ಸಂಕಲ್ಪ ಶಕ್ತಿಗೆ ಮುನ್ನ ಇಚ್ಛಾಶಕ್ತಿ ಹುಟ್ಟಿಕೊಳ್ಳುತ್ತದೆ. ಆದರೆ ಅದಕ್ಕೂ ಮುನ್ನ ಹುಟ್ಟುವುದು ಆಲೋಚನೆ. ನಾವು ಪ್ರತಿ ಕ್ಷಣ ಪ್ರತಿಯೊಂದನ್ನೂ ನಾವು ಬಲ್ಲ ಮತ್ತೊಂದಕ್ಕೆ ಬೆಸೆದುಕೊಳ್ಳುತ್ತೇವೆ. ನಮ್ಮ ಸುಪ್ತ ಕಾಮನೆಗಳಿಗೆ – ಇಚ್ಛೆಗೆ ಪೂರಕವಾಗಿ ಹುಟ್ಟಿಕೊಳ್ಳುವ ಯೋಚನೆಗಳೆಲ್ಲವೂ ಸಂಕಲ್ಪಗಳೇ ~ ಆನಂದಪೂರ್ಣ
ಸೃಷ್ಟಿಯಲ್ಲಿ ಅಸಾಧ್ಯವಾದದ್ದು ಏನೂ ಇಲ್ಲ. ಶೂನ್ಯದಲ್ಲಿ ಹುಟ್ಟು ಹಾಗೂ ಶೂನ್ಯವಾಗುವ ಸಾವುಗಳೇ ಸಾಧ್ಯವಾಗಿರುವ ಸೃಷ್ಟಿಯಲ್ಲಿ ಅಸಾಧ್ಯತೆಯ ಪರಿಕಲ್ಪನೆಯೇ ಪರಿಹಾಸ. ಆದರೆ ಈ ಸಾಧ್ಯಾಸಾಧ್ಯತೆಗಳು ಸಾಧಕರನ್ನು ಅವಲಂಬಿಸಿರುತ್ತದೆ ಅನ್ನುವುದು ಕೂಡ ಅಷ್ಟೇ ಸತ್ಯ. ಮಾಡಹೊರಟವರು ಯಾರು ಅನ್ನುವುದರ ಮೇಲೆ ಆ ಕೆಲಸ ಆಗುತ್ತದೆಯೋ ಇಲ್ಲವೋ ಎಂಬುದನ್ನು ಹೇಳಬಹುದು. ದುರ್ಬಲ ಮನಸ್ಸಿನ ಜನರಿಂದ ಸಾಧನೆ ಸಾಧ್ಯವಿಲ್ಲ. ಅಥವರು ದೈಹಿಕವಾಗಿ ಬಲವಾಗಿದ್ದರೂ ದೇಹಬಲ ಬಳಸಿ ಮಾಡಬಹುದಾದ ಕೆಲಸಗಳನ್ನು ಮಾಡಲು ಅಸಮರ್ಥರಾಗಿರುತ್ತಾರೆ. ಆದರೆ ಮನೋಬಲವುಳ್ಳವರು ದೈಹಿಕವಾಗಿ ದುರ್ಬಲವಾಗಿದ್ದರೂ ಸವಾಲಿನ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ. ಇದಕ್ಕೆ ಕಾರಣ ಅವರ ಸಂಕಲ್ಪ ಶಕ್ತಿ.
ಸಂಕಲ್ಪ ಎಂದರೆ ಯಾವುದಾದರೂ ಕೆಲಸಕ್ಕೆ ಮುನ್ನ ನಡೆಸಿಕೊಳ್ಳುವ ಮಾನಸಿಕ ಸಿದ್ಧತೆ. `ಇದನ್ನು ನಾನು ಮಾಡುತ್ತೇನೆ’ ಎಂದು ನಮಗೆ ನಾವೇ ಮಾಡಿಕೊಳ್ಳುವ ಪ್ರಮಾಣ. ಇದಕ್ಕೆ ಮುನ್ನ ನಮ್ಮಲ್ಲಿ ಏನನ್ನಾದರೂ ಮಾಡಬೇಕು ಎಂದು ಇಚ್ಛಿಸುವ ಶಕ್ತಿ ಹುಟ್ಟಬೇಕು. ಅದು ಇಚ್ಛಾಶಕ್ತಿ. ನಮ್ಮಲ್ಲಿ ಮಹತ್ವಾಕಾಂಕ್ಷೆಯೇ ಇಲ್ಲದೆ, ಇಚ್ಛೆಯೇ ಇಲ್ಲದೆ ಸಂಕಲ್ಪ ಹುಟ್ಟಲು ಸಾಧ್ಯವಿಲ್ಲ.
