ಏಕಾಂಗಿ ಹೋರಾಟಗಾರರೇ ನಿಜವಾದ ಬಲಶಾಲಿಗಳು : ಯೋಗಿ ಅರವಿಂದ

ಒಗ್ಗಟ್ಟಿನಿಂದ ಹೋರಾಟ ನಡೆಸಿ ಎದುರಿಸುವುದು ಇದ್ದದ್ದೇ. ಆದರೆ, ಜೊತೆಯಲ್ಲಿ ಯಾರೂ ಇಲ್ಲದಾಗಲೂ ಧೃತಿಗೆಡದೆ ಹೋರಾಡುವುದು ಇದೆಯಲ್ಲ, ಅದು ನಿಜವಾದ ಕೆಚ್ಚು, ನಿಜವಾದ ಬಲ.

aravindo

ಕೆಲವೊಮ್ಮೆ ಹೀಗಾಗಿಬಿಡುತ್ತದೆ. ಕಾರಣ ಎಷ್ಟೇ ಮಹತ್ವದ್ದಾಗಿದ್ದರೂ, ಘನವಾಗಿದ್ದರೂ ಅದಕ್ಕಾಗಿ ಹೋರಾಡಲು ಜೊತೆಗಾರರು ಒಗ್ಗೂಡುವುದೇ ಇಲ್ಲ. ಆದರೆ ಹೋರಾಟದ ತುರ್ತು ಇದ್ದೇ ಇದೆ. ಇಂಥ ಸಂದರ್ಭದಲ್ಲಿ ಯಾರ ಬೆಂಬಲವೂ ಇಲ್ಲವೆಂದು ಹೆಜ್ಜೆ ಹಿಂತಿರುಗಿಸುವುದು ಸರಿಯೇ? 

ಖಂಡಿತಾ ಇಲ್ಲ. ಹೀಗೆ ಮಾಡುವುದು ವೈಯಕ್ತಿಕ ನಷ್ಟ ಮಾತ್ರವಲ್ಲ, ಸಾಮಾಜಿಕ ನಷ್ಟವೂ ಹೌದು. ಬಹುತೇಕ ಸಂದರ್ಭಗಳಲ್ಲಿ ನಾವಿದನ್ನು ನೋಡಿದ್ದೇವೆ. ಇತಿಹಾಸದ ಪುಟಗಳಲ್ಲಿ ಏಕಾಂಗಿಯಾಗಿ ಹೋರಾಟ ಶುರುವಿಟ್ಟು, ಆ ಮೂಲಕ ಜನರನ್ನು ಸಂಘಟಿಸಿ ಗೆಲುವಿನತ್ತ ಸಾಗಿದ ಕಥನಗಳನ್ನು ಓದಿದ್ದೇವೆ. 

ರಣಾಂಗಣದ ಯುದ್ಧ ಅಥವಾ ಸಾಮಾಜಿಕ ಹೋರಾಟಗಳು ಮಾತ್ರವಲ್ಲ, ವೈಯಕ್ತಿಕ ಬದುಕಿನಲ್ಲೂ ಕೆಲವು ಸಲ ನಾವು ಏಕಾಂಗಿಯಾಗಿಬಿಡುತ್ತೇವೆ. ಇದ್ದಕ್ಕಿದ್ದ ಹಾಗೆ ನಮ್ಮ ಆಪ್ತೇಷ್ಟರೆಲ್ಲ ಕೈಬಿಡುತ್ತಾರೆ. ಕಷ್ಟ ಕಾಲದಲ್ಲಿ ಯಾರ ಸಹಾಯವೂ ದೊರೆಯುವುದಿಲ್ಲ. ನಾವು ಸವಾಲಿನ ಎದುರು ಅನಾಥರಂತೆ ನಿಂತುಬಿಟ್ಟಿರುತ್ತೇವೆ. ಆಗ ನಾವು ಇತರ ಕ್ಷೇತ್ರಗಳ ಏಕಾಂಗಿ ವೀರರಿಂದ ಸ್ಫೂರ್ತಿ ಪಡೆದು ಸವಾಲನ್ನು ಎದುರಿಸುವುದು ಧೀರತನ ಎನ್ನಿಸಿಕೊಳ್ಳುತ್ತದೆ. 

“ಏಕಾಂಗಿಯಾಗಿ ಉಳಿದಾಗಲೂ ಯಾರು ಧೈರ್ಯದಿಂದ ಸವಾಲನ್ನು ಎದುರಿಸುತ್ತಾರೋ ಅವರೇ ನಿಜವಾದ ಬಲಶಾಲಿಗಳು” ಎಂದು ಶ್ರೀ ಅರವಿಂದರು ತಮ್ಮ ‘ಸಾವಿತ್ರಿ’ ಕೃತಿಯಲ್ಲಿ ಹೇಳುತ್ತಾರೆ. ಇದು ವೈಯಕ್ತಿಕ ಬದುಕಿಗೂ ಅನ್ವಯ, ಸಾಮುದಾಯಿಕ ಬದುಕಿಗೂ ಅನ್ವಯ. ನಮ್ಮ ಸ್ವಾತಂತ್ರ್ಯ ಹೋರಾಟವನ್ನೇ ನೋಡಿ. ಗಾಂಧೀಜಿ ಹೋರಾಟ ಶುರು ಮಾಡಿದ್ದು ಏಕಾಂಗಿಯಾಗಿ. ಚಂದ್ರಶೇಖರ ಆಜಾದ್, ಸಂಗಾತಿಗಳೆಲ್ಲ ಬಂಧನ ಹಾಗೂ ಎನ್’ಕಂಟರ್ ಗೆ ಒಳಗಾಗಿ ಕೊನೆಯಲ್ಲಿ ಒಬ್ಬರೇ ಉಳಿದರೂ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು. ಹಳ್ಳಿ ಹಳ್ಳಿಗಳಲ್ಲೂ ಜನರು ಸಾಮುದಾಯಿಕವಾಗಿ ಮಾತ್ರವಲ್ಲದೆ ವೈಯಕ್ತಿಕ – ಏಕಾಂಗಿ ಹೋರಾಟಗಳನ್ನು ನಡೆಸಿದರು. ನಮ್ಮ ದೇಶ ಸ್ವತಂತ್ರವಾಗಿದ್ದು ಈ ಎಲ್ಲ ಹೋರಾಟಗಳ ಒಟ್ಟು ಫಲವಾಗಿಯೇ ಅಲ್ಲವೆ? 

ಇಂಥ ಸಾವಿರಾರು ಉದಾಹರಣೆಗಳು ನಮ್ಮೆದುರು ಇವೆ. ಈ ಎಲ್ಲದರಿಂದ ಪ್ರೇರಣೆ ಪಡೆದು, ಜೀವನದ ಸವಾಲುಗಳನ್ನು ಎದುರಿಸಿದರೆ ಜೀವನದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. 

Leave a Reply