ನಾನೆಂಬ ಆಭಾಸವೇ ಮಾಯೆ : ಶಿವೋsಹಂ ಸರಣಿ

photoಒಂದು ಕಡೆ ಅಸ್ತಿತ್ವವಿದೆ, ಇರುವಿಕೆಯಿದೆ; ಇನ್ನೊಂದೆಡೆ ಶರೀರವಿದೆ. ಇವುಗಳ ಮಿಲನದಿಂದ ‘ನಾನು ಇದ್ದೇನೆ’ ಎನ್ನುವ ಭಾವವು ಜನ್ಮ ತಳೆಯುತ್ತದೆ. ಈ ‘ನಾನು’ ಎನ್ನುವುದರ ಆಭಾಸವೇ ಮಾಯೆ ಅನ್ನಿಸಿಕೊಳ್ಳುವುದು. ಈ ‘ನಾನು’ ಭಾವವೇ ಮಾಯೆ ಅನ್ನಿಸಿಕೊಳ್ಳುವುದು ~ Whosoever Ji

ದೇಹವನ್ನುಸೂಚಿಸಲು ಒಂದು ಆಧಾರ ಬೇಕಾಗುತ್ತದೆ. ಮತ್ತು ಆ ಆಧಾರವು ‘ನಾನು’ ಎಂಬುದಾಗಿರುತ್ತದೆ. ಈ ದೇಹವನ್ನು ಸೂಚಿಸಲು ನಾವು ‘ನಾನು’ ಎಂಬ ಪದವನ್ನು ಬಳಸುತ್ತೇವೆ. ಪ್ರತಿಯೊಂದು ರೂಪ, ಆಕಾರವನ್ನು ಸೂಚಿಸಲು ಒಮದು ಹೆಸರಿನ ಅವಶ್ಯಕತೆ ಇರುತ್ತದೆ. ಈ ದೇಹಕ್ಕೊಂದು ರೂಪವಿದೆ, ಆಕಾರವಿದೆಯಾದ್ದರಿಂದ ಇದರ ಗುರುತಿಗೊಂದು ಹೆಸರೂ ಅವಶ್ಯವಾಗುತ್ತದೆ.

‘ಇದ್ದೇನೆ’ ಎನ್ನುವುದು ಅಸ್ತಿತ್ವ. ‘ಇರುವಿಕೆ’ ಕೂಡ ಅಸ್ತಿತ್ವವೇ. ಈ ಇದ್ದೇನೆ ಅಥವಾ ಇರುವಿಕೆಯ ಕೇಂದ್ರದಲ್ಲಿ ದೇಹದ ಪರಿಧಿಯಿದೆ. ಒಳಗೆ ಅಸ್ತಿತ್ವವಿದೆ, ಹೊರಗೆ ದೇಹವಿದೆ.  ಕೇಂದ್ರ ಹಾಗೂ ದೇಹದ ಪರಿಧಿಯ ಮಿಲನವು ತಾದಾತ್ಮ್ಯ ಅವಸ್ಥೆಗೆ ಜನ್ಮ ನೀಡುತ್ತದೆ.

ಒಂದು ಕಡೆ ಅಸ್ತಿತ್ವವಿದೆ, ಇರುವಿಕೆಯಿದೆ; ಇನ್ನೊಂದೆಡೆ ಶರೀರವಿದೆ. ಇವುಗಳ ಮಿಲನದಿಂದ ‘ನಾನು ಇದ್ದೇನೆ’ ಎನ್ನುವ ಭಾವವು ಜನ್ಮ ತಳೆಯುತ್ತದೆ. ಈ ‘ನಾನು’ ಎನ್ನುವುದರ ಆಭಾಸವೇ ಮಾಯೆ ಅನ್ನಿಸಿಕೊಳ್ಳುವುದು. ಈ ‘ನಾನು’ ಭಾವವೇ ಮಾಯೆ ಅನ್ನಿಸಿಕೊಳ್ಳುವುದು.

ಈ ಆಭಾಸವನ್ನೇ ಉಪನಿಷತ್ತುಗಳಲ್ಲಿ ಅವಿದ್ಯೆಯೆಂದು ಕರೆದಿರುವುದು. ಇದರಿಂದಲೇ, ಈ ಆಭಾಸದಿಂದಲೇ ಭ್ರಮೆಯ, ವಿಭ್ರಮೆಯ, ಭ್ರಾಂತಿಯ ಜಗತ್ತು ಆರಂಭವಾಗುವುದು.  ಈ ‘ನಾನು’ವಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲ. ನನಗೊಂದು ಅಸ್ತಿತ್ವವಿದೆ, ನನ್ನ ನೈಜ ಇರುವಿಕೆ ಇದೆ, ನಾನು ಪ್ರತ್ಯೇಕವಾಗಿದ್ದೇನೆ – ನಾನು ಏನನ್ನು ಅರಿತಿದ್ದೇನೋ ಹಾಗೂ ಅನುಭವಿಸುತ್ತಿದ್ದೇನೋ ಅದು ನನಗಿಂತ ಭಿನ್ನವಾದುದಾಗಿದೆ.

