ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ
ಯಾವುದು ಪರಿಪೂರ್ಣವೋ
ಅದರ ಮೇಲೆಯೇ ಕಳಂಕದ ಆರೋಪ,
ಆದರೂ ಬಾಗಿಲು ತೆರೆಯಿರಿ
ಈ ಬೆಳಕನ್ನು ಮೊಗೆದು ಮೊಗೆದು ಬಳಸಿರಿ.
ಯಾವುದು ತುಂಬಿಕೊಂಡಿದೆಯೋ
ಅದರ ಮೇಲೆಯೇ ಖಾಲೀ ಎನ್ನುವ ಆಪಾದನೆ
ಬೊಗಸೆ ಒಡ್ಡಿ, ದಾಹ ತೀರುವಷ್ಟು ಕುಡಿಯಿರಿ
ಇದು ತೀರದ ಬಾವಿ.
ಪಕ್ಕಾ ನೇರವಾಗಿರುವುದು, ಬಾಗಿದ ಹಾಗೆ
ಕೌಶಲ್ಯ, ಮಹಾ ಕಠಿಣ
ಸರಾಗ ಮಾತು ಕೂಡ, ಒಂದು ಥರದ ಉಗ್ಗು.
ಚಳಿಯಾದರೆ ನಡೆಯುತ್ತಾ ಇರಿ
ಬಿಸಿಲಾದರೆ ಕದಲಬೇಡಿ
ಸಮಾಧಾನವೇ ಜಗದ ಆಶಯ.