ಅಧ್ಯಾತ್ಮ ಡೈರಿ : ಎಷ್ಟು ಬೆರೆತರೂ ಒಂದಾಗಲು ಸಾಧ್ಯವಾಗದು

ನಮ್ಮ ಬದುಕನ್ನು ನಾವೇ ಬದುಕಬೇಕು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ. ನಮ್ಮ ಆಲೋಚನೆಗಳು, ಭಾವನೆಗಳು ಒಂದಾಗಬಹುದು. ಒಂದೇ ರೀತಿ ನಾವು ಯೋಚಿಸಲು, ಪರಸ್ಪರ ಕಾಳಜಿ ತೋರಲು ಸಾಧ್ಯವಾಗಬಹುದು. ಆದರೆ ನಾವು ಎರಡು ದೇಹಗಳಾಗಿರುತ್ತೇವೆ. ನಮ್ಮನಮ್ಮ ದೇಹಗಳ ಒಳಗೆ ನಮ್ಮ ನಮ್ಮ ಆತ್ಮವಿರುತ್ತದೆ ~ ಅಲಾವಿಕಾ

“ಉಸಿರೇ ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತದೆ. ಇನ್ನು, ಪ್ರೀತಿಪಾತ್ರರು ತೊರೆದು ಹೋಗುವುದೇನು ಮಹಾ?” ಎಂದು ಕೇಳುತ್ತದೆ ಒಂದು ಗಜಲ್.

ಬದುಕಿನಲ್ಲಿ ಯಾವುದನ್ನು ಎಷ್ಟು ಸ್ವೀಕರಿಸಬೇಕು, ಎಷ್ಟು ನಮ್ಮದಾಗಿಸಿಕೊಳ್ಳಬೇಕು, ನಮ್ಮನ್ನು ಎಷ್ಟು ಕೊಳ್ಳಬೇಕು – ಈ ಯಾವುದನ್ನೂ ಯೋಚಿಸದೆ ನಾವು ಸಂಬಂಧಗಳನ್ನು ಬೆಸೆದುಕೊಳ್ಳುತ್ತೇವೆ. ಯೋಚಿಸದೆ ಹೀಗೆ ತೊಡಗಿಸಿಕೊಂಡ ಫಲವಾಗಿ ಯಾತನೆಯನ್ನೂ ಉಣ್ಣುತ್ತೇವೆ. ಬೆಸುಗೆಗಳು ಬಂಧನವಾದಾಗ ಅದರ ಮೂಲ ಕಾರಣ ನಾವೇ ಆಗಿದ್ದೇವೆಂದು ನಮಗೆ ಗೊತ್ತೇ ಆಗುವುದಿಲ್ಲ. ಕಾರಣಗಳನ್ನು ಹೊರಗೆ ಹುಡುಕುತ್ತಾ, ಇತರರನ್ನು ದೂಷಿಸುತ್ತಾ ಕಾಲಹರಣ ಮಾಡುತ್ತೇವೆ. ಇದರಿಂದ ಗಾಯ ಮತ್ತಷ್ಟು ಕೆರಳುತ್ತದೆಯೇ ಹೊರತು ಮಾಯುವುದಿಲ್ಲ.

ಹಾಗೆಂದು ಸಂಬಂಧಗಳನ್ನು ಅಳೆದು ಸುರಿದು ಮಾಡಿಕೊಳ್ಳಲಾಗುತ್ತದೆಯೇ? ಇಂತಿಷ್ಟೇ ಮಿತಿಯಲ್ಲಿರಬೇಕು, ಇಷ್ಟು ಅಳತೆಯಲ್ಲಿರಬೇಕು ಎಂದೆಲ್ಲ ಲೆಕ್ಕ ಹಾಕಲು ಅದೇನು ವ್ಯವಹಾರವೇ? ಖಂಡಿತಾ ಅಲ್ಲ. ಆದರೆ, ಭಾವುಕತೆಗಿಂತ, ಅವಲಂಬನೆಗಿಂತ, ವಾಸ್ತವ ಮುಖ್ಯ ಅನ್ನುವ ಅರಿವು ನಮಗಿರಬೇಕು.

ಯಾವುದು ಈ ವಾಸ್ತವ? ನಮ್ಮ ಬದುಕನ್ನು ನಾವೇ ಬದುಕಬೇಕು ಅನ್ನುವುದು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ ಅನ್ನುವುದು. ನಮ್ಮ ಆಲೋಚನೆಗಳು, ಭಾವನೆಗಳು ಒಂದಾಗಬಹುದು. ಒಂದೇ ರೀತಿ ನಾವು ಯೋಚಿಸಲು, ಪರಸ್ಪರ ಕಾಳಜಿ ತೋರಲು ಸಾಧ್ಯವಾಗಬಹುದು. ಆದರೆ ನಾವು ಎರಡು ದೇಹಗಳಾಗಿರುತ್ತೇವೆ. ನಮ್ಮನಮ್ಮ ದೇಹಗಳ ಒಳಗೆ ನಮ್ಮ ನಮ್ಮ ಆತ್ಮವಿರುತ್ತದೆ. ಆಯಾ ದೇಹದ ಆತ್ಮಗಳ ಕರ್ಮಾನುಸಾರ ಬದುಕು ಸಾಗುತ್ತದೆ. ಹೀಗಾಗಿ ಎರಡು ಆತ್ಮಗಳು ಒಂದರದೊಂದರ ಬದುಕಿಗೆ ಬಾಧ್ಯಸ್ಥವಾಗಿವುದಿಲ್ಲ.

