ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ ಅದು ಮಾತ್ರ ಅಸೀಮವೂ ಅನಂತವೂ ಆಗಿರಲು ಸಾಧ್ಯ ~ Whosoever Ji
ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ
ದೇಹವು ನಾಲ್ಕು ಗೋಡೆಗಳಂತೆ ಇದೆ. ಚೇತನವು ನಡುವಣ ಆಕಾಶದಂತೆ. ನಾಲ್ಕು ಗೋಡೆಗಳ ನಡುವೆ ಬಂಧಿತವಾದ ಆಕಾಶಕ್ಕೆ ತಾನು ಕೋಣೆಯೇ ಎನ್ನಿಸುವಂತೆ, ಈ ದೇಹದೊಳಗಿನ ಚೇತನಕ್ಕೆ ತಾನು ದೇಹವೇ ಅನ್ನುವ ಭ್ರಮೆ ಹುಟ್ಟಿಕೊಳ್ಳುತ್ತದೆ. ವಾಸ್ತವವಾಗಿ ಅಂಥದೇನೂ ಇಲ್ಲ. ಅದೊಂದು ಕಲ್ಪನೆಯಷ್ಟೆ. ಗೋಡೆಗಳನ್ನ ಉರುಳುಬೀಳಿಸಿದರೆ ಕೋಣೆ ಎಲ್ಲಿ ಉಳಿಯುತ್ತದೆ? ನಾಲ್ಕು ಗೋಡೆಗಳ ನಡುವೆ ಆಕಾಶ ಏನಿತ್ತು, ಅದು ಆಗಲೂ ಅಲ್ಲೇ ಇತ್ತು, ಅನಂತರವೂ ಅಲ್ಲೇ ಇರುವುದು. ನೀವು ಮನೆ ಕಟ್ಟುವಾಗ ಖಾಲಿ ಆಕಾಶವನ್ನು ಎಲ್ಲಿಂದಲಾದರೂ ತಂದಿಡುತ್ತೀರೇನು? ಅದನ್ನ ಎಲ್ಲಿಂದಲೇ ತೆಗೆದುಕೊಂಡು ಬಂದು ಗೋಡೆಗಳ ನಡುವೆ ಎಸೆಯುತ್ತೀರೇನು? ಇಲ್ಲವಲ್ಲ?
ಚೇತನವೂ ಹಾಗೆಯೇ… ಆಕಾಶದಂತೆ. ಅದು ಆಕಾಶಕ್ಕಿಂತಲೂ ಹೆಚ್ಚು ಸೂಕ್ಷ್ಮವಾದುದು. ಈ ದೃಗ್ಗೋಚರವಾದ, ಅನುಭೂತಿಜನ್ಯ ಆಕಾಶವು ಚೇತನದಲ್ಲಿ ಸಮಾಹಿತಗೊಂಡಿದೆಯೇ ಹೊರತು ಚೇತನವು ಆಕಾಶದೊಳಗಿಲ್ಲ. ಚೇತನ ಹಾಗೂ ದೇಹದ ಮಿಲನದಿಂದ ಒಂದು ಹೊಸ ವಸ್ತು ಹುಟ್ಟಿಕೊಳ್ಳುತ್ತದೆ. ನಾವು ಅದನ್ನು ‘ಭಾವ’ ಎಂದು ಕರೆಯುತ್ತೇವೆ.
‘ನಾನು ಇದ್ದೇನೆ’ ಎನ್ನುವಲ್ಲಿ ‘ಇದ್ದೇನೆ’ ಎನ್ನುವುದು ಸತ್ಯ. ಇರುವಿಕೆಯು ವಾಸ್ತವ ಸ್ಥಿತಿಯಾಗಿದೆ. ದೇಹವೂ ಇದೆ, ಅಸ್ತಿತ್ವವೂ ಇದೆ. ಆದರೆ ಈ ‘ನಾನು’ ಎಲ್ಲಿದೆ? ಈ ‘ನಾನು’ ಅನ್ನೋದು ನಮ್ಮ ಊಹೆಯ ಅವಸ್ಥೆಯಾಗಿದೆ. ವಸ್ತುತಃ ‘ನಾನು’ ಎನ್ನುವ ಯಾವ ಸಂಗತಿಯೂ ಇಲ್ಲ. ದೇಹದಲ್ಲಿ ಚೇತನದ ಉಪಸ್ಥಿತಿಯಿಂದಲಷ್ಟೆ ಶರೀರವು ಸಜೀವಗೊಳ್ಳುತ್ತದೆ, ದೇಹದಲ್ಲಿ ಚೇತನದ ಉಪಸ್ಥಿತಿಯಿಂದಾಗಿ ‘ನಾನು ಇದ್ದೇನೆ’ ಎನ್ನುವ ಭಾವವು ಉದ್ದೀಪನಗೊಳ್ಳುತ್ತದೆ.
