ರೂಮಿ ಹೇಳಿದ್ದು : ನಿನ್ನ ಯಾತನೆಗಳು ಅವನ ಸಂದೇಶ, ಎಚ್ಚರದಲ್ಲಿ ಅನುಭವಿಸು

ಬದುಕಿನ ಪಯಣದಲ್ಲಿ ದಾರಿ ತಪ್ಪಿದಂತೆಲ್ಲ ನಮ್ಮ ಸುತ್ತ ಯಾತನೆಗಳು ಹುಟ್ಟಿಕೊಳ್ಳುತ್ತವೆ. ಆ ಯಾತನೆಗಳು ಪುನಃ ಸರಿ ದಾರಿಗೆ ಮರಳಲು ಇರುವ ಸಂದೇಶಗಳು ಎಂಬುದು ರೂಮಿಯ ಮಾತಿನ ಸಂಕ್ಷಿಪ್ತ ಅರ್ಥ  ~ ಸಾಕಿ

IMG-20180601-WA0034.jpg

ಭೂಮಿಯಲ್ಲಿ ಕಷ್ಟ ಕೋಟಲೆಗಳು ಇಲ್ಲದ ಮನುಷ್ಯರೇ ಇಲ್ಲ ಎಂದು ಹೇಳಬಹುದು. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸಂಕಷ್ಟಗಳನ್ನ ಎದುರಿಸಿಯೇ ಇರುತ್ತೇವೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ನಾವು ದೇವರ ಮೊರೆ ಹೋಗುತ್ತೇವೆ. ಹರೆಕೆಗಳನ್ನು ಹೊತ್ತು ಮಂದಿರ ಮಸೀದಿಗಳನ್ನು ಎಡತಾಕುತ್ತೇವೆ. ಇದು ನಮಗೆ ಮಾನಸಿಕ ನೆಮ್ಮದಿಯನ್ನು ಕೊಡುವುದಂತು ನಿಜ. ಆದರೆ ಇವುಗಳಿಂದ ನಿಜಕ್ಕೂ ನಮ್ಮ ಮೂಲ ಸಮಸ್ಯೆ ಪರಿಹಾರ ಆಗುತ್ತವೆಯೇ? ಸಮಸ್ಯೆಗಳನ್ನು ಅದು ಇರುವ ಹಾಗೆಯೇ ಗಮನಿಸಿ ಅದಕ್ಕೆ ತಕ್ಕದಾದ ಪರಿಹಾರ ಕಂಡುಕೊಳ್ಳದಿದ್ದರೆ ಅದು ನಮ್ಮನ್ನು ಬಿಟ್ಟು ಹೋಗುವುದೇ ಇಲ್ಲ.

‘ನಿನ್ನ ಯಾತನೆಗಳು ಅವನ ಸಂದೇಶ. ಎಚ್ಚರದಲ್ಲಿ ಅನುಭವಿಸು’ ಎಂಬ ರೂಮಿಯ ಮಾತು ಮೇಲ್ನೋಟಕ್ಕೆ ದೇವರ ಮೇಲೆ ಭಾರ ಹಾಕಿ ಸುಮ್ಮನಿರು ಅಂತ ಅನ್ನಿಸುವುದು ಸಹಜ. ಆದರೆ ರೂಮಿ ಹೇಳುವುದು ‘ಸಂದೇಶ’ ಎಂದು, ಬದಲಾಗಿ ಭಯ ಬೀಳಿಸುವ ‘ಎಚ್ಚರಿಕೆ’ ಎಂದಲ್ಲ. ಸಂದೇಶಗಳನ್ನ ಗಮನವಿಟ್ಟು ಕೇಳಿರಿ, ನೋಡಿರಿ. ಆಗ ಈ ಯಾತನೆಗಳು ಯಾಕೆ ಹುಟ್ಟಿಕೊಂಡವು ಎಂಬ ಮೂಲ ಕಾರಣ ನಮಗೆ ಗೋಚರಿಸುತ್ತದೆ. ಚಿಕಿತ್ಸೆ ನೀಡಬೇಕಾಗಿರುವುದು ಅಲ್ಲಿಗೆ.

ಬದುಕಿನ ಪಯಣದಲ್ಲಿ ದಾರಿ ತಪ್ಪಿದಂತೆಲ್ಲ ನಮ್ಮ ಸುತ್ತ ಯಾತನೆಗಳು ಹುಟ್ಟಿಕೊಳ್ಳುತ್ತವೆ. ಆ ಯಾತನೆಗಳು ಪುನಃ ಸರಿ ದಾರಿಗೆ ಮರಳಲು ಇರುವ ಸಂದೇಶಗಳು ಎಂಬುದು ರೂಮಿಯ ಮಾತಿನ ಸಂಕ್ಷಿಪ್ತ ಅರ್ಥ. ಪೌಲೊ ಕೊಯೆಲೋ ಅವರ ದಿ ಆಲ್ಕೆಮಿಸ್ಟ್ ಕಾದಂಬರಿಯಲ್ಲಿ ಹೇಳುವ ‘ಶಕುನಗಳ ಮಾತು’ ಕೂಡ ಒಂದು ವಿಧದಲ್ಲಿ ರೂಮಿಯ ಮಾತನ್ನು ಬೆಂಬಲಿಸುತ್ತದೆ. ಯಾತನೆಗಳನ್ನು, ಕಷ್ಟ ನಷ್ಟಗಳನ್ನು ಕಂಡು ದುಖಿತರಾಗಿ ಕೂರದೆ ಅವು ಹೇಳುವ ಸಂದೇಶಗಳನ್ನು ಸರಿಯಾಗಿ ಗಮನಿಸಿ ಕಾಲ ಕಾಲಕ್ಕೆ ನಮ್ಮ ಬದುಕಿನಲ್ಲಿ ಬದಲಾವಣೆಗಳನ್ನು ತಂದು ಕೊಂಡರೆ ನಮ್ಮಷ್ಟು ನೆಮ್ಮದಿವಂತರು ಯಾರೂ ಇರಲಾರರು.

Leave a Reply