ಕೈಗೂಡದ ವ್ಯರ್ಥ ಪ್ರಯತ್ನಕ್ಕೆ ‘ಸಿಸಿಫನ್ ಟಾಸ್ಕ್’ ಎಂದೂ ದಿನ ಬೆಳಗಾದರೆ ಹಿಂದಿನ ದಿನದ ಕೆಲಸಗಳನ್ನೇ ಪುನರಾವರ್ತಿಸಬೇಕಾದ ಏಕತಾನತೆಯನ್ನು ‘ಸಿಸಿಫನ್ ಮಾರ್ನಿಂಗ್’ ಎಂದೂ ಹೇಳುವುದು ರೂಢಿಯಲ್ಲಿದೆ. ಇದರ ಹಿಂದಿನ ಕಥೆ ಏನು ಗೊತ್ತೆ?
ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ
ಕಾರಿಂಥದ ದೊರೆ ಸಿಸಿಫಸ್ ಆ ಕಾಲದಲ್ಲಿ ಅತ್ಯಂತ ಚತುರಮತಿ ಎಂದು ಖ್ಯಾತಿ ಪಡೆದಿದ್ದ. ಇಂಥಾ ಸಿಸಿಫಸ್ ಕೂಡಾ ಮಹಾದೇವ ಸ್ಯೂಸನ ಅವಕೃಪೆಗೆ ಒಳಗಾಗುವ ಸನ್ನಿವೇಶ ಬಂದುಬಿಟ್ಟಿತು.
ಒಮ್ಮೆ ಸ್ಯೂಸ್ ದೇವನು ಹದ್ದಿನ ರೂಪ ಧರಿಸಿ ಅಸೋಪಸ್ ನದೀದೇವತೆಯ ಮಗಳು ಈಜಿನಾಳನ್ನು ಅಪಹರಿಸಿಕೊಂಡು ಹೋದ. ಈ ವಿಷಯ ಅದು ಹೇಗೋ ಸಿಸಿಫಸನಿಗೆ ತಿಳಿದುಹೋಯ್ತು. ಮಗಳನ್ನು ಹುಡುಕುತ್ತಾ ಕಾರಿಂಥಕ್ಕೆ ಬಂದ ಅಸೋಪಸ್’ಗೆ ಆತ ಸ್ಯೂಸ್ ದೇವನ ಗುಟ್ಟು ಬಿಟ್ಟುಕೊಟ್ಟ. ಆತನೇ ಈಜಿನಾಳನ್ನು ಅಪಹರಿಸಿದ್ದಾನೆಂದು ಹೇಳಿಬಿಟ್ಟ.
ಇದರಿಂದ ಸ್ಯೂಸ್ ದೇವನಿಗೆ ವಿಪರೀತ ಸಿಟ್ಟು ಬಂತು. ಸಿಸಿಫಸ್’ನನ್ನು ಅಧೋಲೋಕಕ್ಕೆ ಎಳೆದೊಯ್ಯುವಂತೆ ತನ್ನ ಬಂಟರಿಗೆ ಸೂಚಿಸಿದ. ಅಧೋಲೋಕದ ಅಧಿಪತಿ ಹೇಡೀಸ್, ಸ್ಯೂಸನ ಸಹೋದರ. ಆತನಿಗೆ ಸಂದೇಶ ಕಳುಹಿಸಿ, ಸಿಸಿಫಸನಿಗೆ ಉಗ್ರ ಶಿಕ್ಷೆ ನೀಡುವಂತೆ ಸೂಚಿಸಿದ. ಆದರೆ ಚತುರಮತಿ ಸಿಸಿಫಸ್ ಅದು ಹೇಗೋ ತನಗೆ ತೊಡಿಸಿದ್ದ ಕೈಕೋಳವನ್ನು ಹೇಡಿಸನಿಗೆ ತೊಡಿಸಿಬಿಟ್ಟ. “ನಿಮ್ಮ ಅಧಿಪತಿ ಈಗ ನನ್ನ ಅಧೀನ” ಎಂದು ಅಲ್ಲಿದ್ದವರನ್ನೆಲ್ಲ ಬೆದರಿಸಿ ತನ್ನ ಮನೆಗೆ ಎಳೆತಂದು ಸೆರೆಯಲ್ಲಿಟ್ಟ. ಅಧೋಲೋಕವೆಂದರೆ ಮೃತರ ಲೋಕ. ಅದರ ಅಧಿಪತಿಯೇ ಭುಮಿಗೆ ಬಂದುದರಿಂದ ಅವನು ಸಿಸಿಫಸನ ಸೆರೆಯಲ್ಲಿದ್ದಷ್ಟು ದಿನ ಒಂದೇಒಂದು ಸಾವು ಸಂಭವಿಸಲಿಲ್ಲ.
