ಇದೊಂದು ವಿಚಿತ್ರ ಕಥೆ. ಹೆಣ್ಣಾಗಿ ಹುಟ್ಟಿದ ಐಫಿಸ್, ಮದುವೆಯ ಹಿಂದಿನ ಗಂಡಾಗಿ ಮಾರ್ಪಾಟುಹೊಂದಿದ ಕಥೆ. ಇದೆಲ್ಲ ನಡೆದಿದ್ದು ಹೀಗೆ…
ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ
ಕ್ರೀಟ್ ದ್ವೀಪದ ಫೀಸ್ಟಸ್ ಎಂಬಲ್ಲಿ ಜೀವಿಸಿದ್ದ ಲಿಗ್ಡಸ್, ಕಡು ಬಡವನಾಗಿದ್ದ. ಟೆಲಿಥೂಸ ಅವನ ಹೆಂಡತಿ. ಅವಳು ತುಂಬು ಗರ್ಭಿಣಿಯಾಗಿದ್ದಾಗ ಲಿಗ್ಡಸ್ ಚಿಂತಾಕ್ರಾಂತನಾಗಿ ತಲೆ ಮೇಲೆ ಕೈಹೊತ್ತು ಕುಳಿತುಬಿಡುತ್ತಿದ್ದ. ಯಾಕೆ ಹೀಗೆ ಯೋಚನೆಯಲ್ಲಿ ಮುಳುಗಿದ್ದೀಯ ಎಂದು ಹೆಂಡತಿ ಕೇಳಿದರೆ ಏನಿಲ್ಲವೆಂದು ತಲೆಯಾಡಿಸುತ್ತಿದ್ದ.
ಗಂಡನ ಅನ್ಯಮನಸ್ಕತೆಯಿಂದ ಬೇಸರಗೊಂಡ ಟೆಲಿಥೂಸ ಒಂದು ದಿನ ಅವನನ್ನು ಬಹಳವಾಗಿ ಆಗ್ರಹಪಡಿಸಿ, “ಅದೇನು ಯೋಚನೆ ಎಂದು ಹೇಳದೆ ಹೋದರೆ ನನ್ನ ಮೇಲಾಣೆ” ಅಂದುಬಿಟ್ಟಳು. ಲಿಗ್ಡಸ್ ಹೆಂಡತಿಯನ್ನು ವಿಪರೀತ ಪ್ರೀತಿಸುತ್ತಿದ್ದ. ಹಿಂಜರಿಯುತ್ತಲೇ, “ಒಬ್ಬ ತಾಯಿಯ ಬಳಿ ಈ ಮಾತು ಹೇಳಲು ನನಗೆ ನಾಚಿಕೆಯಾಗ್ತಿದೆ. ಆದರೇನು ಮಾಡೋದು? ಬಡವರಿಗೆ ನಾಚಿಕೆ ಸಲ್ಲದು. ನಮಗೆ ಹುಟ್ಟುವ ಮಗು ಹೆಣ್ಣಾದರೆ ಅದನ್ನು ಕೊಂದುಬಿಡೋಣ ಅಂದುಕೊಂಡಿದ್ದೇನೆ” ಅಂದ. ಈ ಮಾತು ಕೇಳಿ ಟೆಲಿಥೂಸಳಿಗೆ ಆಕಾಶವೇ ಬಿದ್ದ ಹಾಗಾಯ್ತು. ಲಿಗ್ಡಸ್ ಅವಳ ತಲೆ ನೇವರಿಸುತ್ತಾ, “ನಾವು ಬಡವರು. ಮನೆಯಲ್ಲಿ ಹೆಣ್ಣು ಹುಟ್ಟಿದರೆ ಸಾಕಿ ಬೆಳೆಸುವುದು, ಮದುವೆ ಮಾಡುವುದಕ್ಕೆಲ್ಲ ಖರ್ಚು ಹೊಂದಿಸುವುದು ಕಷ್ಟ. ಸುಮ್ಮನೆ ಹೆತ್ತು ಹಳವಂಡಕ್ಕೆ ನೂಕುವುದಕ್ಕಿಂತ, ಹುಟ್ಟುತ್ತಲೇ ಕೊಂದುಬಿಡೋಣ. ಗಂಡುಮಗುವೇ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೋ” ಅಂದ.