ಕೀಟವು ಹಾರುತ್ತಿದೆ ಎಂದುಕೊಳ್ಳಿ. ಈ ಕೀಟದ ಚಲನೆಯು ಅದರೊಳಗೆ ಚೇತನ ಇರುವುದನ್ನು ನಿರೂಪಿಸುತ್ತದೆ. ಚೇತನ ಇಲ್ಲದೆ ಹೋಗಿದ್ದಲ್ಲಿ ಈ ಕೀಟವು ಚಲಿಸುತ್ತಿತ್ತೇನು? ಅದು ಯಾವುದೇ ಪ್ರಾಣಿಯಾಗಿರಲಿ, ಯಾವುದೇ ಬಗೆಯ ಜೀವಿಯಾಗಿರಲಿ… ಚೇತನದ ಅಭಾವವಿದ್ದರೆ ಅದು ಸಕ್ರಿಯವಾಗಿರಲು ಸಾಧ್ಯವಿಲ್ಲ, ಚಲನೆ ಸಾಧ್ಯವಿಲ್ಲ. ದೇಹವು ಕೀಟದ್ದಾಗಿರಲಿ, ಪಶು – ಪಕ್ಷಿಯದ್ದಾಗಿರಲಿ, ಅಥವಾ ಮನುಷ್ಯನದ್ದಾಗಿರಲಿ…. ಈ ಎಲ್ಲ ದೇಹಗಳಲ್ಲಿ ಇರುವ ಸಮಾನವಾಗಿರುವುದು ಯಾವುದು? ಒಂದೇ ರೀತಿ ಇರುವಂಥದ್ದು ಏನು? ಏನಾದರೊಂದು ಸಾಮಾನ್ಯಾಂಶ ಇರಲಿಕ್ಕೇ ಬೇಕು. ಅದು ಏನು?
ಅದೇ ‘ಚೇತನ’. ಚೇತನವು ಎಲ್ಲರಲ್ಲೂ ಸಮಾನವಾಗಿರುತ್ತದೆ. ಚೇತನಕ್ಕೆ ರೂಪವಾಗಲೀ ಆಕಾರವಾಗಲೀ ಇರುವುದಿಲ್ಲ. ವಿದ್ಯುತ್ತಿಗೆ ಯಾವುದಾದರೂ ರೂಪವಿದೆಯೇ? ಕರೆಂಟನ್ನು ಯಾರಾದರೂ ಕಂಡಿದ್ದೀರಾ? ಯಾವ ವಸ್ತುವಿಗೆ ಆಕಾರವಿರುತ್ತದೆಯೋ ಅದನ್ನು ಮಾತ್ರ ನಾವು ನೋಡಲು ಸಾಧ್ಯ. ಯಾವುದಕ್ಕೆ ಆಕಾರವೇ ಇರುವುದಿಲ್ಲವೋ ಅದನ್ನು ನೋಡುವುದು ಅಸಂಭವ.
ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ ಅದು ಮಾತ್ರ ಅಸೀಮವೂ ಅನಂತವೂ ಆಗಿರಲು ಸಾಧ್ಯ. ಇಲ್ಲಿ ಕಾಣುತ್ತಿರುವ ಆಕಾಶವೇನಿದೆಯೋ ಇದು ಪರಮಾತ್ಮನಿಂದ ವ್ಯಾಪ್ತವಾಗಿದೆ. ಯಾವುದೆಲ್ಲವೂ ಇಲ್ಲಿ ಕಾಣುತ್ತಿವೆಯೋ – ಯಾವುದೆಲ್ಲವೂ – ಅವೆಲ್ಲದರಲ್ಲಿ ಪರಮಾತ್ಮನು ವ್ಯಾಪ್ತನಾಗಿದ್ದಾನೆ. ನೀವು ಎಲ್ಲಿಗೇ ಹೋಗಿ, ಕುಳಿತುಕೊಳ್ಳಿ, ನಿಂತುಕೊಳ್ಲಿ… ಅಲ್ಲೆಲ್ಲ ಪರಮಾತ್ಮ ಉಪಸ್ಥಿತನಿರುತ್ತಾನೆ.
