ತನ್ನನ್ನೇ ತಾನು ಬದುಕಿಸಿಕೊಂಡ ಅಸ್’ಕ್ಲೀಪಿಯಸ್ : ಗ್ರೀಕ್ ಪುರಾಣ ಕಥೆಗಳು  ~ 33

ಅಪೋಲೋನ ಅವಕೃಪೆಗೆ ಪಾತ್ರಳಾಗಿ ಸತ್ತ ಕೊರೊನಿಸಾಳ ಹೊಟ್ಟೆಯ ಭ್ರೂಣವನ್ನು ಹರ್ಮಿಸ್ ಬದುಕಿಸಿದ ಕಥೆಯನ್ನು (ಕೊಂಡಿ ಇಲ್ಲಿದೆ: ) ಓದಿದ್ದೀರಿ. ಮುಂದೆ ಈ ಮಗುವೇ ದೇವ ವೈದ್ಯ ಅಸ್’ಕ್ಲೀಪಿಯಸ್ ಎನ್ನುತ್ತದೆ ಗ್ರೀಕ್ ಪುರಾಣಕಥನದ ಒಂದು ಪಠ್ಯ. ಪಾಠಾಂತರದ ಪ್ರಕಾರ ಬೇರೊಂದೇ ಕಥೆ ಇದ್ದು, ಅದು ಹೀಗಿದೆ:

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

asclepius__god_of_medicine_by_tffan234-d6rnx8a

ತ್ತರ ಥೆಸಲಿಯಲ್ಲಿ ಲ್ಯಾಪಿತ ಜನಾಂಗದ ಪಾರಮ್ಯವಿತ್ತು. ದೊರೆ ಫ್ಲೆಜಿಯಸ್ ಅದರ ಆಳ್ವಿಕೆ ನಡೆಸುತ್ತಿದ್ದ. ಆತನ ಮಗಳು ಕೊರೊನಿಸಾ ಪರಮ ಸುಂದರಿ. ಅವಳ ಸೌಂದರ್ಯದ ಖ್ಯಾತಿ ಸ್ವರ್ಗದ ವರೆಗೂ ಹಬ್ಬಿ, ಅಪೋಲೋ ದೇವತೆಯೂ ಅವಳಲ್ಲಿ ಮೋಹಗೊಳ್ಳುವಂತಾಯಿತು. ಆತ ಭೂಮಿಗೆ ಬಂದು ಕೊರೊನಿಸಾಳನ್ನು ಒಲಿಸಿಕೊಂಡ. ಅವರಿಬ್ಬರೂ ಗುಟ್ಟಾಗಿ ಪ್ರೇಮಿಸತೊಡಗಿದರು. ಪರಿಣಾಮವಾಗಿ ಕೊರೊನಿಸಾ ಗರ್ಭ ಧರಿಸಿದಳು.

ಫ್ಲೆಜಿಯಸ್ ತನ್ನ ಮಗಳನ್ನು ಭೂಮಿಯಲ್ಲೇ ಸಶಕ್ತ ರಾಜನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಉದ್ದೇಶವಿತ್ತು. ಅವನು ಎಲ್ಲಿ ಹೋದರೂ ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ. ಒಮ್ಮೆ ಅವನು ದಕ್ಷಿಣ ಗ್ರೀಸಿನ ಎಪಿಡಾರಸ್ ನಗರಕ್ಕೆ ಹೊರಟ. ಕೊರೊನಿಸಾಳೂ ಅವನನ್ನು ಹಿಂಬಾಲಿಸಿದಳು. ಅವಳ ಗರ್ಭಕ್ಕೆ ದಿನ ತುಂಬುತ್ತಾ ಬಂದಿತ್ತು. ಎಪಿಡಾರಸ್’ನಲ್ಲಿ ಅಪೋಲೋ ಮಂದಿರವಿದೆ, ಅಲ್ಲಿ ಮಗುವನ್ನು ಹೆರಬಹುದು ಎಂದೇ ಅವಳು ಹೊರಟಿದ್ದು.

ತಂದೆಯ ಗಮನ ತಪ್ಪಿಸಿ, ಅಪೋಲೋ ಮಂದಿರ ತಲುಪಿದ ಕೊರೊನಿಸಾ, ಅಲ್ಲಿ ಅದೃಷ್ಟ ದೇವತೆಗಳ ಸಹಾಯದಿಂದ ಗಂಡು ಮಗುವನ್ನು ಹೆತ್ತಳು. ತಂದೆಗೆ ತಿಳಿದರೆ ಕೋಪಗೊಂಡು ಶಿಕ್ಷಿಸುವನೆಂದು ಹೆದರಿ ಅದನ್ನು ಮಿರ್ಟಿಯಮ್ ಬೆಟ್ಟದ ಮೇಲೆ ಹಾಕಿ ಬಂದಳು. ಅಪೋಲೋ ದೇವತೆಯು ಆ ಮಗುವನ್ನು ಎತ್ತಿಕೊಂಡು, ಕೆಲ ಕಾಲ ತನ್ನ ಅರಮನೆಯಲ್ಲೇ ಸಲಹಿದ. ಅದನ್ನು ಅಸ್’ಕ್ಲೀಪಿಯಸ್ ಎಂದು ಕರೆದ. ಕೆಲ ಕಾಲ ಕಳೆದ ನಂತರ ಪೀಲಿಯನ್ ಪರ್ವತದ ಗುಹೆಯಲ್ಲಿ ವಾಸವಿದ್ದ ಕೈರೋನ್ ಸೆಂಟಾರನ ಬಳಿ ಶಿಕ್ಷಣಕ್ಕೆ ಬಿಟ್ಟ.

ಅಸ್’ಕ್ಲೀಪಿಯಸ್ ಸಕಲ ವಿದ್ಯೆಯಲ್ಲೂ ಪಾರಂಗತನಾದ. ವೈದ್ಯವಿದ್ಯೆಯತ್ತ ವಿಶೇಷ ಒಲವು ಬೆಳೆಸಿಕೊಂಡು ತಾನೇ ಕೆಲವು ಔಷಧಗಳನ್ನು ಕಂಡುಹಿಡಿದ. ಅಥೆನಾ ದೇವತೆಯು ಅವನಿಗೆ ಮೃತಸಂಜೀವಿನಿ ವಿದ್ಯೆಯನ್ನು ಹೇಳಿಕೊಟ್ಟಳು. ಈ ವಿದ್ಯೆಯಿಂದ ಅಸ್’ಕ್ಲೀಪಿಯಸ್ ಹಲವಾರು ಜನರನ್ನು ಬದುಕಿಸಿದ. ಆದರೆ ಇದರಿಂದ ದೊಡ್ಡ ಫಜೀತಿ ಎದುರಾಯಿತು. ಅಸ್’ಕ್ಲೀಪಿಯಸ್ ಹೀಗೆ ಸತ್ತವರನ್ನೆಲ್ಲ ಬದುಕಿಸುತ್ತಾ ಹೋದರೆ ಅಧೋಲೋಕದ ಕಥೆ ಏನಾಗಬೇಡ? ಚಡಪಡಿಸಿದ ಅಧೋಲೋಕದ ಅಧಿಪತಿ ಹೇಡಿಯಸ್, ಮಹಾದೇವ ಸ್ಯೂಸ್’ನಲ್ಲಿ ದೂರು ಕೊಂಡೊಯ್ದ. ಸ್ಯೂಸ್ ಈಗಲೇ ಅಸ್’ಕ್ಲೀಪಿಯಸ್’ನನ್ನು ಶಿಕ್ಷಿಸುವೆನೆಂದು ತನ್ನ ವಜ್ರಾಯುಧದಿಂದ ಹೊಡೆದು ಕೊಂದು ಹಾಕಿದ.

ಆದರೆ ಅಸ್’ಕ್ಲೀಪಿಯಸ್’ನ ದೇಹಕ್ಕೆ ಸಂಸ್ಕಾರ ಮಾಡುವವರು ಯಾರೂ ಇರಲಿಲ್ಲ. ಮಗನನ್ನು ಕೊಂದನೆಂದು ಸ್ಯೂಸ್ ದೇವನ ಮೇಲಿನ ಸಿಟ್ಟಿಗೆ ಅಪೋಲೋ ದೇವತೆಯು ಒಕ್ಕಣ್ಣು ರಾಕ್ಷಸರಾದ ಸೈಕ್ಲೋಪ್ಸರನ್ನು ಕೊಂದುಹಾಕಿದ್ದ. ಅದಕ್ಕೆ ಆತನಿಗೆ ಮರ್ತ್ಯರಾಜ ಅಡ್ಮೀಟಸ್ ಬಳಿ ಒಂದು ವರ್ಷ ಗುಲಾಮಗಿರಿ ಮಾಡಿಕೊಂಡಿರುವಂತೆ ಶಿಕ್ಷೆ ವಿಧಿಸಲಾಯ್ತು. ಆ ಶಿಕ್ಷೆಯನ್ನು ಪೂರೈಸಲು ಅಪೋಲೋ ತೆರಳಿದ್ದ.

rod_of_asclepius.jpgದೇಹಕ್ಕೆ ಸಂಸ್ಕಾರವಿಲ್ಲದೆ ಹೋಗಿದ್ದು ಅಸ್’ಕ್ಲೀಪಿಯಸ್’ನಿಗೆ ಒಳಿತೇ ಆಯಿತು. ಅವನ ಪ್ರೇತವು ಮೃತಸಂಜೀವಿನಿ ಪಠಿಸಿ ಆತನನ್ನು ಬದುಕಿಸಿಕೊಂಡು, ದೇಹದಲ್ಲಿ ಜೀವವಾಗಿ ಸೇರಿಕೊಂಡಿತು. ಹೀಗೆ ಅಸ್’ಕ್ಲೀಪಿಯಸ್ ಬದುಕಿಕೊಂಡ.

ಈತನ ಅಸಾಧಾರಣ ಬುದ್ಧಿಮತ್ತೆಯನ್ನು ಕಂಡು ಸ್ಯೂಸ್ ದೇವನ ಕೋಪ ಶಾಂತವಾಯಿತು. ಅಸ್’ಕ್ಲೀಪಿಯಸ್’ನನ್ನು ದೇವತೆಯ ಪದವಿಗೇರಿಸಿ, ಸ್ವರ್ಗಲೋಕದ ದೇವವೈದ್ಯನಾಗಿ ನೇಮಿಸಿದ.

ಅಸ್’ಕ್ಲೀಪಿಯಸ್ ಜೊತೆ ಯಾವಾಗಲೂ ಒಂದು ಸರ್ಪವಿರುತ್ತಿತ್ತು. ಅವನು ಅದನ್ನು ತನ್ನ ವೈದ್ಯದಂಡಕ್ಕೆ ಸುತ್ತಿಕೊಂಡಿರುತ್ತಿದ್ದು, ಚಿಕಿತ್ಸೆಯಲ್ಲಿ ಬಳಸುತ್ತಿದ್ದ. ಯಾವಾಗಲೂ ಆ ದಂಡ ಅವನ ಕೈಯಲ್ಲಿರುತ್ತಿತ್ತು. ಎಷ್ಟೆಂದರೆ, ಆ ಸರ್ಪ ಸುತ್ತಿದ ದಂಡವೇ ಆತನ ಅಧಿಕೃತ ಚಿಹ್ನೆಯಾಗಿಹೋಯಿತು.

ಇಂದಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಈ ಸರ್ಪಸುತ್ತಿದ ದಂಡವು ಚಿಹ್ನೆಯಾಗಿ ಬಳಸಲಸ್ಪಡುತ್ತಿದ್ದು, ‘ಸ್ಟಾಫ್ ಆಫ್ ಅಸ್’ಕ್ಲೀಪಿಯಸ್’ (ಅಸ್’ಕ್ಲೀಪಿಯಸನ ದಂಡ) ಎಂದೇ ಕರೆಯಲ್ಪಡುತ್ತದೆ.

Leave a Reply