ಸತ್ಯ ನದಿಯಂತೆ…. ಹೌದೆ? : ಝೆನ್ ಕಥೆ

tao

ಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ. ಅವನ ಸುತ್ತ ಶಿಷ್ಯರೆಲ್ಲ ನೆರೆದಿದ್ದರು. ಹಿರಿಯ ಶಿಷ್ಯ ಮಾಸ್ಟರ್ ನತ್ತ ಬಾಗಿ ಕಿವಿಯಲ್ಲಿ ಮಾತಾಡಿದ.

“ ಮಾಸ್ಟರ್, ಇಲ್ಲಿ ನೆರೆದಿರುವ ಶಿಷ್ಯರಿಗಾಗಿ ನಿಮ್ಮ ಕೊನೆಯ ಸಂದೇಶವೇನಾದರೂ ಇದೆಯೆ?”

ಮಾಸ್ಟರ್ ನಿಧಾನವಾಗಿ ಕಣ್ತೆರೆಯುತ್ತ ಹಿರಿಯ ಶಿಷ್ಯನ ಕಿವಿಯಲ್ಲಿ ಸಣ್ಣ ದನಿಯಲ್ಲಿ ಹೇಳಿದ.

“ ಅವರಿಗೆಲ್ಲ ಹೇಳು, ಸತ್ಯ ನದಿಯಂತೆ”

ಹಿರಿಯ ಶಿಷ್ಯ ತನ್ನ ಪಕ್ಕ ಕುಳಿತವನ ಕಿವಿಯಲ್ಲಿ ಮಾಸ್ಟರ್ ಹೇಳಿದ ಮಾತು ಹೇಳಿದ, ಸತ್ಯ ನದಿಯಂತೆ.

ಹೀಗೆ ಪ್ರತಿಯೊಬ್ಬರೂ ತಮ್ಮ ಪಕ್ಕದಲ್ಲಿ ಕುಳಿತವರ ಕಿವಿಯಲ್ಲಿ ಸರತಿಯಂತೆ ಈ ಮಾತು ಹೇಳುತ್ತ ಹೋದರು.

ಈ ಮಾತು ಕೊನೆಯಲ್ಲಿ ಕುಳಿತಿದ್ದ ಶಿಷ್ಯನ ಕಿವಿ ಮುಟ್ಟಿದಾಗ, ಅವ ತಿರುಗಿ ಪ್ರಶ್ನೆ ಮಾಡಿದ

“ ಈ ಮಾತಿನ ಅರ್ಥ ಏನು ? “

ಈ ಪ್ರಶ್ನೆ ಮತ್ತೆ ಮೊದಲಿನಂತೆ ಮತ್ತೆ ಎಲ್ಲ ಕಿವಿಗಳ ಮೂಲತ ಹಾಯ್ದು, ವಾಪಸ್ ಹಿರಿಯ ಶಿಷ್ಯನನ್ನು ತಲುಪಿತು.

ಹಿರಿಯ ಶಿಷ್ಯ ಮಾಸ್ಟರ್ ನತ್ತ ಬಾಗಿ ಅವನ ಕಿವಿಯಲ್ಲಿ ಕೇಳಿದ
“ ಸತ್ಯ ನದಿಯಂತೆ, ಈ ಮಾತಿನ ಅರ್ಥ ಏನು ಮಾಸ್ಟರ್ ?”

ಮಾಸ್ಟರ್ ನಿಧಾನವಾಗಿ ಕಣ್ತೆರೆದು ಸಣ್ಣ ದನಿಯಲ್ಲಿ ಹೇಳಿದ

“ ಈ ಮಾತು ವಾಪಸ್ ನನ್ನ ಕಿವಿಗೆ ಬಂದಿದೆಯೆಂದರೆ, ಒಂದಂತೂ ಪಕ್ಕಾ ಆಯ್ತು, ಸತ್ಯ ನದಿಯಂತಲ್ಲ”

(ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ)

Leave a Reply