‘ನಾನು’ ಎನ್ನುವುದು ಈ ದೇಹವನ್ನು ಸೂಚಿಸಲು ಇರುವ ಒಂದು ವಿಚಾರ, ಒಂದು ಕಾನ್ಸೆಪ್ಟ್, ಒಂದು ಶಬ್ದ, ಒಂದು ಧ್ವನಿಯಷ್ಟೇ. ಈ ದೇಹವು ಅಸ್ತಿತ್ವದಲ್ಲಿರುವುದು ಚೇತನದ ಕಾರಣದಿಂದಾಗಿ. ಚೇತನದ ಉಪಸ್ಥಿತಿಯಿಂದಾಗಿ ‘ಇದ್ದೇನೆ’ ಎನ್ನುವ ಭಾವವು ಸಾಧ್ಯವಾಗುತ್ತದೆ. ‘ಇದ್ದೇನೆ’ ಎನ್ನುವುದು ಅಸ್ತಿತ್ವ. ‘ಇರುವಿಕೆ’ ಎಂದರೆ ತಿಳಿಯುವಿಕೆ. ಅಸ್ತಿತ್ವ ಇರದ ಹೊರತು ತಿಳಿವು ಸಂಭವಿಸುವುದಿಲ್ಲ. ಇದರರ್ಥ, ‘ತಿಳಿಯುವಿಕೆ’ ಹಾಗೂ ‘ಇರುವಿಕೆ’ಗಳೆರಡೂ ಬೆಸೆದುಕೊಂಡಿರುತ್ತವೆ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ. ಚೇತನ ಇಲ್ಲವಾದಾಗ ಅಸ್ತಿತ್ವದ ಬೋಧೆಯೂ ಇರುವುದಿಲ್ಲ. ಅಸ್ತಿತ್ವದ ಬೋಧೆಯೇ ಇಲ್ಲದ ಮೇಲೆ ಅರಿವಿನ ಬೋಧೆಯೂ ಇರುವುದಿಲ್ಲ. ಇದರರ್ಥ – ಚೇತನವು ಇರುವಿಕೆಯ ಅನುಭೂತಿಯ ಜೊತೆಜೊತೆಗೇ ಅರಿವಿನ ಕ್ಷಮತೆಯನ್ನೂ ಕೊಡುತ್ತದೆ.
ಈಗ ಇಷ್ಟನ್ನು ಸ್ಪಷ್ಟ ಮಾಡಿಕೊಳ್ಳಬೇಕು. ಚೇತನವಿದೆಯಾದರೆ ಅಸ್ತಿತ್ವ ಇರುತ್ತದೆ. ಅಸ್ತಿತ್ವ ಇರುವಲ್ಲಿ ಅರಿವು ಉಂಟಾಗುತ್ತದೆ. ಇವೆಲ್ಲವೂ ಒಂದೇ ಸಂಗತಿ. ಇದನ್ನು ಹೀಗೆ ಅರ್ಥೈಸಿಕೊಳ್ಳೋಣ: ಮೃತ ದೇಹವೊಂದಿದೆ. ಅದರಲ್ಲಿ ಅರಿವಿನ ಕ್ಷಮತೆ ಇಲ್ಲ, ಏಕೆಂದರೆ ಅದರಲ್ಲಿ ಚೇತನವಿಲ್ಲ. ಯಾರು ಕುಳಿತಿದ್ದಾರೆ, ಯಾರು ನಿಂತಿದ್ದಾರೆ, ಯಾರು ಹಾಡುತ್ತಿದ್ದಾರೆ, ಯಾರು ಓಡಾಡುತ್ತಿದ್ದಾರೆ – ಈ ಯಾವುದೂ ಅದಕ್ಕೆ ಗೊತ್ತಾಗುವುದಿಲ್ಲ. ಆ ದೇಹದಲ್ಲಿ ಚೇತನ ಇಲ್ಲವಾಗಿರುವುದರಿಂದ ಅದಕ್ಕೆ ಈ ಯಾವುದೂ ತಿಳಿಯುವುದಿಲ್ಲ.