ಮೈಮೇಲೆ ಹುಲಿ ಎಗರಿದಾಗ ತಾನು ಬದುಕಬೇಕು ಅನ್ನುವ ಇಚ್ಛೆ ಹೊಂದುವವನು ಹೋರಾಡುವ ಸಂಕಲ್ಪ ಮಾಡುತ್ತಾನೆ. ಬದುಕಬೇಕೆನ್ನುವ ಇಚ್ಛೆ ಎಲ್ಲಿಯವರೆಗೆ ಆತನಲ್ಲಿ ಪ್ರಬಲವಾಗಿರುತ್ತದೆಯೋ ಹೊರಾಟದ ಸಂಕಲ್ಪವೂ ಅಷ್ಟೇ ಪ್ರಬಲವಾಗಿರುತ್ತದೆ. ಮತ್ತು ಅಂಥ ಸಂಕಲ್ಪಶಕ್ತಿಯುಳ್ಳವರು ಗೆದ್ದು, ಉಳಿದುಕೊಳ್ಳುತ್ತಾರೆ. ಇಲ್ಲವಾದಲ್ಲಿ, ನಮಗಿರುವಂಥವೇ ಅಂಗಾಂಗಗಳುಳ್ಳ, ನಮ್ಮ ಮಿತಿಯಷ್ಟೇ ಮಿತಿಗಳುಳ್ಳ ಮತ್ತೊಬ್ಬ ಮನುಷ್ಯ ಅದು ಹೇಗೆ ಹುಲಿಯನ್ನು ಮಣಿಸಲು ಸಾಧ್ಯವಾಗುತ್ತದೆ? ನಾವು ಸೋಲುತ್ತೇವೆ, ಅವರು ಗೆಲ್ಲುತ್ತಾರೆ ಎಂದಾದರೆ ನಮ್ಮನ್ನು ಸೋಲಿಸುವ, ಅವರನ್ನು ಗೆಲ್ಲಿಸುವ ಶಕ್ತಿ ಯಾವುದು? ನಮಗಿಂತ ಹೆಚ್ಚು ದಿಟ್ಟವಾಗಿ ಬದುಕಲು ಪ್ರೇರಣೆ ನೀಡುವುದು ಏನು? ಅದು ಸಂಕಲ್ಪ ಶಕ್ತಿ. ಇದು ಅರಿವಾದರೆ, ನಮ್ಮ ಗೆಲುವಿಗೆ ಇರುವ ಒಂದು ಮುಖ್ಯ ತಡೆ ನಿವಾರಣೆಯಾದಂತೆಯೇ.
ಸಂಕಲ್ಪ ಶಕ್ತಿಗೆ ಮುನ್ನ ಇಚ್ಛಾಶಕ್ತಿ ಹುಟ್ಟಿಕೊಳ್ಳುತ್ತದೆ. ಆದರೆ ಅದಕ್ಕೂ ಮುನ್ನ ಹುಟ್ಟುವುದು ಆಲೋಚನೆ. ನಾವು ಪ್ರತಿ ಕ್ಷಣ ಪ್ರತಿಯೊಂದನ್ನೂ ನಾವು ಬಲ್ಲ ಮತ್ತೊಂದಕ್ಕೆ ಬೆಸೆದುಕೊಳ್ಳುತ್ತೇವೆ. ನಮ್ಮ ಸುಪ್ತ ಕಾಮನೆಗಳಿಗೆ – ಇಚ್ಛೆಗೆ ಪೂರಕವಾಗಿ ಹುಟ್ಟಿಕೊಳ್ಳುವ ಯೋಚನೆಗಳೆಲ್ಲವೂ ಸಂಕಲ್ಪಗಳೇ. ಹಾಗೆ ಹುಟ್ಟುವ ಪ್ರತಿಯೊಂದೂ ಸಂಕಲ್ಪ ಅದು ಪ್ರಯೋಜನಕರವಾದದ್ದಾ ಅಥವಾ ಅಪ್ರಯೋಜನಕರವಾದದ್ದಾ ಎನ್ನುವುದು ನಮ್ಮ ಜನ್ಮಜನ್ಮಗಳ ಸಂಸ್ಕಾರದ ಮೇಲೆ. ಅದು ನಮ್ಮ ಮನೋನೈರ್ಮಲ್ಯದ ಮೇಲೆ ಆಧಾರಪಟ್ಟಿರುತ್ತದೆ. ಆದ್ದರಿಂದ, ಅದಕ್ಕೆ ಇರುವ ಒಂದು ಶಕ್ತಿ ಪರಧಿಯ ಮೇಲೆ ನಮ್ಮ ಆಲೋಚನೆಯ ವಿಧಾನ ನಾಲ್ಕು ವಿಧದಲ್ಲಿ ಸಾಗುತ್ತಿರುತ್ತದೆ. ವಿನಾಶಕರವಾದ ಸಂಕಲ್ಪಗಳು, ನಕಾರಾತ್ಮಕವಾದ ಸಂಕಲ್ಪಗಳು, ಸಕಾರಾತ್ಮಕರವಾದ ಸಂಕಲ್ಪಗಳು ಹಾಗೂ ಅದ್ಭುತವಾದ ಸಂಕಲ್ಪಗಳು.