ಟಿಲಿಥೂಸಳ ಸಂಕಟ ಹೇಳತೀರದಾಯ್ತು. ಗಂಡನ ಮಾತು ಸರಿ ಅನ್ನಿಸಿದರೂ ಹೆತ್ತ ಮಗುವನ್ನು ಕೊಲ್ಲಲು ಸಾಧ್ಯವೇ!? ತಾನು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿದ್ದ ಅಯೋ ದೇವತೆಗೆ ಶರಣುಹೋದಳು. “ನನಗೆ ಗಂಡುಮಗುವನ್ನೇ ಕೊಡು, ಅಥವಾ ಹೆಣ್ಣು ಮಗುವನ್ನು ಉಳಿಸಿಕೊಳ್ಳುವ ಶಕ್ತಿ ಕೊಡು” ಎಂದು ಹಗಲಿರುಳು ದೇವತೆಯನ್ನು ಬೇಡಿಕೊಂಡು ಅತ್ತಳು. ಹೆರಿಗೆಯ ಹಿಂದಿನ ರಾತ್ರಿ ಕನಸಿನಲ್ಲಿ ಅಯೋ ದೇವತೆಯು ಕಾಣಿಸಿಕೊಂಡು, “ನಿನ್ನ ಮಗು ಗಂಡಾಗಲಿ, ಹೆಣ್ಣಾಗಲಿ, ಧೈರ್ಯದಿಂದ ಅದನ್ನು ಸಾಕು. ಕಷ್ಟ ಬಂದಾಗ ನಾನು ಸಹಾಯ ಮಾಡುತ್ತೇನೆ. ಧೈರ್ಯವಾಗಿರು” ಎಂದು ಅಭಯ ನೀಡಿದಳು.
ಮರುದಿನ ಟೆಲಿಥೂಸಳಿಗೆ ಹೆರಿಗೆಯಾಗಿ ಚೆಂದದ ಹೆಣ್ಣುಮಗು ಜನಿಸಿತು. ಸೂಲಗಿತ್ತಿಯ ಬಳಿ ಆಣೆ ಭಾಷೆ ಮಾಡಿಸಿಕೊಂಡ ಟೆಲಿಥೂಸ, ಲಿಗ್ಡಸನ ಬಳಿ ಗಂಡು ಮಗು ಹುಟ್ಟಿದೆ ಎಂದು ಸುಳ್ಳು ಹೇಳಿದಳು. ಗಂಡು – ಹೆಣ್ಣು ಇಬ್ಬರಿಗೂ ಬಳಕೆಯಲ್ಲಿದ್ದ ‘ಐಫಿಸ್’ ಎಂಬ ಹೆಸರನ್ನು ಮಗುವಿಗೆ ಇಟ್ಟು, ಅದನ್ನು ಗಂಡಿನಂತೆಯೇ ಬೆಳೆಸಿದಳು. ಶಾಲೆಗೂ ಕಳಿಸಿದಳು.
ಐಫಿಸ್ ಹುಡುಗನಂತೇ ಬೆಳೆದಳು. ಆದರೆ ಅವಳಿಗೆ ಹರೆಯಕ್ಕೆ ಕಾಲಿಟ್ಟಾಗ ತಾನು ಹುಡುಗಿ ಎಂಬುದು ಗೊತ್ತಾಗಿತ್ತು. ಅವಳಿಗೆ ಹದಿಮೂರು ವರ್ಷ ತುಂಬುತ್ತಲೇ ಲಿಗ್ಡಸ್, “ಮಗ ಹದಿಹರೆಯಕ್ಕೆ ಕಾಲಿಟ್ಟಿದ್ದಾನೆ, ಮದುವೆ ಮಾಡೋಣ” ಎಂದು ಹೇಳಿದ. ಟೆಲಿಥೂಸ ನೆವಗಳನ್ನು ಹೇಳಿ ಮದುವೆ ತಪ್ಪಿಸುವ ಪ್ರಯತ್ನ ಮಾಡಿದರೂ ಲಿಗ್ಡಸನ ಉತ್ಸಾಹದ ಎದುರು ಅವಳ ಜಾಣತನ ನಡೆಯಲಿಲ್ಲ.
ಕ್ರೀಟ್ ದ್ವೀಪದವಳೇ ಆದ ಟೆಲಿಸ್ಟೀಸ್ ಎಂಬುವವಳ ಮಗಳು ಇಯಾಂತೆ ಐಫಿಸ್ ವಯಸ್ಸಿನವಳೇ ಆಗಿದ್ದಳು. ಅವಳು ಕೂಡಾ ಚೆಲುವೆ. ಲಿಗ್ಡಸ್, ತನ್ನ ಮಗನಿಗಾಗಿ ಅವಳನ್ನೇ ಆಯ್ಕೆ ಮಾಡಿದ. ಇಯಾಂತೆ ಐಫಿಸನ ಸಹಪಾಠಿಯಾಗಿದ್ದಳು. ಅವಳು ಐಫಿಸ್ ಗಂಡೆಂದೇ ನಂಬಿದ್ದಳು. ಅವನ ಜೊತೆ ಮದುವೆ ಎಂದ ಕೂಡಲೇ ಅವನ ಕುರಿತು ಪ್ರೇಮ ಭಾವನೆ ತಾಳಿದಳು ಇಯಾಂತೆ.
