ಪ್ರೇಮಿಯನ್ನು ಪಡೆಯಲು ನೀನು ಹುಡುಕಬೇಕಾಗಿಯೇ ಇಲ್ಲ!

ಪ್ರೇಮವನ್ನು ಹುಡುಕಿದರೆ ಎಲ್ಲೂ ಸಿಗದು; ಎಂದೇ ಪ್ರೇಮಿಯನ್ನೂ. ಪ್ರೇಮ ನಮ್ಮೊಳಗಿನ ಬೆಳಕು. ಅದನ್ನು ಹೊರಗೆಲ್ಲಿ ಹುಡುಕುವುದು.

ಜೀವನವೇ ಒಂದು ಹುಡುಕಾಟ. ಸಂಪತ್ತಿಗಾಗಿ, ನೆಮ್ಮದಿಗಾಗಿ, ಕಳೆದುಕೊಂಡ ಸಂಬಂಧಗಳ ಕೊಂಡಿಗಾಗಿ ಜೀವನವಿಡೀ ಹುಡುಕುತ್ತಲೇ ಇರುತ್ತೇವೆ. ನೈಲ್ ನದಿಯ ಮೂಲ, ಅಪರೂಪದ ಆರ್ಕಿಡ್ ಹೂಗಳು, ಸಾಗರದಾಳದ ಜೀವ ವೈವಿಧ್ಯ, ಪರ್ವತಗಳ ತುತ್ತ ತುದಿ ಹುಡುಕಿ ಹೊರಟ ಸಾಹಸಿಗರನ್ನ ನಾವು ಕಂಡಿದ್ದೇವೆ. ಭೂಮಿಯಾಚೆಗಿನ ವಿಸ್ಮಯ, ಅನ್ಯ ಗ್ರಹಗಳು, ತಾರಾಮಂಡಲ, ವಿಜ್ಞಾನದ ಅತಿ ಕಠಿಣ ಸವಾಲುಗಳಿಗೂ ಮನುಷ್ಯನ ಹುಡುಕಾಟದಲ್ಲಿ ಉತ್ತರ ದೊರೆತವು. ಮನುಷ್ಯ ಯಾವುದರ ಹುಡುಕಾಟದಲ್ಲಿ ಇದ್ದಾನೋ ಅದರ ಮೇಲೆ ಪೂರ್ತಿ ನಂಬಿಕೆ ಮತ್ತು ಆತ್ಮವಿಶ್ವಾಸ ಇಟ್ಟು ಹುಡುಕಿದರೆ ಅವು ಸಿಕ್ಕೇ ಸಿಗುತ್ತವೆ. ಆದರೆ…

ಪ್ರೇಮದ ವಿಷಯದಲ್ಲಿ ಹಾಗಲ್ಲ. ಪ್ರೇಮವನ್ನು ಹುಡುಕಿದರೆ ಎಲ್ಲೂ ಸಿಗದು; ಎಂದೇ ಪ್ರೇಮಿಯನ್ನೂ. ಪ್ರೇಮ ನಮ್ಮೊಳಗಿನ ಬೆಳಕು. ಅದನ್ನು ಹೊರಗೆಲ್ಲಿ ಹುಡುಕುವುದು? ಅದಕ್ಕೆ ಸೂಫಿ ಸಂತಕವಿ ಹಕೀಮ್ ಸನಾಯಿ ಹೇಳುವುದು ‘ಬೇರೆ ವಸ್ತುಗಳು ಹುಡುಕುವುದರಿಂದ ಸಿಗುತ್ತವೆ. ಪ್ರೇಮಿಯ ವಿಷಯದಲ್ಲಿ ಮಾತ್ರ ಒಂದು ಸೋಜಿಗ… ಪ್ರೇಮಿಯನ್ನು ಪಡೆಯಲು ನೀನು ಹುಡುಕಬೇಕಾಗಿಯೇ ಇಲ್ಲ!’ ಎಂದು.

ಪ್ರೇಮಿಸಲು ಒಬ್ಬ ವ್ಯಕ್ತಿ ಬೇಕು ಎಂದು ಯಾರಾದರೂ ಹುಡುಕುತ್ತಿದ್ದರೆ ಅವರು ನಿಜಕ್ಕೂ ಏನನ್ನು ಹುಡುಕುತ್ತಿದ್ದಾರೆ ಎಂಬುದನ್ನೇ ಅರಿತಿರುವುದಿಲ್ಲ. ಹುಡುಕಿದರೆ ದಕ್ಕದ ಏಕೈಕ ವಸ್ತು ಅದು ಪ್ರೇಮ ಮಾತ್ರ. ‘ಪ್ರೇಮಿಗಳು ಎಲ್ಲೋ ಕೊನೆಗೊಮ್ಮೆ ಭೇಟಿಯಾಗುವುವವರಲ್ಲ. ಅವರು ಆರಂಭದಿಂದಲೂ ಜೊತೆಯಾಗಿಯೇ ಇರುವವರು’ ಎಂದು ಮತ್ತೊಬ್ಬ ಸೂಫಿ ಕವಿ ರೂಮಿ ಹೇಳುತ್ತಾನೆ. ಹಾಗಾಗಿ ನನಗೊಬ್ಬ ಪ್ರೇಮಿ ಬೇಕು ಎಂದಾಗಲೀ, ನನ್ನನ್ನು ಯಾರೂ ಪ್ರೀತಿಸುವುದಿಲ್ಲ ಎಂದಾಗಲೀ ಹಲುಬುವುದನ್ನು ಬಿಟ್ಟು, ನಮ್ಮೊಳಗಿನ ಪ್ರೇಮವನ್ನು ಕಂಡುಕೊಳ್ಳೋಣ. ಹಾಗಾದಲ್ಲಿ ಖಂಡಿತವಾಗಿ ಪ್ರೇಮಿಯ ಸಾಕ್ಷಾತ್ಕಾರವೂ ಆಗುವುದು.

Leave a Reply