ಈ ನಾಲ್ಕರಲ್ಲಿ ನಾವು ಎಂಥದ್ದನ್ನು ಇಚ್ಛಿಸಬೇಕು, ಯಾವ ಬಗೆಯ ಸಂಕಲ್ಪವನ್ನು ನಮ್ಮದಾಗಿಸಿಕೊಳ್ಳಬೇಕು ಅನ್ನುವ ಆಯ್ಕೆ ನಮ್ಮ ಕೈಲೇ ಇರುತ್ತದೆ. ಉದಾಹರಣೆಗೆ, ಯಾರೂ ಜನ್ಮತಃ ಕಳ್ಳರಾಗಿರುವುದಿಲ್ಲ. ಹೊಟ್ಟೆ ಪಾಡಿಗೆ ಕಳ್ಳತನ ಮಾಡಲು ಶುರುವಿಟ್ಟೆ ಎನ್ನಬಹುದು. ಆದರೆ ಅದು ಕಳ್ಳನ ನಕಾರಾತ್ಮಕ ಸಂಕಲ್ಪದ ಫಲಶ್ರುತಿಯೇ ಆಗಿರುತ್ತದೆ. ಹೊಟ್ಟೆಗೆ ಕಷ್ಟ ಇರುವವರೆಲ್ಲ ಕಳ್ಳರೇ ಆಗಿದ್ದರೆ ಇಂದು ಜಗತ್ತಿನಲ್ಲಿ ಈಗ ಇರುವುದಕ್ಕಿಂತ ನೂರು ಪಟ್ಟು ಕಳ್ಳರು ಇರಬೇಕಿತ್ತು. ಆ ಕಳ್ಳ ಇರುವ ಪರಿಸ್ಥಿತಿಯಲ್ಲೇ ಇರುವ ಮತ್ತೊಬ್ಬ, ಏನಾದರೂ ಮಾಡಿ ಆಹಾರ ಗಳಿಸಬೇಕು, ಕೆಲಸ ಹುಡುಕಿಕೊಳ್ಳಬೇಕು ಎಂದು ಸಂಕಲ್ಪಿಸಿ, ಕೊನೆ ಪಕ್ಷ ಆ ಹೊತ್ತಿನ ಊಟ ದಕ್ಕುವಂತೆ ಕೂಲಿಯನ್ನಾದರೂ ಮಾಡುವನು. ಯಾವಾಗ ಆತ ಎಷ್ಟು ಕಷ್ಟವಾದರೂ ದುಡಿಯುವೆನು ಎಂದು ಸಂಕಲ್ಪಿಸುತ್ತಾನೋ ಆಗ ಅವನಿಗೆ ಕೆಲಸ ದೊರಕಿ, ಊಟವೂ ದೊರೆಯುವುದು. ಅದು ಆತನ ಸಂಕಲ್ಪದ ಫಲ.
