ಪ್ರತಿ ದಿನಕ್ಕೂ ತನ್ನದೇ ಸ್ವಾದವಿದೆ ~ ರೂಮಿ

ಸಮಯ ಸಾಲುವುದಿಲ್ಲ ಎಂಬ ಮಾತು ಇಲ್ಲಿ ಅಪ್ರಸ್ತುತ. ಯಾಕೆಂದರೆ ಇಲ್ಲಿ ಹೇಳುತ್ತಿರುವುದು ಪ್ರತಿಕ್ಷಣವನ್ನೂ ಆಸ್ವಾದಿಸು ಎಂದು. ಹಾಗಿರುವಾಗ ಅದಕ್ಕೆಂದೇ ಸಮಯ ಮೀಸಲಿಡುವ ಅಗತ್ಯವಾದರೂ ಹೇಗೆ ಬರುತ್ತದೆ? ~ ಸಾಕಿ

WhatsApp Image 2018-06-04 at 20.20.30

ನಾಳೆಯ ಕೆಲಸ ಇಂದು ಮಾಡು, ಇಂದಿನ ಕೆಲಸ ಈ ಕೂಡಲೇ ಮಾಡು ಎಂದು ಹೇಳುವುದನ್ನು ಕೇಳಿದ್ದೇವೆ. ನಮ್ಮ ಜೀವನಶೈಲಿ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈ ಮಾತು ಸೂಕ್ಷ್ಮವಾಗಿ ತೋರಿಸುತ್ತದೆ. ಆದರೆ ಇಂತಹ ಅತಿವೇಗದಿಂದಾಗಿ ನಾವು ಕಳೆದುಕೊಳ್ಳುತ್ತಿರುವ ಸಣ್ಣಪುಟ್ಟ ಖುಷಿಗಳಿಗೆ ಲೆಕ್ಕವಿಟ್ಟವರಿಲ್ಲ; ಅಲ್ಲವೇ? ಎಂದೇ ರೂಮಿ ಇದಕ್ಕೆಲ್ಲ ವ್ಯತಿರಿಕ್ತವಾಗಿ ಪ್ರತಿ ದಿನವನ್ನೂ ಆಸ್ವಾದಿಸು ಎಂದು ಹೇಳುತ್ತಾನೆ. ನಾಳೆಯ ಚಿಂತೆ ಇಂದಿನ ಸ್ವಾದ ಕೆಡಿಸದಿರಲಿ ಎಂಬುದಕ್ಕೆ ಉದಾಹರಣೆಯಾಗಿ ಇಂದಿನ ಸ್ವಾದ ನಿನ್ನೆಯದಲ್ಲ ಎಂದು ಒತ್ತಿ ಹೇಳುತ್ತಾನೆ. ಆ ಮೂಲಕ ನಾಳೆಯ ಬಗ್ಗೆ ಚಿಂತಿಸಿ ಈ ದಿನದ ನೆಮ್ಮದಿ ಕಳೆದು ಕೊಳ್ಳುವುದು ಬೇಡ ಎಂಬುದು ರೂಮಿಯ ಕಿವಿ ಮಾತು.

ಆಧುನಿಕ ಮನುಷ್ಯ ಸಂಪಾದನೆಯ ಹಿಂದೆ ಬಿದ್ದಿದ್ದಾನೆ. ಅದು ಸಂಪತ್ತಾಗಿರಲಿ ಅಥವಾ ಸಂಬಂಧಗಳೇ ಆಗಿರಲಿ, ಒಟ್ಟಿನಲ್ಲಿ ಸಂಪಾದಿಸಿಕೊಳ್ಳುವ ತವಕ. ಒಂದು ದಿನವೂ ಆಸ್ವಾದಿಸುವಷ್ಟು ಬಿಡುವಿಲ್ಲದ ಜೀವನ ಪದ್ಧತಿ. ಹಾಗಾದರೆ ಈ ಸಂಪಾದನೆಗಳು ಯಾತಕ್ಕಾಗಿ? ಧಾವಂತದ ಬದುಕಿನಲ್ಲಿ ಒಂದು ಕ್ಷಣ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಬಿಗುಮಾನ ಬಿಟ್ಟು, ನಮ್ಮ ಸ್ಥಾನ ಮಾನಗಳ ಬಗೆಗಿನ ಮೇಲರಿಮೆ ಅಥವಾ ಕೀಳರಿಮೆ ಏನೇ ಇದ್ದರೂ ಅದೆಲ್ಲವನ್ನು ಬಿಟ್ಟು ಮಾಡುತ್ತಿರುವ ವೃತ್ತಿಯ ಜೊತೆಗೇ ಪ್ರವೃತ್ತಿಯನ್ನೂ ಪೋಷಿಸಿಕೊಂಡರೆ ಸಾಕು; ಪ್ರತಿ ದಿನವನ್ನೂ, ಪ್ರತಿ ಕ್ಷಣವನ್ನೂ ಆಸ್ವಾದಿಸಬಹುದು.

ನೆನಪಿರಲಿ, ಸಮಯ ಸಾಲುವುದಿಲ್ಲ ಎಂಬ ಮಾತು ಇಲ್ಲಿ ಅಪ್ರಸ್ತುತ. ಯಾಕೆಂದರೆ ಇಲ್ಲಿ ಹೇಳುತ್ತಿರುವುದು ಪ್ರತಿಕ್ಷಣವನ್ನೂ ಆಸ್ವಾದಿಸು ಎಂದು. ಹಾಗಿರುವಾಗ ಅದಕ್ಕೆಂದೇ ಸಮಯ ಮೀಸಲಿಡುವ ಅಗತ್ಯವಾದರೂ ಹೇಗೆ ಬರುತ್ತದೆ?

Leave a Reply