ಈ ಎಲ್ಲ ಪ್ರಕರಣದಿಂದ ಭೂಮಿಯಲ್ಲಿ ಅಸಮತೋಲನ ಉಂಟಾಯಿತು. ಕೊನೆಗೆ ಯುದ್ಧದೇವತೆ ಏರಿಸನೇ ತನ್ನ ಸೇನೆಯೊಡನೆ ಬಂದು, ಹೇಡೀಸನನ್ನು ಬಿಡಿಸಿಕೊಂಡು ಹೋದ. ಆಮೇಲೆ ಬಹಳ ಕಾಲದವರೆಗೆ ರಾಜ್ಯಭಾರ ಮಾಡಿಕೊಂಡಿದ್ದ ಸಿಸಿಫಸ್, ಕೊನೆಗೆ ತನ್ನ ಕಾಲ ತುಂಬಿ ತೀರಿಕೊಂಡ.
ಸಾಯುವಾಗಲೂ ಸಿಸಿಫಸ್ ಚಾತುರ್ಯ ತೋರಿದ, ತನ್ನ ಹೆಂಡತಿ ಮೆರೋಪಿಯ ಬಳಿ ತನಗೆ ಸರಿಯಾಗಿ ಸಂಸ್ಕಾರ ಮಾಡಬೇಡ ಎಂದು ಸೂಚಿಸಿದ. ಅದರಂತೆ ಮೆರೋಪಿ ಸಿಸಿಫಸ್ ಸತ್ತಮೇಲೆ ಸರಿಯಾಗಿ ಸಂಸ್ಕಾರ ಮಾಡಲಿಲ್ಲ. ನಿಯಮದ ಪ್ರಕಾರ ಸತ್ತವರು ಸರಿಯಾಗಿ ಅಂತ್ಯ ಸಂಸ್ಕಾರವಾಗದೆ ಅಧೋಲೋಕಕ್ಕೆ ಹೋದರೆ, ಅವರು ಭೂಮಿಗೆ ಮರಳಿ ಸರಿಯಾದ ಸಂಸ್ಕಾರ ಹೊಂದಲು ಅವಕಾಶವಿತ್ತು. ಇದನ್ನೇ ನೆವ ಮಾಡಿಕೊಂಡು ಭೂಮಿಗೆ ಮರಳಿದ ಸಿಸಿಫಸ್ ವಾಪಸ್ ಹೋಗಲೇ ಇಲ್ಲ. ಅವನ ಚಾಲಾಕಿತನಕ್ಕೆ ಬೇಸತ್ತ ಮೃತ್ಯುದೇವತೆಯೇ ಖುದ್ದಾಗಿ ಸಿಸಿಫಸನನ್ನು ಎಳೆದೊಯ್ಯಬೇಕಾಯಿತು.
ಹೀಗೆ ಅಂತಿಮವಾಗಿ ಅಧೋಲೋಕ ತಲುಪಿದ ಸಿಸಿಫಸನಿಗೆ ಅತ್ಯುಗ್ರ ಶಿಕ್ಷೆ ವಿಧಿಸಲಾಯಿತು. ಮೇಲ್ನೋಟಕ್ಕೆ ಸರಳವಾಗಿ ಕಾಣುವ ಈ ಶಿಕ್ಷೆ ಎಂಥವರನ್ನೂ ಮಾನಸಿಕವಾಗಿ ಹಿಂಡಿ ಹಿಪ್ಪೆ ಮಾಡಲು ಸಾಕು! ತಾಣು ಚತುರಮತಿಯೆಂಬ ಅಹಂಭಾವದಲ್ಲಿದ್ದ ಸಿಸಿಫಸನಿಗೆ ವಿಧಿಸಿದ ಈ ಶಿಕ್ಷೆ ಸರಿಯಾಗಿಯೇ ಇತ್ತು. ಅದು ಇಷ್ಟೇ; ಬಂಡೆಗಲ್ಲೊಂದನ್ನು ಕೆಳಗಿಂದ ತಳ್ಳಿಕೊಂಡು ಬೆಟ್ಟದ ಮೇಲೆ ಕೊಂಡೊಯ್ದು ಅಲ್ಲಿ ಇರಿಸುವುದು.
