ಏಳೆಂಟು ಕಪ್ಪೆಗಳದೊಂದು ಗುಂಪು ಕಾಡಿನಲ್ಲಿ ಕುಪ್ಪಳಿಸುತ್ತ ಹೋಗುತ್ತಿದ್ದವು. ಅವುಗಳಲ್ಲಿ ಎರಡು ಕಪ್ಪೆಗಳು ಗಮನ ತಪ್ಪಿ ಹೊಂಡದೊಳಗೆ ಜಿಗಿದುಬಿಟ್ಟವು.
ಆ ಎರಡು ಕಪ್ಪೆಗಳು ಹೊಂಡದೊಳಗೆ ಬಿದ್ದದ್ದೇ, ಉಳಿದ ಕಪ್ಪೆಗಳು ವಟಗುಡುತ್ತಾ ಅದರ ಸುತ್ತ ನೆರೆದವು. ಹೊಂಡ ಸಾಕಷ್ಟು ಆಳವಾಗಿಯೇ ಇತ್ತು. ಅದರಿಂದ ಹೊರಗೆ ಬರುವುದು ಕಷ್ಟಸಾಧ್ಯವೆಂದು ಯಾರಿಗಾದರೂ ಅನ್ನಿಸುತ್ತಿತ್ತು.
ಹೊಂಡದಲ್ಲಿ ಬಿದ್ದ ಕಪ್ಪೆಗಳು ಮೇಲಕ್ಕೆ ಜಿಗಿಯಲು ಶುರುಮಾಡಿದವು. ಹೇಗಾದರೂ ಮಾಡಿ ಹೊಂಡದ ಅಂಚು ತಲುಪಿದರೆ ಸಾಕು ಎಂದು ಶಕ್ತಿ ಮೀರಿ ಜಿಗಿಯತೊಡಗಿದವು. ಆದರೆ ಹೊಂಡದ ಸುತ್ತ ನಿಂತ ಕಪ್ಪೆಗಳು ಸಲಹೆ ನೀಡಲು ಶುರು ಮಾಡಿದವು. “ಸುಮ್ಮನೆ ಪ್ರಯತ್ನ ಮಾಡ್ತಿದ್ದೀರಿ. ನೀವು ಮೇಲೆ ಬರೋದು ಕಷ್ಟವಿದೆ.” ಎಂದು ಒಂದು ಕಪ್ಪೆ ಹೇಳಿದರೆ, “ಕಷ್ಟವೇನು! ಸಾಧ್ಯವೇ ಇಲ್ಲ. ಸುಮ್ಮನೆ ಸಾಯುವಾಗ ಕಾಲುನೋಯಿಸಿಕೊಳ್ಳೋದು ಯಾಕೆ?” ಎಂದಿತು. ಮತ್ತೊಂದು ಕಪ್ಪೆ, “ನೀವು ಹೊಂಡದಲ್ಲೇ ಕೊನೆಯಾಗಬೇಕು. ಕೊನೆಯ ಕ್ಷಣಗಳನ್ನು ಶಾಂತಿಯಿಂದ ಕಳೆಯಿರಿ” ಎಂದಿತು.
ಸುತ್ತ ನಿಂತ ಕಪ್ಪೆಗಳು ಹೀಗೆ ವಟಗುಡುವುದನ್ನು ಕೇಳಿಸಿಕೊಂಡ ಒಂದು ಕಪ್ಪೆಗೆ ಜಂಘಾಬಲವೇ ಉಡುಗಿದಂತಾಯ್ತು. ಸಂಗಾತಿಗಳು ಹೇಳುವಂತೆ ಬಹುಶಃ ಇಲ್ಲಿಂದ ಮೇಲೆ ಹೋಗುವುದು ಸಾಧ್ಯವಿಲ್ಲ ಅನ್ನಿಸಿತು ಅದಕ್ಕೆ. ಆ ಯೋಚನೆ ಬಂದಕೂಡಲೇ ಅದಕ್ಕೆ ದಣಿವಾಗತೊಡಗಿತು. ಜಿಗಿಯಲಾಗದೆ ಕುಸಿದು ಬಿದ್ದು ಸತ್ತುಹೋಯಿತು.
ಆದರೆ ಇನ್ನೊಂದು ಕಪ್ಪೆ. ಹೊಂಡದ ಸುತ್ತ ನಿಂತ ಕಪ್ಪೆಗಳು ಏನು ವಟಗುಡುತ್ತಿದ್ದರೂ ಎಷ್ಟು ವಟಗುಡುತ್ತಿದ್ದರೂ ತನ್ನ ಪ್ರಯತ್ನ ನಿಲ್ಲಿಸದೆ ಜಿಗಿಯುತ್ತಿತ್ತು. ಸಲದಿಂದ ಸಲಕ್ಕೆ ಎತ್ತರೆತ್ತರ ಜಿಗಿದು ಕೊನೆಗೂ ಹೊಂಡದ ಅಂಚನ್ನು ತಲುಪಲು ಯಶಸ್ವಿಯಾಯಿತು.
ಮೇಲೆ ಬಂದು ದಣಿವಾರಿಸಿಕೊಂಡ ಕಪ್ಪೆ, ಅಲ್ಲಿದ್ದ ಕಪ್ಪೆಗಳನ್ನೆಲ್ಲ ಒಂದೆಡೆ ಕರೆದು, “ನನಗೆ ಕಿವುಡು. ನೀವೇನು ಹೇಳುತ್ತಿದ್ದಿರೆಂದು ಕೇಳಿಸಲಿಲ್ಲ. ನೀವು ನನ್ನನ್ನು ಮೇಲಕ್ಕೆ ಬರುವಂತೆ ಪ್ರೋತ್ಸಾಹವನ್ನೇ ನೀಡಿರುತ್ತೀರಿ. ನಿಮ್ಮ ಈ ಕಾಳಜಿಗೆ ಧನ್ಯವಾದ” ಎಂದು ಕೈಮುಗಿಯಿತು.
(ಸಂಗ್ರಹ ಮತ್ತು ಅನುವಾದ: ಅಲಾವಿಕಾ)