ಆದ್ದರಿಂದ ನಾವು ಯಾವ ಸಂಬಂಧದಲ್ಲಿ ಎಷ್ಟು ಬೆಸೆದುಕೊಂಡರೂ ನಾವು ಪ್ರತ್ಯೇಕವಾಗಿಯೇ ಇರುತ್ತೇವೆ. ನಮ್ಮ ನಮ್ಮ ಬದುಕಿನ ದಾರಿಯಲ್ಲಿ ತಿರುಗಿಕೊಳ್ಳುವುದು ಅನಿವಾರ್ಯವಾದಾಗ ತಿರುಗಲೇ ಬೇಕಾಗುತ್ತದೆ. ಹಾಗೆಯೇ ನಮ್ಮನಮ್ಮ ಪ್ರೀತಿಪಾತ್ರರಿಗೂ ಅವರ ಬದುಕು, ಅದರ ದಾರಿ, ದಾರಿಯ ತಿರುವುಗಳು ಇರುತ್ತವೆ. ಅವರು ಹೊರಳಿಕೊಳ್ಳುವಾಗ ಅಷ್ಟು ಕಾಲ ಜೊತೆಗಿದ್ದ ಗೌರವದಿಂದ ವಿದಾಯ ಕೋರಬೇಕೇ ಹೊರತು ದ್ವೇಷ ಸಾಧಿಸುವುದಾಗಲೀ ನಿಂದಿಸುವುದಾಗಲೀ ಸರಿಯಲ್ಲ.

ಕೆಲವರು ತೀರಾ ಅತಿರೇಕದ ಹಂತಕ್ಕೆ ಹೋಗಿ ತಮಗೆ ತಾವೇ ಅಪಾಯ ತಂದೊಡ್ಡಿಕೊಳ್ಳುತ್ತಾರೆ. ಇನ್ನು ಕೆಲವರು ತಾವು ಪ್ರೀತಿಸಿದ್ದವರಿಗೆ ಅಪಾಯ ಉಂಟುಮಾಡಲು ಹವಣಿಸುತ್ತಾರೆ. ವಾಸ್ತವದಲ್ಲಿ ಅಂಥವರು ಪ್ರೇಮಿಸಿಯೇ ಇರುವುದಿಲ್ಲ. ಅವರು ಮತ್ತೊಂದು ವ್ಯಕ್ತಿಯ ಮೇಲೆ ಒಡೆತನ ಸಾಧಿಸುವ ಯತ್ನ ನಡೆಸಿರುತ್ತಾರೆ. ಅದು ಕೈಗೂಡದೆ ಹೋದಾಗ ಅಹಂಕಾರ ಘಾಸಿಗೊಂಡು, ತಮ್ಮ ಅಥವಾ ಪ್ರೇಮಿ ಎಂದುಕೊಂಡವರ ಜೀವಕ್ಕೆ ಹಾನಿ ಉಂಟುಮಾಡಲು ಮುಂದಾಗುತ್ತಾರೆ.

ಆದ್ದರಿಂದ ನಾವು ಸಂಬಂಧ ಬೆಸೆಯುವಾಗ ಆ ಸಂಬಧವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಪ್ರೇಮಿಸುವಾಗ ನಿಜವಾಗಿಯೂ ನಾವು ಪ್ರೇಮಿಸುತ್ತಿದ್ದೇವೆಯೇ, ಅಧಿಕಾರ ಅಥವಾ ಒಡೆತನವನ್ನು ಸಾಧಿಸಲು ಯತ್ನಿಸುತ್ತಿದ್ದೇವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ.

ಇಷ್ಟಕ್ಕೂ ನಾವು ಹಾಗೆ ಎರಡುಳಿಯದಂತೆ ಪ್ರೇಮಿಸಬಹುದಾಗಿರುವುದು ಭಗವಂತನನ್ನು ಮಾತ್ರ. ನಮ್ಮ ದೇಹ ಸಂಪೂರ್ಣವಾಗಿ ಪಂಚಭೂತಗಳಲ್ಲಿ ಬೆರೆತುಹೋಗುವುದಿಲ್ಲವೆ? ಈ ಪ್ರಕೃತಿಯು ದೇವರಲ್ಲದೆ ಬೇರೆಯೇ? ಹಾಗೆಯೇ ಆತ್ಮವೂ… ಎಲ್ಲ ಆತ್ಮಗಳ ಮೂಲಸ್ರೋತವಾದ ಪರಮಾತ್ಮನ ಬಳಿಗೇ ನಾವು ಮರಳುವುದು. ಅವನನ್ನು ತಲುಪುತ್ತಲೇ ಅವನಲ್ಲಿ ಆತ್ಮವು ಲೀನವಾಗಿಬಿಡುತ್ತದೆ. ಆದ್ದರಿಂದ, ಭಗವಂತನ ಪ್ರೇಮವಷ್ಟೇ ಪರಿಪೂರ್ಣವಾದ ಪ್ರೇಮ. ಆದ್ದರಿಂದಲೇ ಅಲ್ಲಿ ನಿರಾಶೆಗೆ, ನೋವಿಗೆ, ವೈಫಲ್ಯಕ್ಕೆ ಅವಕಾಶವೇ ಇಲ್ಲ.

ಅದು ಅಲೌಕಿಕದ ಮಾತಾಯಿತು. ಲೌಕಿಕದಲ್ಲಿ ಇದನ್ನು ನೆನಪಿಟ್ಟುಕೊಂಡರೆ, ನಾವು ನಮ್ಮ ಅಭೀಪ್ಸೆಗಳನ್ನು ಪ್ರೇಮವೆಂದು ಭಾವಿಸಿ ಕೊರಗುವುದು ತಪ್ಪುತ್ತದೆ.; ಮತ್ತೊಬ್ಬರನ್ನು ಕೊರಗಿಸುವುದು ಕೂಡಾ.

Leave a Reply