ಇತ್ತ ಟೆಲಿಥೂಸ ಮತ್ತು ಐಫಿಸ್ ಚಿಂತೆಗೊಳಗಾದರು. ಮದುವೆ ದಿನಗಳು ಹತ್ತಿರ ಬಂದಂತೆಲ್ಲ ವಿಚಲಿತಗೊಂಡರು. ರಹಸ್ಯ ಬಯಲಾದ ಮೇಲೆ ಜನರ ಪ್ರತಿಕ್ರಿಯೆ ಏನಿರಬಹುದು ಎಂದು ಕಳವಳಗೊಂಡರು. ಅದಕ್ಕಿಂತಲೂ ಲಿಗ್ಡಸ್ ತಮ್ಮಿಬ್ಬರನ್ನು ಕೊಂದೇಹಾಕುತ್ತಾನೆ ಎಂದು ಭಯಪಟ್ಟರು. ಟೆಲಿಥೂಸ ತನ್ನ ಮೆಚ್ಚಿನ ಅಯೋ ದೇವತೆಯ ಮೊರೆ ಹೋದಳು. ಮರುದಿನ ಐಫಿಸ್’ಳನ್ನೂ ಕರೆದುಕೊಂಡು ಅಯೋ ದೇವತೆಯ ಮಂದಿರಕ್ಕೆ ತೆರಳಿ, ಮಗಳನ್ನು ಬಲಿಗಂಬಕ್ಕೆ ಕಟ್ಟಿದಳು. “ನಮ್ಮ ಸಮಸ್ಯೆ ಪರಿಹರಿಸು, ಇಲ್ಲವೇ ಮಗಳನ್ನು ಬಲಿ ತೆಗೆದುಕೋ” ಎಂದು ಬೇಡಿಕೊಂಡು ಬಿಕ್ಕಳಿಸಿದಳು. ಐಫಿಸ್ ಕೂಡಾ ಈ ಸಮಸ್ಯೆ ಪರಿಹಾರವಾದರೆ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತಳು.
ಅಮ್ಮ ಮಗಳ ದೈನ್ಯತೆಯನ್ನು ಕಂಡು ಅಯೋ ದೇವತೆ ಕರಗಿದಳು. ಬಲಿಪೀಠ ಅಲುಗಿ, ಗಂಟೆಗಳು ತೂಗಿ ಸೂಚನೆ ದೊರಕಿತು. ಐಫಿಸ್’ಗೆ ಎಚ್ಚರ ತಪ್ಪಿದಂತಾಯ್ತು. ಕಣ್ಣುಬಿಟ್ಟಾಗ ದೇಹರಚನೆ ಬದಲಾಗಿತ್ತು. ಮುಖದ ಕೋಮಲತೆ ಅಳಿದು ಗಡುಸುತನ ಮೂಡಿತ್ತು. ಅವನು ಮೂರ್ಛೆಹೋಗಿದ್ದ ಟೆಲಿಥೂಸಳನ್ನು ಎಬ್ಬಿಸಲು “ಅಮ್ಮಾ…” ಎಂದು ಕರೆದಾಗ ತನ್ನ ದನಿಗೆ ತನಗೇ ಅಚ್ಚರಿಯಾಯ್ತು. ಐಫಿಸ್ ಗಂಡಾಗಿ ಮಾರ್ಪಟ್ಟಿದ್ದಳು. ಐಫಿಸ್ ಈಗ ಗಂಡಾಗಿದ್ದ!!
ಟೆಲಿಥೂಸಳ ಸಂಭ್ರಮಕ್ಕೆ ಪಾರವೇ ಇಲ್ಲ. ಅಮ್ಮ ಮಗ ಮನೆಗೆ ಬಂದು, ಏನೂ ನಡೆದೇ ಇಲ್ಲವೆಂಬಂತೆ ಮದುವೆ ತಯಾರಿಯಲ್ಲಿ ತೊಡಗಿದರು. ಇಯಾಂತೆ – ಐಫಿಸರ ಮದುವೆ ಸಡಗರದಿಂದ ನೆರವೇರಿತು. ಹರಕೆ ಹೊತ್ತುಕೊಂಡಿದ್ದಂತೆ ಐಫಿಸ್ ತನ್ನ ಹೆಂಡತಿಯನ್ನು ಕರೆದುಕೊಂಡು ಅಯೋ ದೇವತೆಯ ಮಂದಿರಕ್ಕೆ ತೆರಳಿ ಕಾಣಿಕೆ ಸಲ್ಲಿಸಿದ. ಮತ್ತು ಅಲ್ಲಿ ಶಿಲೆಯೊಂದರ ಮೇಲೆ “ನಾನು ಐಫಿಸ್, ಹೆಣ್ಣಾಗಿ ಮಾಡಿಕೊಂಡ ಹರಕೆಯನ್ನು ಗಂಡಾಗಿ ತೀರಿಸುತ್ತಿದ್ದೇನೆ” ಎಂದು ಶಾಸನ ಬರೆದ.
ಎಷ್ಟೋ ಕಾಲದವರೆಗೆ ಐಫಿಸನ ಲಿಂಗಾಂತರದ ಕಥೆ ಯಾರಿಗೂ ಗೊತ್ತೇ ಆಗಲಿಲ್ಲ.
1 Comment