ಪಿರಾಮಸ್ ಮತ್ತು ಥಿಸ್ಬೆಯ ದುರಂತ ಪ್ರೇಮ ಕಥೆ :  ಗ್ರೀಕ್ ಪುರಾಣ ಕಥೆಗಳು  ~ 28

ಗ್ರೀಕ್ ಪುರಾಣ ಕಥನಗಳಲ್ಲಿ ಅತ್ಯಂತ ದಾರುಣ ಪ್ರೇಮ ಕಥೆ ಎಂದರೆ ಪಿರಾಮಸ್ ಮತ್ತು ಥಿಸ್ಬೆಯದು. ಕಾರಣವೇ ಇಲ್ಲದೆ, ಕೇವಲ ತಪ್ಪು ತಿಳುವಳಿಕೆಯಿಂದ ಈ ಇಬ್ಬರೂ ತಮ್ಮನ್ನು ತಮ್ಮ ಕೈಯಾರೆ ಕೊಂದುಕೊಂಡು ಕೊನೆಯಾಗುತ್ತಾರೆ. ಮುಂದೆ ಇವರ ಕಥನವನ್ನು ಹೋಲುವ ಸಾಲುಸಾಲು ದುರಂತ ಪ್ರೇಮ ಕಥನಗಳನ್ನು ನಾವು ವಿಶ್ವ ಸಾಹಿತ್ಯದಲ್ಲಿ ಕಾಣುತ್ತೇವೆ.

ಪಿರಾಮಸ್ ಮತ್ತು ಥಿಸ್ಬೆ, ಬ್ಯಾಬಿಲಾನ್ ನಗರದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ನೆರೆಹೊರೆಯ ವ್ಯಾಜ್ಯದಿಂದ ಎರಡೂ ಮನೆಯವರಲ್ಲಿ ವೈಷಮ್ಯ ಬೆಳೆದಿತ್ತು. ಈ ಕೌಟುಂಬಿಕ ವೈಷಮ್ಯ ಯುವಪ್ರೇಮಿಗಳ ನಡುವೆ ಗೋಡೆಯಾಗಿ ಎದ್ದುನಿಂತಿತ್ತು. ಗೋಡೆ ಎಂದರೆ, ಅಕ್ಷರಶಃ ಗೋಡೆಯೇ. ಈ ಪ್ರೇಮಿಗಳು ಒಬ್ಬರನ್ನೊಬ್ಬರು ನೋಡುವುದಾಗಲೀ ಮಾತನಾಡುವುದಾಗಲೀ ಸಾಧ್ಯವೇ ಆಗದಂತೆ ಇವರಿಬ್ಬರ ಮನೆಗಳ ನಡುವೆ ಎತ್ತರದ ಗೋಡೆಯನ್ನು ಕಟ್ಟಲಾಗಿತ್ತು.  

ಈ ಸಂಕಷ್ಟವನ್ನು ನಿವಾರಿಸುವಂತೆ ಪಿರಾಮಸ್ ಮತ್ತು ಥಿಸ್ಬೆ ಪ್ರೇಮ – ಸೌಂದರ್ಯಗಳ ಅಧಿದೇವತೆ ಅಫ್ರೋದಿತೆಯನ್ನು ಪ್ರಾರ್ಥಿಸಿದರು. ಅಫ್ರೋದಿತೆಯು ಕರುಣೆ ತೋರಿ ಅವರ ಕೋಣೆಗಳ ನಡುವಿನ ಗೋಡೆಯಲ್ಲಿ ಬಿರುಕು ಮೂಡುವಂತೆ ಮಾಡಿದಳು. ಈ ಬಿರುಕಿನ ಮೂಲಕ ಪ್ರೇಮಿಗಳು ಒಬ್ಬರನ್ನೊಬ್ಬರು ನೋಡಲು, ಮಾತನಾಡಲು ಸಾಧ್ಯವಾಯಿತು.

