ಹೃದಯದ ಮಾತು ಹೃದಯಕ್ಕೆ ತಲುಪಿಯೇ ತೀರುತ್ತದೆ : ಸೊಹ್ರಾವರ್’ದಿ

ನಮ್ಮ ಹೃದಯಕ್ಕೆ ಹತ್ತಿರವಾದವರ ಮಾತು ನಮಗೆ ರುಚಿಸುತ್ತದೆ. ಉಳಿದವರ ಮಾತು ಸಾಕೆನಿಸುತ್ತದೆ. ಅದನ್ನೇ ಸೊಹ್ರಾವರ್’ದಿ “ಹೃದಯದ ಮಾತು ಹೃದಯಕ್ಕೆ ತಲುಪಿಯೇ ತೀರುತ್ತದೆ; ನಾಲಗೆಯ ಮಾತು ಕಿವಿ ದಾಟುವ ಮೊದಲೇ ಸಾಯುತ್ತದೆ” ಎಂದು ಹೇಳಿರುವುದು. ~ ಸಾಕಿ

vardi

ನಮಗೆ ಮಾತು ಸಂವಹನದ ಅತಿ ದೊಡ್ಡ ಮಾಧ್ಯಮ. ಮನುಷ್ಯನ ಮಾತು ಎಂಬ ವಿಶೇಷತೆಯಿಂದ ಭಾಷೆಗಳು ಹುಟ್ಟಿದವು; ಸಂಸ್ಕೃತಿಗಳು ಬೆಳೆದವು. ಅದರೂ ಮಾತಿನ ಮಹತ್ವ ಅದನ್ನು ಬಳಸುವ ಸಂದರ್ಭವನ್ನು ಅವಲಂಬಿಸಿರುತ್ತದೆ. ಕೋಪದ ಕೈಗೆ ಸಿಕ್ಕ ಮಾತು ಬೈಗುಳವಾಗುತ್ತದೆ. ಅದೇ ಮಾತು ಕಾವ್ಯವೂ ಆಗುತ್ತದೆ. ಪ್ರೇಮಿಗಳ ನಡುವೆ ಪಿಸು ಮಾತಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮನುಷ್ಯ ಸಂಬಂಧಗಳನ್ನು ಕಟ್ಟುವುದು ಮತ್ತು ಕೆಡವುವುದು ಕೂಡ ಇದೆ ಮಾತಿನ ಕೆಲಸ. ಅಂದರೆ ಮಾತು ಅಮಾನುಷವಲ್ಲವಾದ ಕಾರಣ ಮಾತಿನಿಂದ ಉಂಟಾಗುವ ಎಲ್ಲ ಪ್ರತಿಕ್ರಿಯೆಗಳಿಗೂ ನಾವೇ ಕಾರಣ ಆಗಿರುತ್ತೇವೆ. ನಮ್ಮ ನೆಲದ ಹಿರಿಯರು ಹೇಳಿರುವ ‘ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು’ ಎಂಬ ಗಾದೆ ಕೂಡ ಮಾತಿನ ಮಹತ್ವವನ್ನು ಸಾರುತ್ತದೆ.

ಕೆಲವರ ಮಾತು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವುದಿದೆ. ಇನ್ನು ಕೆಲವರದು ಒಮ್ಮೆ ನಿಲ್ಲಿಸಿದರೆ ಸಾಕು ಅಂತ ಅನಿಸುವ ಮಾತು. ಇದಕ್ಕೆ ಮುಖ್ಯವಾದ ಕಾರಣ ಯಾರು ಮಾತಾಡುತ್ತಿದ್ದಾರೆ ಎಂಬುದೇ ಆಗಿರುತ್ತದೆ. ಇದನ್ನೇ ಸೂಫಿ ಸಂತ ಸೊಹ್ರಾವರ್‌ದಿ ಹೇಳುವುದು, “ಹೃದಯದ ಮಾತು ಹೃದಯಕ್ಕೆ ತಲುಪಿಯೇ ತೀರುತ್ತದೆ, ನಾಲಗೆಯ ಮಾತು ಕಿವಿ ದಾಟುವ ಮೊದಲೇ ಸಾಯುತ್ತದೆ” ಎಂದು. ನಮ್ಮ ಹೃದಯಕ್ಕೆ ಹತ್ತಿರವಾದವರ ಮಾತು ನಮಗೆ ರುಚಿಸುತ್ತದೆ. ಉಳಿದವರ ಮಾತು ಸಾಕೆನಿಸುತ್ತದೆ. ಇನ್ನು ಅವರು ನಮಗೆ ಹೇಗೆ ಹತ್ತಿರವಾದರು ಅಂತ ಹುಡುಕಿದರೆ ಅದಕ್ಕೂ ಕಾರಣ ಅವರ ಮಾತು; ನಿಷ್ಕಲ್ಮಶ ಹೃದಯದಿಂದ ಹೊರಡುವ ಅವರ ಮಾತೇ ಆಗಿರುತ್ತದೆ. ರಾಜಕಾರಣಿಗಳ ಒಣ ಭಾಷಣ ನಮಗೆ ರುಚಿಸದಿರುವುದಕ್ಕೂ ಕಾರಣ ಅದು ಬರೀ ಅವರ ನಾಲಗೆಯ ತುದಿಯಿಂದ ಹೊರಡುವುದರಿಂದ.

ಇನ್ನು ಮುಂದೆ ಮಾತನಾಡುವ ಮುನ್ನ ನಮ್ಮ ಮಾತು ಹೇಗಿದೆ ಅಂತ ಒಮ್ಮೆ ಯೋಚಿಸಿ ಮಾತು ಶುರು ಮಾಡೋಣ. ಹಾಗಾದರೆ ಯಾವಾಗ ಮಾತು ನಿಲ್ಲಿಸಬೇಕು ಎಂಬ ಅರಿವೂ ನಮಗೆ ಲಭಿಸುತ್ತದೆ.

Leave a Reply