂವಿನಲ್ಲಿ ತೊಯ್ದರು.
ಪುಸ್ತಕಗಳು ಮಲ್ಲಿಗೆಯ ಬಳ್ಳಿಗಳಾದವು,
ಅವುಗಳ ಎಲೆಗಳಿಂದ ನಕ್ಷತ್ರಗಳು ಉರಿದು ಬಿದ್ದವು.
ಬುಲ್ಲೆ ಪವಾಡಗಳ ಸರಣಿ ನಿಲ್ಲುತ್ತಲೇ ಇಲ್ಲ.