ಸಮುದ್ರವನ್ನು ಸರಿಸಿ ದ್ವೀಪವನ್ನು ಬಿಡಿಸಿ, ಸಂಸಾರ ನಡೆಸಿದ ದೇವ ದಂಪತಿ :  ಸೃಷ್ಟಿಕಥನಗಳು #3

ಶಿಂಟೋ, ಜಪಾನ್ ದೇಶದ ಪ್ರಾಚೀನ ಧರ್ಮ. ಇದೊಂದು ಜನಪದವೂ ಹೌದು. ಶಿಂಟೋ ಸೃಷ್ಟಿ ಕಥನಗಳು ಕಮಿ ಎಂದು ಕರೆಯುವ ದೇವತೆಗಳ ಜೋಡಿಯು ಭೂಮಿಗೆ ಬಂದು ಸಂಸಾರ ಹೂಡಿ ಸೃಷ್ಟಿ ಕಾರ್ಯ ನಡೆಸಿದರೆಂದು ಹೇಳುತ್ತವೆ.

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

shin

ಸೃಷ್ಟಿಗೂ ಮೊದಲು ಖಾಲಿ ಅವಕಾಶದಲ್ಲೊಂದು ದೊಡ್ಡ ಮೊಟ್ಟೆ ಇತ್ತು. ಅದರ ಕೆಳಗಿನ ಅರ್ಧದಲ್ಲಿ ಕ್ರಿಮಿ ಕೀಟಗಳೂ, ಕೆಸರೂ ತುಂಬಿಕೊಂಡಿದ್ದವು. ಮೇಲಿನ ಅರ್ಧದಲ್ಲಿ ಸ್ವಚ್ಛ ಮತ್ತು ಘಮಲಿನಿಂದ ಕೂಡಿದ ದ್ರವವಿತ್ತು. ಈ ಮೊಟ್ಟೆಯು ಬಿರಿದು ಎರಡು ಹೋಳಾಗಿ, ಕೆಸರು – ಕೀಟಗಳಿದ್ದ ಭಾಗವು ಭೂಮಿಯಾಗಿಯೂ ಸ್ವಚ್ಛವಾಗಿದ್ದ ಭಾಗವು ಸ್ವರ್ಗವಾಗಿಯೂ ರೂಪುಗೊಂಡವು.

ಸ್ವರ್ಗವು ರೂಪುಗೊಂಡ ಕೂಡಲೇ ದೇವತೆಗಳು (ಕಮಿಗಳು) ಹುಟ್ಟಿಕೊಂಡರು. ಅವರಲ್ಲಿ ಇಜನಗಿ ನೊ ಮಿಕೊಟೊ ಮತ್ತು ಇಜನಮಿ ನೊ ಮಿಕೊಟೊ ಸೇರಿಕೊಂಡು ಭೂಮಿಯಲ್ಲಿ ಜೀವಿಗಳ ಕೊರತೆಯಿದೆ, ಹೇಗಾದರೂ ಅದನ್ನು ತುಂಬಿಸಬೇಕು ಎಂದು ಮಾತಾಡಿಕೊಂಡರು. ಸ್ವರ್ಗದ ಈಟಿಯನ್ನು ಸಮುದ್ರಕ್ಕೆ ಚುಚ್ಚಿ, ನೀರನ್ನು ಸರಿಸಿ, ನೆಲವನ್ನು ಬಿಡಿಸಿದರು. ಹೀಗೆ ರೂಪುಗೊಂಡ ದ್ವೀಪದ ಹೆಸರು ಓನೋ – ಗೊರೋ – ಜಿಮಾ ಎಂದಾಯಿತು. ಇದರರ್ಥ ‘ಭೂಮಿಯ ಕೇಂದ್ರ’ ಎಂದು.

ಅನಂತರದಲ್ಲಿ ಆ ಇಬ್ಬರು ಕಮಿಗಳು ಭೂಮಿಗೆ ಬಂದು ನೆಲೆಸಿದರು. ಗಂಡ ಹೆಂಡಿರಂತೆ ಸಂಸಾರ ನಡೆಸತೊಡಗಿದ ಇಜನಗಿ ನೊ ಮಿಕೊಟೊ ಮತ್ತು ಇಜನಮಿ ನೊ ಮಿಕೊಟೊ, ಹೆಚ್ಚಿನ ದ್ವೀಪಗಳನ್ನು ಸೃಷ್ಟಿಸಿದರು. ಬೆಟ್ಟ ಗುಡ್ಡಗಳನ್ನೂ, ನದಿಗಳನ್ನೂ ನಿರ್ಮಿಸಿದರು. ಭೂಮಿಯಲ್ಲಿದ್ದುಕೊಂಡೇ ಸ್ವರ್ಗದ ದೇವತೆಗಳನ್ನು ಹೆತ್ತ ಈ ಕಮಿ ದಂಪತಿ, ಕಾಲಕ್ರಮದಲ್ಲಿ ಭೂಮಿಯಲ್ಲಿ ಇತರ ಜೀವಿಗಳನ್ನೂ ಮನುಷ್ಯರನ್ನೂ ಹುಟ್ಟಿಸಿದರು.

ಈ ದೇವ ದಂಪತಿ ನಿರ್ಮಿಸಿದ ದ್ವೀಪಗಳ ಸಮೂಹವೇ ಜಪಾನ್ ದೇಶ. ಹೀಗೆ ಭೂಮಿಯಲ್ಲಿ ಮೊಟ್ಟಮೊದಲು ಸೃಷ್ಟಿಯಾಗಿದ್ದು ಜಪಾನ್. ಮೊದಲ ಮನುಷ್ಯರೂ ಇಲ್ಲಿಯೇ ಸೃಷ್ಟಿಯಾದರು. ಆಮೇಲೆ ಇಲ್ಲಿಂದ ಬೇರೆ ಬೇರೆ ಕಡೆಗಳಲ್ಲಿ ಸಮುದ್ರ ಸರಿಸಿ, ನೆಲವನ್ನು ಬಿಡಿಸಿಕೊಂಡು ದೇಶಗಳನ್ನು ಕಟ್ಟಿದರು (ಎಂದು ಶಿಂಟೋ ಹೇಳುತ್ತದೆ).

ಹೆಚ್ಚಿನ ಮಾಹಿತಿ:  ಶಿಂಟೋ ಎನ್ನುವ ಪದ ಶಿನ್ ಮತ್ತು ತಾವೊ ಪದಗಳಿಂದ ಆಗಿದೆ. ಶಿನ್ ಅಂದರೆ ದೇವತೆಗಳು, ‘ತಾವೋ’ ಅಂದರೆ ದಾರಿ. ‘ಶಿಂಟೋ’ ಅಂದರೆ ‘ದೇವತೆಗಳ ದಾರಿ’. ಶಿಂಟೋ ಒಂದು ಜನಪದವೂ ಹೌದು. ಧರ್ಮವೂ ಹೌದು. ಜಪಾನ್ ದೇಶದಲ್ಲಿ ಬೌದ್ಧ ಧರ್ಮದಷ್ಟೇ ಪ್ರಮುಖವಾಗಿರುವ ಮತ್ತು ಸಂಖ್ಯೆಯನ್ನು ಹೊಂದಿರುವ ಧರ್ಮವಿದು.

ಶಿಂಟೋ ಧರ್ಮ ಯಾರಿಂದಲೂ ಸೃಷ್ಟಿಸಲ್ಪಟ್ಟಿದ್ದಲ್ಲ. ಈ ಧರ್ಮಕ್ಕೆ ಯಾವ ಶಾಸ್ತ್ರಗ್ರಂಥಗಳೂ ಇಲ್ಲ. ಹಾಗೂ ಧಾರ್ಮಿಕ ನೀತಿ ನಿಯಮಗಳಿಲ್ಲ. ಈ ಪ್ರಾಚೀನ ಧರ್ಮವು ಜಪಾನ್’ನಲ್ಲಿ ಹಲವು ಬಗೆಯಲ್ಲಿ, ಹಲವು ಆಚರಣೆಗಳಲ್ಲಿ ಹರಡಿಕೊಂಡಿದೆ.

(ಜಗತ್ತಿನ ಬಹಳಷ್ಟು ಸೃಷ್ಟಿ ಕಥನಗಳು ಮೊದಲಿಗೆ ಬೃಹತ್ತಾದ ಒಂದು ಮೊಟ್ಟೆ ಇತ್ತು ಎಂದು ಶುರುವಾಗುತ್ತವೆ. ವೇದೋಕ್ತ ಸನಾತನ ಧರ್ಮವೂ ‘ಹಿರಣ್ಯಗರ್ಭ’ದ ಕುರಿತು ಹೇಳುತ್ತದೆ. ಮತ್ತಷ್ಟು ಇಂಥಾ ‘ಮೊಟ್ಟೆಯಿಂದ ಸೃಷ್ಟಿ’ ಕಥೆಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ…)

Leave a Reply