ಹನಿಯಂತಲ್ಲ, ಕಡಲಿನಂತಿರಬೇಕು; ಬೆರಕೆಯಲ್ಲೂ ಬದಲಾಗದಂತೆ…

ಹನಿಗಳು ಇಂಗಿಹೋಗುತ್ತವೆ. ಅಥವಾ ಇನ್ಯಾವುದರಲ್ಲೋ ಬೆರೆತು, ತಾವೂ ಅದರಂತಾಗಿ ತಮ್ಮನ್ನು ಕಳೆದುಕೊಳ್ಳುತ್ತವೆ. ಅಂಥಾ ಅಗಣಿತ ಹನಿಗಳಿಂದಾದ ಕಡಲು ಮಾತ್ರ ಬತ್ತುವುದೂ ಇಲ್ಲ, ಕಳೆಯುವುದೂ ಇಲ್ಲ. ಎಷ್ಟೆಲ್ಲ ನದಿಗಳು ಬಂದು ಬೆರೆತರೂ ಅದು ಬದಲಾಗುವುದೂ ಇಲ್ಲ!

fareed

: ಸಾಕಿ

ನಿ ಹನಿ ಸೇರಿ ಹಳ್ಳ. ಹಳ್ಳಗಳು ತೊರೆಯಾಗಿ, ಭೋರ್ಗರೆವ ನದಿಯಾಗಿ ಹರಿದು ಬಂದು ಕಡಲು ಸೇರುತ್ತದೆ. ಈ ಪಯಣದಲ್ಲಿ ನದಿ ಅದೆಷ್ಟು ಊರುಗಳ ಬೆಟ್ಟ, ಗುಡ್ಡ, ಕಾಡುಗಳ ಮೂಲಕ ಹಾಯ್ದು ಬಂದಿರುತ್ತದೆಯಲ್ಲವೇ? ಹಾಗಾದರೆ ಅದು ಅದೆಷ್ಟು ಸತ್ವಗಳ ತನ್ನೊಳಗೆ ಮೈಗೂಡಿಸಿಕೊಂಡಿರಬಹುದು!

ಕಾಡಿನ ಗಿಡ ಮೂಲಿಕೆಗಳ ಔಷಧೀಯ ಗುಣಗಳನ್ನೂ, ನಾಡಿನ ಪ್ರೇಮಿಗಳ ಪಿಸುಮಾತುಗಳನ್ನೂ, ಅನ್ನ ಬೆಳೆವ ರೈತನ ಆನಂದ ಬಾಷ್ಪವನ್ನೂ ಒಟ್ಟೊಟ್ಟಿಗೆ ಹೊತ್ತು ಹರಿಯುತ್ತದೆ ನದಿ. ನದೀತೀರಗಳು ನಾಗರೀಕತೆಗಳನ್ನು ಬೆಳೆಸಿದವು. ಬೃಹತ್ ನಗರಗಳು ನದಿಯ ಕೃಪೆಯಿಂದ ಉದಿಸಿದವು. ಅದೇ ನದಿಯ ಪ್ರವಾಹವು ನಗರಗಳನ್ನು ಅಳಿಸಿಯೂ ಹಾಕಿತು. ಹೀಗೆ ಹರಿಯುತ್ತಾ, ಬೆಳೆಯುತ್ತಾ, ಕಟ್ಟುತ್ತಾ, ಕೆಡವುತ್ತಾ ತನ್ನಿಚ್ಛೆಯಂತೆ ಹರಿಯುವ ಅವೆಷ್ಟೋ ನದಿಗಳು ಬಂದು ಕಡಲು ಸೇರುತ್ತವೆ. ಹಾಗಂತ ಕಡಲು ಯಾವತ್ತಾದರೂ ತನ್ನತನವನ್ನು ಬಿಟ್ಟು ಕೊಟ್ಟಿದೆಯೇ? ನದಿ ಅದೆಷ್ಟು ದೊಡ್ಡದಾಗಿದ್ದರೂ ಕಡಲು ಸದಾ ಕಡಲಾಗಿಯೇ ಉಳಿದಿರುತ್ತದೆ ಅಲ್ಲವೇ? ತನ್ನ ಪ್ರಶಾಂತತೆ ಮತ್ತು ಭೋರ್ಗರೆತವನ್ನು ಸಮದೂಗಿಸುತ್ತಾ ಗಂಭೀರವಾಗಿಯೇ ಇರುತ್ತದೆ; ಅಲ್ಲವೆ?