ಆದರೆ ಎಷ್ಟು ದಿನಗಳ ಕಾಲ ಹೀಗೆ ಕಾಲ ತಳ್ಳುವುದು? ತಮ್ಮ ಪ್ರೇಮವನ್ನು ಮುಂದಿನ ಹಂತಕ್ಕೆ ತೆಗೆದುಕೊಂದು ಹೋಗಲು ಎರಡೂ ಕುಟುಂಬಗಳು ಸುತಾರಾಂ ಒಪ್ಪುವುದಿಲ್ಲ! ಹೀಗೆಂದು ಯೋಚಿಸಿದ ಪಿರಾಮಸ್ ಮತ್ತು ಥಿಸ್ಬೆ, ಮನೆಯಿಂದ ಓಡಿಹೋಗಿ ಮದುವೆಯಾಗುವ ತೀರ್ಮಾನಕ್ಕೆ ಬಂದರು. ಅದರಂತೆ, ಮರುದಿನ ರಾತ್ರಿ ಊರ ಹೊರಗಿನ ಸ್ಮಶಾನದ ಬಳಿಯ ಮಲ್ ಬೆರ್ರಿ ಮರದ ಬಳಿ ಸಂಧಿಸುವುದಾಗಿ ನಿಕ್ಕಿ ಮಾಡಿಕೊಂಡರು.

ಅದರಂತೆ ಮರುದಿನ ಮನೆಯ ಎಲ್ಲರೂ ಉಂಡು ಮಲಗಿದ ಮೇಲೆ ಥಿಸ್ಬೆ ಮೇಲುಹೊದಿಕೆಯನ್ನು ಹೊದ್ದು ಮನೆಯಿಂದ ಹೊರಟಳು. ಮನೆಯ ಜನರಲ್ಲಿ ಯಾರಿಗಾದರೂ ಎಚ್ಚರವಾಗಿ, ತಾನು ಹೊರಡಲು ಅಡ್ಡಿಯಾಗಬಾರದೆಂದು ಅವಳು ಸ್ವಲ್ಪ ಮುಂಚಿತವಾಘಿಯೇ ಹೊರಟಳು. ಹಾಗೂ ಬೇಗನೆ ಸ್ಮಶಾನದ ಬಳಿಯ ಮಲ್ ಬೆರ್ರಿ ಮರದ ಬುಡಕ್ಕೆ ಬಂದಳು. ಬೆಳದಿಂಗಳು ಚೆಲ್ಲುತ್ತಿತ್ತು. ಅಲ್ಲಿಯೇ ಇದ್ದ ಬಂಡೆಯ ಮೇಲೆ ಕುಳಿತು ಪಿರಾಮಸನ ಕನಸು ಕಾಣುತ್ತಿರುವಾಗ ಸ್ವಲಪ್ ದೂರದಲ್ಲೊಂದು ಸಿಂಹ ಬರುತ್ತಿರುವುದು ಅವಳಿಗೆ ಕಂಡಿತು. ಆ ಸಿಂಹದ ಮುಖಕ್ಕೆ ರಕ್ತ ಮೆತ್ತಿಕೊಂಡಿರುವುದು ಥಿಸ್ಬೆಗೆ ಕಂಡಿತು. ಗಾಬರಿಯಿಂದ ಅಡಗಿಕೊಳ್ಳಲು ಎದ್ದು ಓಡಿದಳು. ಹಾಗೆ ಓಡುವಾಗ ಆಕೆಯ ಮೇಲುಹೊದಿಕೆ ಕೆಳಗೆ ಬಿತ್ತು. ಥಿಸ್ಬೆ ಅದನ್ನು ಲೆಕ್ಕಿಸದೆ ಎದ್ದು ಕೊಳದ ಆಚೆ ಬದಿ ಅಡಗಿಕೊಂಡಳು.

ಸಿಂಹ ಕೊಳಕ್ಕೆ ಬಂದು, ನೀರು ಕುಡಿದು. ಒಮ್ಮೆ ಘರ್ಜಿಸಿ, ಮರಳಿ ಹೊರಟಿತು. ಹೊರಡುವಾಗ ಕಾಲ್ತೊಡರಿದ ಥಿಸ್ಬೆಯ ಮೇಲು ಹೊದಿಕೆಯನ್ನು ರೋಷದಿಂದ ಪರಚಿ ಹೊಸಕಿತು. ಆ ಭರದಲ್ಲಿ ಮೇಲು ಹೊದಿಕೆಯು ಹರಿದುಹೋಯಿತು.