ಈ ಬಂಡೆಗಲ್ಲು, ಅಸೋಪಸ್ ತನ್ನ ಮಗಳು ಈಜಿನಾಳನ್ನು ಹುಡುಕಿಕೊಂಡು ಬಂದಾಗ ಸ್ಯೂಸ್ ಬಂಡೆಗಲ್ಲಾಗಿ ರೂಪ ತಳೆದು ಅವಳನ್ನು ಮರೆಮಾಚಿ ನಿಂತಿದ್ದನಲ್ಲ; ಅದೇ ಬಮಡೆಗಲ್ಲು. ಈಗ ಸಿಸಿಫಸ್ ತಳ್ಳಿಕೊಂಡು ಬೆಟ್ಟವೇರಿಸಬೇಕಿರುವುದು ಅದನ್ನೇ. ಸಿಸಿಫಸ್ ದಿನವಿಡೀ ಅದನ್ನು ತಳ್ಳಿಕೊಂಡು ಬೆಟ್ಟವೇರಿಸುತ್ತಿದ್ದ. ಅಲ್ಲಿ ಅದನ್ನು ಸ್ಥಾಪಿಸುತ್ತಿದ್ದ ಹಾಗೆಯೇ ಆ ಬಂಡೆಗಲ್ಲು ಉರುಳಿ ಕೆಳಗೆ ಬೀಳುತ್ತಿತ್ತು. ಪುನಃ ಸಿಸಿಫಸ್ ಅದನ್ನು ಬೆಟ್ಟದ ಮೇಲಕ್ಕೆ ಏರಿಸಬೇಕಿತ್ತು. ಎಷ್ಟೇ ಬಳಲಿಕೆಯಾದರೂ ದಣಿವಾದರೂ ಈ ಕೆಲಸದಿಂದ ಅವನಿಗೆ ಮುಕ್ತಿಯಿಲ್ಲ. ವಿಶ್ರಾಂತಿ ಪಡೆಯುವಂತೆಯೂ ಇಲ್ಲ. ಅವನಿದನ್ನು ಮಾಡಲೇಬೇಕು.
ಈಗಲೂ ಸಿಸಿಫಸ್ ಬಂಡೆಗಲ್ಲನ್ನು ಬೆಟ್ಟದ ಮೇಲಕ್ಕೆ ಏರಿಸುತ್ತಲೇ ಇರುತ್ತಾನೆ, ಅದು ಕೆಳಗೆ ಬೀಳುತ್ತಲೇ ಇರುತ್ತದೆ. ಅವನ ಈ ಕೆಲಸಕ್ಕೆ ಕೊನೆ ಎಂಬುದೇ ಇಲ್ಲ! ಹಾಗೆಂದೇ ಕೈಗೂಡದ ವ್ಯರ್ಥ ಪ್ರಯತ್ನಕ್ಕೆ ‘ಸಿಸಿಫನ್ ಟಾಸ್ಕ್’ ಎಂದೂ ದಿನ ಬೆಳಗಾದರೆ ಹಿಂದಿನ ದಿನದ ಕೆಲಸಗಳನ್ನೇ ಪುನರಾವರ್ತಿಸಬೇಕಾದ ಏಕತಾನತೆಯನ್ನು ‘ಸಿಸಿಫನ್ ಮಾರ್ನಿಂಗ್’ ಎಂದೂ ಹೇಳುವುದು ರೂಢಿಯಲ್ಲಿದೆ.
ಗ್ರೀಕ್ ಪುರಾಣದ ಕಥೆ ಓದಿಯೇ ಇಲ್ಲದ ನನಗೆ ಈ ಕಥೆಯನ್ನು ಓದಿ ಇನ್ನಷ್ಟು ಓದುವ ಮನಸ್ಸಾಯಿತು.ದನ್ಯವಾದಗಳು.