ಆದ್ದರಿಂದ, ನಮ್ಮ ಸಂಕಲ್ಪಶಕ್ತಿಯಿಂದ ನಾವು ಆಯ್ಕೆಮಾಡಿಕೊಂಡ ನಮ್ಮ ಜೀವನವನ್ನು ಸಫಲಗೊಳಿಸಬೇಕಾದರೆ ನಮ್ಮಲ್ಲಿ ಮುಖ್ಯವಾಗಿ ಇರಬೇಕಾದುದು `ಸಂಕಲ್ಪ ಶುದ್ಧಿ’. ಈ ಸಂಕಲ್ಪಶುದ್ಧಿ ಇದ್ದರೆ ಮಾತ್ರವೇ ಸಂಕಲ್ಪ ಶಕ್ತಿ ಬರುತ್ತದೆ. ಸಂಕಲ್ಪ ಶಕ್ತಿ ಇದ್ದರೆ ಮಾತ್ರವೇ ಸಂಕಲ್ಪ ಸಿದ್ಧಿ ಉಂಟಾಗುತ್ತದೆ. ಸಂಕಲ್ಪಶುದ್ಧಿಯು ಸಹನೆಯುಳ್ಳವರಿಗೆ ಮಾತ್ರ ಸಾಧ್ಯವಾಗುವಂಥದ್ದು. ತಮ್ಮಲ್ಲಿ ಉದಿಸಿದ ಇಚ್ಛೆಯ ಸರಿ ತಪ್ಪುಗಳನ್ನು, ಸಾಧಕ ಬಾಧಕಗಳನ್ನೂ ಆಲೋಚಿಸುವ ಸಹನೆ ಇರಬೇಕು. ಅನಂತರ ಸೂಕ್ತ ಸಮಯಕ್ಕಾಗಿ ಕಾಯಬೇಕು ಅಥವಾ ಸೂಕ್ತ ಸಮಯ – ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನಾದರೂ ಪಡೆಯಬೇಕು.
ಯಾವುದಾದರೂ ಒಂದು ಸಂಗತಿಯನ್ನು ಪದೇ ಪದೇ ಆಡುತ್ತಿದ್ದರೆ ಅದು ನಿಜವೇ ಆಗಿಬಿಡುತ್ತದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಹಾಗೂ ಬಹಳ ಬಾರಿ ಅನುಭವಿಸಿರುತ್ತೇವೆ. ಬಹಳ ಸಲ ಇದು ನಕಾರಾತ್ಮಕ ಸಂಗತಿಗಳ ಸಂದರ್ಭದಲ್ಲಿಯೇ ನಿಜವಾಗುವುದು ಸೋಜಿಗವಲ್ಲವೆ? ಇದಕ್ಕೆ ಕಾರಣವಿದೆ. ನಮ್ಮ ಸಂಕಲ್ಪ ಶಕ್ತಿ ಸಕಾರಾತ್ಮಕ ಸಂಗತಿಗಳಿಗಿಂತ ನಕಾರಾತ್ಮಕ ಸಂಗತಿಗಳಲ್ಲೆ ಹೆಚ್ಚು ಪ್ರಬಲವಾಗಿರುತ್ತದೆ. ನಾವು ಒಳಿತಾಗಲಿ ಎಂದು ಹಾರೈಸುವುದಕ್ಕಿಂತ ಹೆಚ್ಚು ತೀವ್ರವಾಗಿ ಕೆಡುಕಾಗಬಹುದೇನೋ ಎಂದು ಭಯ ಪಡುತ್ತೇವೆ. ಒಳಿತಿನ ನಿರೀಕ್ಷೆಗಿಂತ ಕೆಡುಕಿನ ಭಯವೇ ನಮ್ಮನ್ನು ಆಳುತ್ತದೆ. ಇದಕ್ಕೆ ಕಾರಣ ನಮ್ಮ ದೌರ್ಬಲ್ಯ. ಇದು, ಒಳಿತನ್ನು ಅಪ್ಪಿಕೊಳ್ಳಲಾಗದ ದೌರ್ಬಲ್ಯ. ಗೆಲುವಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದೌರ್ಬಲ್ಯ. ಈ ದೌರ್ಬಲ್ಯವೇ ವಿನಾಶಕಾರಿ ಸಂಕಲ್ಪಗಳಿಗೆ ಕಾರಣವಾಗುವುದು. ಆದ್ದರಿಂದ ಒಳಿತಿನ ಧೈರ್ಯ, ಗೆಲ್ಲುವ ಇಚ್ಛಾಶಕ್ತಿಯನ್ನೂ ಅದಕ್ಕೆ ಹಿನ್ನೆಲೆಯಾಗಿ ಸಚ್ಚಿಂತನೆಗಳನ್ನೂ ರೂಢಿಸಿಕೊಳ್ಳಬೇಕು. ಆಗ ಮಾತ್ರವೇ ಸಂಕಲ್ಪ ಶುದ್ಧಿ, ಸಂಕಲ್ಪ ಶಕ್ತಿಗಳನ್ನು ಹಿಂಬಾಲಿಸಿದ ಸಂಕಲ್ಪ ಸಿದ್ಧಿ ಉಂಟಾಗುವುದು.