ಸನ್ಯಾಸಿ ತುಳಿದದ್ದು ಏನನ್ನು? : ಝೆನ್ ಕಥೆ

ಝೆನ್ ಶಾಸ್ತ್ರದಲ್ಲಿ, ಕಲಿಕೆಯಲ್ಲಿ ಪಾರಂಗತನಾದ ಸನ್ಯಾಸಿಯೊಬ್ಬನಿದ್ದ. ತಾನು ಕಲಿತದ್ದನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ.

ಒಂದು ರಾತ್ರಿ ದಾರಿಯಲ್ಲಿ ಹೋಗುವಾಗ ಆತನ ಹೆಜ್ಜೆ, ಏನೋ ಒಂದು ವಸ್ತುವಿನ ಮೇಲೆ ಬಿತ್ತು. ಆತ ಅದನ್ನು ತುಳಿಯುತ್ತಿದ್ದಂತೆಯೇ ಪಿಚಕ್ ಎಂದು ಸದ್ದಾಯಿತು. ಮೊಟ್ಟೆ ಧರಿಸಿದ ಕಪ್ಪೆ ಅದು ಎಂದು ಆತ ಭಾವಿಸಿದ.

ಅವನಿಗೆ ತೀವ್ರ ಆತಂಕವಾಗತೊಡಗಿತು. ಬೌದ್ಧರ ಪ್ರಕಾರ ಜೀವಹತ್ಯೆ ಮಹಾಪಾಪ. ರಾತ್ರಿ ಅವ ನಿದ್ದೆಗಿಳಿಯುತ್ತಿದ್ದಂತೆಯೇ ನೂರಾರು ಕಪ್ಪೆಗಳು ಕನಸಲ್ಲಿ ಬಂದು ಅವನ ಜೀವ ಕೇಳತೊಡಗಿದವು.

ಸನ್ಯಾಸಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಆತ ರಾತ್ರಿ ಘಟನೆ ನಡೆದ ಜಾಗಕ್ಕೆ ಹೋಗಿ ನೋಡಿದ. ರಾತ್ರಿ ಅವ ತುಳಿದದ್ದು ಕಪ್ಪೆಯಾಗಿರದೇ, ಕಳೆತ ಬದನೆಕಾಯಿಯಾಗಿತ್ತು.

ಆ ಕ್ಷಣದಲ್ಲಿ ಅವನ ಅನಿಶ್ಚಿತತೆ ಕೊನೆಯಾಯಿತು ಮೊದಲ ಬಾರಿಗೆ ಅವನಿಗೆ “ವಾಸ್ತವದ ಜಗತ್ತು ಇಲ್ಲ” ಎಂಬ ಬುದ್ಧನ ಮಾತಿನ ಅರ್ಥ ಗೊತ್ತಾಯಿತು, ಝೆನ್ ಆಚರಿಸುವುದು ಹೇಗೆ ಎನ್ನುವುದು ಸ್ಪಷ್ಟವಾಯಿತು.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply