ಮೂವರು ಸನ್ಯಾಸಿಗಳು ~ ಒಂದು ಝೆನ್ ಕಥೆ

ಮೂವರು ಸನ್ಯಾಸಿಗಳು ಒಂದು ಕೊಳದ ದಂಡೆಯ ಮೇಲೆ ಧ್ಯಾನದಲ್ಲಿ ಮಗ್ನರಾಗಿದ್ದರು.
ಹೀಗಿರುವಾಗ ಒಬ್ಬ ಸನ್ಯಾಸಿ, ಥಟ್ಟನೇ ಎದ್ದು ನಿಂತ,
“ನನ್ನ ಚಾಪೆ ಮರೆತು ಬಂದಿದ್ದೇನೆ, ಇದೋ ಈಗ ಬಂದೆ” 
ಎನ್ನುತ್ತಾ ಸರಸರನೇ ಕೊಳದ ನೀರಿನ ಮೇಲೆ ನಡೆಯುತ್ತ, ಆಚೆ ದಡಕ್ಕೆ ಹೋಗಿ ತನ್ನ ಚಾಪೆಯೊಂದಿಗೆ ಮತ್ತೆ ನೀರಿನ ಮೇಲೆ ನಡೆಯುತ್ತ ವಾಪಸ್ ಬಂದ.

ಆತ ಬರುವುದೇ ತಡ, ಇನ್ನೊಬ್ಬ ಸನ್ಯಾಸಿ ಎದ್ದು ನಿಂತ.
“ಓಹ್ ! ಹಸಿ ಬಟ್ಟೆ ಹಾಗೇ ಬಿಟ್ಟು ಬಂದಿದ್ದೇನೆ, ಒಣಗಲು ಹಾಕಬೇಕು, ಈಗ ಬಂದೆ” ಎನ್ನುತ್ತಾ ಕೊಳದ ನೀರಿನ ಮೇಲೆ ಲಗು ಬಗೆಯಿಂದ ನಡೆಯುತ್ತ ಆಚೆ ದಂಡೆಗೆ ಹೋಗಿ, ಕೆಲಸ ಮುಗಿಸಿ ವಾಪಸ್ ಬಂದ.

ಈ ಇಬ್ಬರು ಸನ್ಯಾಸಿಗಳನ್ನು ಗಮನಿಸುತ್ತಿದ್ದ ಮೂರನೇ ಸನ್ಯಾಸಿ, ಇದನ್ನು ಸವಾಲಿನಂತೆ ಪರಿಗಣಿಸಿದ. ತಾನೂ ತನ್ನ ಶಕ್ತಿ ಸಾಮರ್ಥ್ಯಗಳನ್ನ ಅವರೆದುರು ಪ್ರದರ್ಶನ ಮಾಡಬೇಕೆಂದು ತೀರ್ಮಾನಿಸಿ, ಘೋಷಣೆ ಮಾಡಿದ.
“ನಿಮಗಿಬ್ಬರಿಗೂ ನಿಮ್ಮ ಸಾಧನೆ ನನಗಿಂತ ಮೇಲು ಎನ್ನುವ ಭ್ರಮೆಯಲ್ಲವೆ? ಹಾಗಾದರೆ ಇಲ್ಲಿ ನೋಡಿ” ಎನ್ನುತ್ತ
ಗಡಿಬಿಡಿಯಿಂದ ಕೊಳದ ಹತ್ತಿರ ಹೋಗಿ, ನೀರಿನ ಮೇಲೆ ಹೆಜ್ಜೆ ಇಟ್ಟ.
ಅವ ನೀರಿನ ಮೇಲೆ ಕಾಲಿಡುವುದೇ ತಡ, ಧೊಪ್ಪಂತ ಜಾರಿ ಕೊಳದಲ್ಲಿ ಬಿದ್ದ. ಎರಡು ಮೂರು ಬಾರಿ ಪ್ರಯತ್ನಿಸಿದರೂ ಮತ್ತೆ ಮತ್ತೆ ನೀರಿನಲ್ಲಿ ಬಿದ್ದ.

ಮೂರನೆಯವನ ಹುಂಬ ಸಾಹಸವನ್ನು ನೋಡುತ್ತಿದ್ದ ಮೊದಲ ಸನ್ಯಾಸಿ, ಎರಡನೇಯವನಿಗೆ ಕೂಗಿ ಹೇಳಿದ,
“ಅಯ್ಯೋ ಪಾಪ ! ನಾವು ಅವನಿಗೆ ಕೊಳದ ಒಳಗೆ ಹಾಸುಗಲ್ಲುಗಳಿರುವ ಜಾಗ ತೋರಿಸಬೇಕಿತ್ತು”

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply