ಹೃದಯದಾಳದಲೆ ಬೆಳಕಿದೆ ಮರುಳೆ! ~ ರೂಮಿ

ಹೃದಯದಾಳದಲೇ ಸ್ವರ್ಗದ ಬೆಳಕು ಹರಿಯುತಿದೆ
ಹೊರಗೇನು ಹುಡುಕುತಿರುವೆ ಮರುಳೇ!?
~ ರೂಮಿ

ನುಷ್ಯ ನೆಮ್ಮದಿಯಿಂದ ಬದುಕಬೇಕೆಂಬುದೇ ಧರ್ಮಗಳ ಮೂಲ ಆಶಯ. ಅದಕ್ಕಾಗಿ ಸ್ಬರ್ಗ ನರಕಗಳ ಕಲ್ಪನೆ ಧರ್ಮಗಳು ಹುಟ್ಟಿಕೊಂಡ ಕಾಲ ಸಂಧರ್ಭದಲ್ಲಿ ಅತ್ಯಗತ್ಯವಾಗಿತ್ತು. ಒಳಿತಿನಿಂದ ಸ್ವರ್ಗ, ಕೆಡುಕಿನಿಂದ ನರಕ ಎಂದ ಧರ್ಮ ಸಂಸ್ಥಾಪಕರು ಅದನ್ನು ತೋರಿಸಿಯೂ ಕೊಟ್ಟರು. ಉತ್ತಮ ಕಾರ್ಯಗಳಿಂದ ಜನರ ನಡುವೆ ಬದುಕಿದವರು ಸ್ವರ್ಗ ಸುಖವನ್ನು ಅನುಭವಿಸಿದರು. ಅನೀತಿ ಅಕ್ರಮಗಳ ಬೆನ್ನು ಬಿದ್ದವರು ಅದರ ಕೊಳೆಯಲ್ಲೇ ನರಕ ಯಾತನೆ ಅನುಭವಿಸಿದರು. ಆದರೆ, ಭೂಮಿಯ ಮೇಲೆ ಉತ್ತಮರಾಗಿ ಬದುಕಿದವರು ಅತಿ ಹೆಚ್ಚು ಕಷ್ಟಗಳನ್ನು ಎದುರಿಸಿದರು ಎಂದು ಕೇಳಿದ್ದೇವೆ.

ಹಾಗಾದರೆ ಸ್ವರ್ಗ ಸುಖ ಎಲ್ಲಿತ್ತು ಎಂಬ ಪ್ರಶ್ನೆ ಮೂಡುತ್ತಿದೆಯೇ? ಕೇಳಿರಿ, ಸ್ವರ್ಗ ಸುಖವೆಂದರೆ ಅದು ಸಂಪತ್ತಿನ ಸುಖ ಲೋಲುಪತೆಯಲ್ಲಿ, ಆಡಂಬರದ ಅಬ್ಬರದಲ್ಲಿ ತೇಲುವುದಲ್ಲ. ನರಕವೆಂದರೆ ಕಡು ಬಡತನದ ಬದುಕೂ ಅಲ್ಲ. ಅಂದರೆ ಸಂತೋಷ ಮತ್ತು ದುಖಗಳಿಗೆ ಸುಂದರ ರೂಪಕಗಳೇ ಸ್ವರ್ಗ ಮತ್ತು ನರಕಗಳೆಂಬ ಕಲ್ಪನೆಗಳು.

ಸೂಫಿ ಅನುಭಾವಿಗಳು ಸ್ವರ್ಗ ನರಕಗಳ ಈ ಕಲ್ಪನೆಯನ್ನು ಸರಿಯಾಗಿ ಗ್ರಹಿಸಿಕೊಂಡರು. ಹಾಡುತ್ತಾ, ತಿರುಗುತ್ತಾ ತಮ್ಮ ಮನಸ್ಸಿನಲ್ಲಿ ಅಗಾಧ ಪ್ರೇಮವನ್ನು ತುಂಬಿಕೊಂಡ ಅವರಿಗೆ ಅದುವೇ ಸ್ವರ್ಗವಾಗಿ ಕಂಡಿತು. ಎಂದೇ ಅವರಿಗೆ ನರಕದ ಅನುಭವವೂ ಇಲ್ಲವಾಯಿತು. ಇದನ್ನೇ ರೂಮಿ “ಹೃದಯದಾಳದಲೇ ಸ್ವರ್ಗದ ಬೆಳಕು ಹರಿಯುತಿದೆ. ಹೊರಗೇನು ಹುಡುಕುತಿರುವೆ ಮರುಳೇ!?” ಎಂದು ಪುನರುಚ್ಚರಿಸಿರುವುದು.

ನಮಗೂ ಸ್ವರ್ಗದ ಅನುಭೂತಿ ಪಡೆಯಲು ಇರುವುದು ಇದೊಂದೇ ದಾರಿ. ನಮ್ಮೆಲ್ಲರ ಹೃದಯದಾಳದಲ್ಲಿ ಗುಪ್ತಗಾಮಿನಿಯಾಗಿರುವ ಪ್ರೇಮದ ಬೆಳಕು ನಮ್ಮ ಅಂತರಂಗವನ್ನು ಆಳಲಿ. ಆ ಮೂಲಕ ನಮ್ಮ ಸ್ವರ್ಗವನ್ನು ನಾವೇ ಕಂಡುಕೊಳ್ಳೋಣ. ಸದಾ ಹಗೆಯಾಡುತ್ತಿರುವ ಈ ಕಾಲದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳೋಣ ಮತ್ತು ನಮ್ಮ ಸುತ್ತಲನ್ನು ಸ್ವರ್ಗವಾಗಿಸೋಣ.

Leave a Reply