ಭಯದಲ್ಲಿ ಅಡಗಿಕೊಂಡಿದ್ದ ಥಿಸ್ಬೆಗೆ ಈ ಯಾವುದೂ ಕಾಣುತ್ತಿರಲಿಲ್ಲ. ಸಿಂಹದ ಘರ್ಜನೆ ಆಕೆಯ ಎದೆ ನಡುಗಿಸಿತ್ತು. ಪಿರಾಮಸ್ ಬರುವ ಹೊತ್ತು… ಆತನಿಗೆ ಏನಾದರೂ ಆದರೆ ಎಂಬ ಆತಂಕ ಕಾಡಿ, ಅವಳು ಅಲ್ಲೇ ಎಚ್ಚರದಪ್ಪಿ ಕುಸಿದಳು.

ಇತ್ತ ಪಿರಾಮಸ್ ತನ್ನ ನಲ್ಲೆಯನ್ನು ಸೇರಲು ಓಡಿ ಬರುತ್ತಿದ್ದವನು, ಮಲ್ ಬೆರ್ರಿ ಮರದ ಬಳಿಯಿಂದಲೇ ಸಿಂಹದ ಘರ್ಜನೆ ಕೇಳಿಸಿ ಗಾಬರಿಯಾದ. ಥಿಸ್ಬೆಯ ಬಗ್ಗೆ ಆತಂಕಿತನಾದ. ಕಾಲುಗಳ ವೇಗ ಹೆಚ್ಚಿಸಿಕೊಂಡು, ಸಿಂಹವೇನಾದರೂ ಎದುರಾದರೆ ಎಂಬ ಮುಂಜಾಗ್ರತೆಯಿಂದ ಚಾಕುವನ್ನು ಮುಂದೆ ಮಾಡಿಕೊಂಡು ಮರವನ್ನು ತಲುಪಿದ. ಆದರೆ ಅಲ್ಲಿ ಅವನು ಕಂಡಿದ್ದೇನು? ಹರಿದು ಹೋಸ ಥಿಸ್ಬೆಯ ಮೇಲು ಹೊದಿಕೆ! ಓಡುವ ಧಾವಂತದಲ್ಲಿ ಥಿಸ್ಬೆಗೆ ಕಲ್ಲಿಗೆ ಎಡವಿ ಸೋರಿದ್ದ ರಕ್ತದ ಹನಿಗಳು!!

ಸಿಂಹವು ಥಿಸ್ಬೆಯನ್ನು ಕೊಂದು ಎಳೆದುಕೊಂಡು ಹೋಗಿದೆ ಎಂದೇ ಭಾವಿಸಿದ ಪಿರಾಮಸ್. ತನ್ನ ಪ್ರೇಮಿಯನ್ನು ಅಗಲಿ ಕ್ಷಣ ಕಾಲವೂ ಬದುಕಿರಲಾರೆ ಎಂದು ದುಃಖಿಸುತ್ತಾ, ಚಾಕುವಿನಿಂದ ತನ್ನ ಎದೆಗೆ ಇರಿದುಕೊಂಡು ಪ್ರಾಣ ತೊರೆದ.

ಇತ್ತ ಥಿಸ್ಬೆಗೆ ಪ್ರಜ್ಞೆ ಮರಳಿತು. ಚಂದ್ರ ಸಾಕಷ್ಟು ಮೇಲೆ ಬಂದಿದ್ದ. ಗಡಬಡಿಸಿ ಎದ್ದು ಮಲ್ ಬೆರ್ರಿ ಮರದ ಬಳಿ ಓಡಿದಳು. ಅಲ್ಲಿ ಪಿರಾಮಸ್ ನೆಲದ ಮೇಲೆ ಬಿದ್ದಿದ್ದ. ಎದೆಯಿಂದ ರಕ್ತ ಹರಿಯುತ್ತಿತ್ತು. ಅವನು ಥಿಸ್ಬೆಯ ಮೇಲು ಹೊದಿಕೆಯನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದು, ಮುಖದ ಮೇಲೆ ಹೊದ್ದುಕೊಂಡಿದ್ದ.