ಇಲ್ಲಿಂದಲೇ ‘ನಾನು’, ಮತ್ತು ‘ನೀನು’ಗಳಾಟ ಶುರುವಾಗೋದು. ಇಲ್ಲಿಂದಲೇ ದ್ವೈತದ ಉದಯವಾಗೋದು. ವಾಸ್ತವದಲ್ಲಿ ‘ನಾನು’ ಎನ್ನುವ ಯಾವುದೇ ವಸ್ತುವಿಲ್ಲ. ‘ನಾನು’ವಿಗೆ ಯಾವುದೇ ಅಸ್ತಿತ್ವವಿಲ್ಲ. ‘ನಾನು’ ಎನ್ನುವುದು ಕೇವಲ ಆಭಾಸ, ದೇಹದ ಸಂಸ್ಪರ್ಶದಿಂದ ಉದಯಗೊಂಡ ಭ್ರಾಂತಿಯಿದಷ್ಟೆ.

ಈ ಆಭಾಸವು ‘ನಾನು ಇದ್ದೇನೆ’ ಎಂದು ನಂಬಿಕೊಳ್ಳುತ್ತದೆ. ದೇಹವನ್ನೇ ತನ್ನ ನಿಜ ಅಸ್ತಿತ್ವ ಎಂದುಕೊಳ್ಳುವ ಕಾರಣದಿಂದಲೇ ತನ್ನನ್ನು ತಾನು ಸಮಷ್ಟಿಯಿಂದ ಪ್ರತ್ಯೇಕವಾಗಿ ಭಾವಿಸತೊಡಗುತ್ತದೆ ಮತ್ತು ಈ ಕಾರಣದಿಂದಲೇ ಜಗತ್ತಿನೆಲ್ಲ ಆಪತ್ತಿಗೂ ಆಮಂತ್ರಣ ನೀಡುತ್ತದೆ. ಇದರಿಂದಾಗಿ ಅಸುರಕ್ಷತೆಯ ಭಾವ ಉಂಟಾಗುತ್ತದೆ ಹಾಗೂ ಭಯ ಮೂಡುತ್ತದೆ. ಮತ್ತು ಈ ಅಸುರಕ್ಷತೆಯಿಂದ, ಭಯದಿಂದ ರಕ್ಷಿಸಿಕೊಳ್ಳುವ ಓಟ ಶುರುವಾಗುತ್ತದೆ. ಮತ್‌ತು ಅಲ್ಲಿಂದ ಮುಂದೆ ಬದುಕಿಟೀ ಒಂದು ಹೋರಾಟವಾಗಿ, ಒಂದು ಸಂಘರ್ಷವಾಗಿ ಉಳಿದುಹೋಗುತ್ತದೆ.

ದೇಹದಲ್ಲಿ ಚೇತನದ ಉದಯವಾಗುತ್ತಿದ್ದಂತೆಯೇ ನಾನು ‘ಇದ್ದೇನೆ’ ಎನ್ನುವ ಅರಿವು ಉಂಟಾಗುತ್ತದೆ. ಚೇತನೋದಯಕ್ಕೆ ಮುನ್ನ ಇದ್ದೇನೆ ಎನ್ನುವ, ಅಥವಾ ಇರುವಿಕೆಯ ಅನುಭೂತಿಯು ಗೈರಾಗಿತ್ತು. ಒಂದೆಡೆಯಲ್ಲಿ ದೇಹವಿದೆ, ಮತ್ತೊಂದೆಡೆಯಲ್ಲಿ ಚೇತನ. ಶರೀರದಲ್ಲಿ ಚೇತನವು ಉದಿಸಿದಾಗ ಅದು ಶರೀರವನ್ನು ಸಜೀವಗೊಳಿಸುವುದಷ್ಟೇ ಅಲ್ಲ, ಅದರಲ್ಲಿ ಅಹಮ್‌ ಭಾವವನ್ನು ತುಂಬುತ್ತದೆ.

ಇದು ಹೇಗೆಂದರೆ, ಘನಘೋರ ಕತ್ತಲಲ್ಲಿ, ಈ ಕೋಣೆಯ ಗೋಡೆಗಳೇನೋ ಇರುತ್ತವೆ, ನಡುವಿನ ಈ ಆಕಾಶವೂ ಇರುತ್ತದೆ, ಆದರೆ ನಾವು ಯಾವುದನ್ನು ಕೋಣೆಯೆಂದು ಕರೆಯುತ್ತೇವೋ, ಈ ಕೋಣೆಗೆ ಕೋಣೆಯ ಇರುವಿನ ಅನುಭೂತಿ ಇರುವುದಿಲ್ಲ. ಅದಕ್ಕೆ ನಾನಿದ್ದೇನೆ ಅನ್ನುವುದು ತಿಳಿಯುವುದಿಲ್ಲ. ಕೋಣೆಗೆ ತನ್ನ ಇರುವಿಕೆಯ ಅನುಭೂತಿ ಇರುತ್ತದೆಯೇನು? …. ಇರೋದಿಲ್ಲ.