ಈ ನಾಲ್ಕೂ ಸುತ್ತಲಲ್ಲಿ, ಎಲ್ಲ ಕಡೆಯಲ್ಲಿ ಹರಡಿಕೊಂಡಿರುವ ಜಗತ್ತು ಏನಿದೆ, ಅದು ವ್ಯಕ್ತ ಚೇತನವಾಗಿದೆ. ಇದನ್ನು ವ್ಯಕ್ತ ಬ್ರಹ್ಮ ಎಂದೂ ಕರೆಯಬಹುದು. ಅವ್ಯಕ್ತ ಚೇತನವು ಇದರ ಮೂಲ ಸ್ರೋತವಾಗಿದೆ. ಅವ್ಯಕ್ತ ಚೇತನ, ಅವ್ಯಕ್ತ ಪರಮಾತ್ಮ, ಅವ್ಯಕ್ತ ಬ್ರಹ್ಮ, ಅಥವಾ ಪರಬ್ರಹ್ಮ. ಈ ಅವ್ಯಕ್ತ ಚೇತನಕ್ಕೆ ವ್ಯಕ್ತಗೊಳ್ಳುವ ಅಪಾರ, ಅಸೀಮ, ಅನಂತ ಸಂಭವಗಳಿವೆ ಹಾಗೂ ಕ್ಷಮತೆಯಿದೆ. ಆದರೆ ವ್ಯಕ್ತಗೊಳ್ಳಲು ಅದಕ್ಕೊಂದು ದೇಹ ಬೇಕಾಗುತ್ತದೆ. ದೇಹ ದೊರಕಿದ ಕೂಡಲೆ ಅದು ವ್ಯಕ್ತವೂ ಆಗುತ್ತದೆ. “ಈ ಜಗತ್ತು ಪರಮಾತ್ಮನ ಶರೀರ”ವೆಂದು ಬಲ್ಲವರು ಹೇಳುತ್ತಾರೆ.
ನೀವು ಮೊಬೈಲ್ ಬಳಸುತ್ತೀರಿ. ಅದರಲ್ಲಿ ದೂರದ ವ್ಯಕ್ತಿಯೊಂದಿಗೆ ಸಂಭಾಷಿಸುತ್ತೀರಿ. ಅವರ ಧ್ವನಿ ಅಲ್ಲಿಂದ ಪ್ರವಹಿಸಿ ಬಂದು ನಿಮ್ಮ ಮೊಬೈಲ್ ಮೂಲಕ ನಿಮ್ಮ ಕಿವಿ ತಲಪುತ್ತದೆ. ನಿಮ್ಮ ಮೊಬೈಲಿನಲ್ಲಿ ಆ ಧ್ವನಿಯು ವ್ಯಕ್ತಗೊಳ್ಳುತ್ತದೆ. ಅದು ಪ್ರಕಟಗೊಳ್ಳಲು ಅಥವಾ ವ್ಯಕ್ತಗೊಳ್ಳಲು ಒಂದು ವ್ಯವಸ್ಥೆ, ಒಂದು ಉಪಕರಣ ಬೇಕಾಗುತ್ತದೆ.
ಧ್ವನಿಯು ಪ್ರಕಟಗೊಳ್ಳಲು ಮೊಬೈಲ್ ಥರದ ಉಪಕರಣದ ಅಗತ್ಯ ಇರುವಂತೆಯೇ ಚೇತನವು ಪ್ರಕಟಗೊಳ್ಳಲು, ಚೇತನದ ಇರುವಿಕೆಯನ್ನು ವ್ಯಕ್ತಪಡಿಸಲು, ಒಂದು ವ್ಯವಸ್ಥೆ ಇರುವುದು ಅತ್ಯಗತ್ಯ. ಈ ದೇಹವು ಅಂತಹಾ ಒಂದು ವ್ಯವಸ್ಥೆಯೇ ಆಗಿದೆ. ಇದು ಚೇತನವು ಪ್ರಕಟಗೊಳ್ಳಲು ಒಂದು ಉಪಕರಣವಾಗಿದೆ. ಈ ದೇಹವೆಂಬ ಹೆಸರಿನ ಉಪಕರಣವು ಮಾನವ ನಿರ್ಮಿತವಾದ ಯಾವುದೇ ಉಪಕರಣಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ.
ಈ ದೇಹದಲ್ಲಿರುವ ಮೆದುಳು ಒಂದು ಕಂಪ್ಯೂಟರಿನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಇಡಿಯ ದೇಹವನ್ನು ಚಾಲನೆಗೊಳಿಸುತ್ತದೆ ಹಾಗೂ ನಿಯಂತ್ರಿಸುತ್ತದೆ. ವಿಜ್ಞಾನಿಗಳಿಂದ ನಿರ್ಮಾಣಗೊಂಡ ಕಂಪ್ಯೂಟರ್ ಇದರ ಎದುರು ಏನೂ ಅಲ್ಲ. ಮೆದುಳು ಅದಕ್ಕಿಂತ ಹೆಚ್ಚು ಜಟಿಲ ಮತ್ತು ಸೂಕ್ಷ್ಮವಾಗಿರುತ್ತದೆ.
(ಮುಂದುವರಿಯುವುದು…..)