ಥಿಸ್ಬೆಗೆ ಅಲ್ಲೇನು ನಡೆಯಿತು ಎಂಬುದು ತಿಳಿದುಹೋಯ್ತು. ತನ್ನ ವಿಧಿಗೆ ದುಃಖಿಸುತ್ತಾ, ಅಸಹಾಯಕತೆಯಿಂದ ಅಳುತ್ತಾ ಪಿರಾಮಸನ ದೇಹವನ್ನು ಮುದ್ದಿಸಿದಳು. ಆತನ ಮೈಯಲ್ಲಿ ಕುಟುಕು ಜೀವ ಉಳಿದಿತ್ತು. ಥಿಸ್ಬೆಯ ಸ್ಪರ್ಶಕ್ಕೆ ಆತ ಕಣ್ಬಿಟ್ಟ. ‘ಥಿಸ್ಬೆ!’ ಎಂದು ಅಚ್ಚರಿಯಿಂದ, ತುಂಬು ಪ್ರೇಮದಿಂದ ಕೂಗಿದ. ಅವಳು ಅವನ ಮುಖವನ್ನು ಬೊಗಸೆಯಲ್ಲಿ ಹಿಡಿದಳು. ಪಿರಾಮಸ್ ಶಾಶ್ವತವಾಗಿ ಕಣ್ಮುಚ್ಚಿದ.

ಪ್ರೇಮಿಯ ಜೀವ ಕಣ್ಣೆದುರೇ ಹೊರಟುಹೋದುದನ್ನು ಕಂಡ ಥಿಸ್ಬೆಯ ಆಕ್ರಂದನ ಮುಗಿಲು ಮುಟ್ಟಿತು. ತನಗಾಗಿ ಪಿರಾಮಸ್ ಪ್ರಾಣ ತೊರೆದ. ನನ್ನ ಪ್ರೇಮ ಅವನಿಗಿಂತ ಕಡಿಮೆಯದಲ್ಲ, ನಾನು ಅವನನ್ನು ಬಿಟ್ಟು ಬದುಕಿರಲಾರೆ ಎಂದು ರೋದಿಸಿದಳು. ಅದೇ ಚಾಕುವಿನಿಂದ ತನ್ನನ್ನು ಇರಿದುಕೊಂಡು, ಅವನ ಎದೆಯ ಮೇಲೆ ಒರಗಿದಳು.

ಹೀಗೆ ಪಿರಾಮಸ್ ಮತ್ತು ಥಿಸ್ಬೆ ಕೊನೆಯಾದರು. ಅವರಿಬ್ಬರ ಎದೆಗಳಿಂದ ಹರಿದ ರಕ್ತ ಮಲ್ ಬೆರ್ರಿ ಮರದ ಬೇರುಗಳಿಗೆ ಇಳಿಯಿತು. ಅಲ್ಲಿಯವರೆಗೆ ಮಲ್ ಬೆರ್ರಿ ಹಣ್ಣುಗಳು ಬೆಳ್ಳಗೆ ಬಿಳುಚಿಕೊಂಡಂತೆ ಇರುತ್ತಿದ್ದವು. ಅಲ್ಲಿಂದ ಮುಂದೆ ಪ್ರೇಮಿಗಳ ರಕ್ತವುಂಡು ಕಡುಕೆಂಪು ಬಣ್ಣಕ್ಕೆ ತಿರುಗಿದವು. ಈ ಮರ ಪಿರಾಮಸ್ ಮತ್ತು ಥಿಸ್ಬೆಯ ಅಮರ ಪ್ರೇಮಕ್ಕೆ ಸಾಕ್ಷಿಯಾಯಿತು. ಮತ್ತು ತನ್ನ ಹಣ್ಣುಗಳ ಬಣ್ಣದ ಮೂಲಕ ಅವರ ದುರಂತ ಕಥೆಯನ್ನು ಸಾರಿ ಹೇಳತೊಡಗಿತು.

Leave a Reply