ಕೋಣೆ – ಅಂದರೆ ನಾಲ್ಕು ಗೋಡೆಗಳ ನಡುವಣ ಖಾಲಿ ಆಕಾಶ. ಕೋಣೆ ಎಂಬ ಯಾವುದೇ ಅಸ್ತಿತ್ವವಿಲ್ಲ. ಕೋಣೆ ಅನ್ನೋದು ಕೇವಲ ಒಂದು ಆಭಾಸ. ಅದೊಂದು ನಂಬುಗೆಯಷ್ಟೆ. ನಾಲ್ಕು ಗೋಡೆಯೊಳಗಣ ಆಕಾಶವು ನನಗೆ ಸ್ವತಂತ್ರ ಅಸ್ತಿತ್ವವಿದೆ ಎಂದು ಅನುಮಾನಿಸುತ್ತದೆ. ಈ ಆಕಾಶವು ತಾನು ಇದ್ದೇನೆ ಎಂದು ಊಹಿಸಿಕೊಳ್ಳುತ್ತದೆ, ‘ನಾನು ಇದ್ದೇನೆ’ ಎಂದು ನಂಬಿಕೊಳ್ಳುತ್ತದೆ. ಇದು ಅದರ ಕಲ್ಪನೆಯಷ್ಟೆ. ನಾನು ಕೋಣೆಯಾಗಿದ್ದೇನೆ ಅನ್ನೋದು ಅದರ ಊಹೆ. ನಾನು ಪ್ರತ್ಯೇಕ ಅಸ್ತಿತ್ವವಾಗಿದ್ದೇನೆ ಅನ್ನುವುದು ಕೂಡಾ.

ವಾಸ್ತವದಲ್ಲಿ ಗೋಡೆಗಳೂ ಇಲ್ಲ, ಆಕಾಶವೂ ಇಲ್ಲ. ಆದರೆ ಕೋಣೆಯೆಂಬ ಕಲ್ಪನೆಯಿದೆ, ಆಭಾಸವಿದೆ. ಮೂಲತಃ ತನ್ನದೇ ಆದೊಂದು ಅಸ್ತಿತ್ವವಿಲ್ಲದ ಹೊಸ ವಸ್ತುವೊಂದು ಇಲ್ಲಿ ಹುಟ್ಟಿಕೊಂಡಿದೆ. ಕೋಣೆಯ ಒಳಗೆ ಈ ಆಕಾಶವೇನಿದೆ, ಇದು ಬೆಳಕು ಇದ್ದಾಗಲೂ ಇತ್ತು. ಅದು ಕಣ್ಣಿಗೆ ಕಾಣುವಾಗಲೂ ಅಸ್ತಿತ್ವದಲ್ಲಿತ್ತು. ಮತ್ತೀಗ ಅದು ಕತ್ತಲೆಯಲ್ಲಿ ಕಾಣದೆ ಇರುವಾಗಲೂ ಅಸ್ತಿತ್ವದಲ್ಲಿದೆ. ಕತ್ತಲಿನಲ್ಲಿ ಗೋಚರವಾಗದ ಗೋಡೆಗಳು ಬೆಳಕಿನಲ್ಲಿ ಕಾಣಿಸುತ್ತವೆಯಷ್ಟೇ. ಕತ್ತಲಿನಲ್ಲಿ ಎಲ್ಲವೂ ಒಂದೇ ಅನ್ನಿಸುತ್ತದೆ.

ಹೇಗೆ ಕತ್ತಲಿನಲ್ಲಿ ಗೋಡೆಗಳು ಕಾಣಿಸುವುದಿಲ್ಲವೋ ಹಾಗೆಯೇ ಚೇತನದ ಗೈರಿನಲ್ಲಿ ದೇಹಭಾವವೂ ಇರುವುದಿಲ್ಲ.

ಇದರರ್ಥ, ಚೇತನವೂ ಒಂದು ಬಗೆಯ ಪ್ರಕಾಶ ಎಂದಾಯ್ತು. ಅದು ದೇಹವನ್ನು ಪ್ರಕಾಶಗೊಳಿಸುತ್ತದೆ. ದೇಹದಲ್ಲಿ ಚೇತನೋದಯವಾಗುತ್ತಿದ್ದ ಹಾಗೇ ದೇಹವು ಚೇತನದಿಂದ ಪ್ರಕಾಶಿತಗೊಳ್ಳುತ್ತದೆ. ಹಾಗೂ ಆ ಕ್ಷಣದಲ್ಲಿ ‘ನಾನು ಇದ್ದೇನೆ’ ಎನ್ನುವ ಅನುಭವ ಆಗತೊಡಗುತ್ತದೆ.

(ಮುಂದುವರಿಯುತ್ತದೆ….)

ಆಕರ: Whosoever Ji ಅವರ ‘ಶಿವೋsಹಂ’ ಕೃತಿ | ಮೂಲ: ಹಿಂದಿ | ಕನ್ನಡಕ್ಕೆ: ಚೇತನಾ

1 Comment

Leave a Reply