ಸೂಫಿ ಸಂತಕವಿ ಫರೀದುದ್ದೀನ್ ಅತ್ತಾರ್, ಹರಿದು ಕೂಡುವ ಹನಿಗಳ ತತ್ತ್ವ ಅದೇನೇ ಇದ್ದರೂ ಕಡಲು ಮಾತ್ರ ಕಡಲಾಗಿರುವುದು ಎನ್ನುವ ಮೂಲಕ ಹೇಳುವುದು ಇದನ್ನೇ. ಹನಿಗಳು ಇಂಗಿಹೋಗುತ್ತವೆ. ಅಥವಾ ಇನ್ಯಾವುದರಲ್ಲೋ ಬೆರೆತು, ತಾವೂ ಅದರಂತಾಗಿ ತಮ್ಮನ್ನು ಕಳೆದುಕೊಳ್ಳುತ್ತವೆ, ಬದಲಾಗಿಹೋಗುತ್ತವೆ. ಆದರೆ ಅಂಥಾ ಅಗಣಿತ ಹನಿಗಳಿಂದಾದ ಕಡಲು ಬತ್ತುವುದೂ ಇಲ್ಲ, ಕಳೆಯುವುದೂ ಇಲ್ಲ. ಎಷ್ಟೆಲ್ಲ ನದಿಗಳು ಬಂದು ಬೆರೆತರೂ ಅದು ಬದಲಾಗುವುದೂ ಇಲ್ಲ!

ನಾವು ಕೂಡ ಜೀವನದಲ್ಲಿ ಹಲವು ಬಗೆಯ ಜನರ ಸಂಪರ್ಕಕ್ಕೆ ಬರುತ್ತೇವೆ. ಅವೆಷ್ಟೋ ಜನರ ಆಲೋಚನೆಗಳು, ತತ್ವ, ಸಿದ್ಧಾಂತಗಳು ನದಿಗಳಂತೆ ನಮ್ಮ ತಲೆ ಹೊಕ್ಕುತ್ತವೆ. ಕೆಲವೊಮ್ಮೆ ಯಾರದೋ ಮಾತಿನ ಮೋಡಿಗೆ ಸಿಕ್ಕು ನಮ್ಮತನವನ್ನೇ ಕಳಕೊಂಡು ಬಿಡುತ್ತೇವೆ. ಅಲ್ಲಿಗೆ ನಮ್ಮ ಸ್ವಂತವಾಗಿ ಯೋಚಿಸುವ ಶಕ್ತಿಯೂ ಇಲ್ಲವಾಗಿ ಬಿಡುತ್ತದೆ. ಹಾಗಾಗಬಾರದು ಎಂದಾದರೆ ನಾವು ಕಡಲಾಗಬೇಕು. ಪ್ರತಿಯೊಂದನ್ನೂ ಕಡಲಿನಂತೆ ಸ್ವೀಕರಿಸಬೇಕು. ನಂತರ ಅವು ನಮ್ಮೊಳಗೆ ಮಥನವಾಗಬೇಕು. ಅಮೇಲಷ್ಟೇ ಅದನ್ನು ಉಳಿಸಿಕೊಳ್ಳಲು ಅಥವಾ ತಿರಸ್ಕರಿಸಲು ನಾವು ಸಮರ್ಥರಾಗುತ್ತೇವೆ ಮತ್ತು ನಮ್ಮತನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೇವೆ.

Leave a Reply