ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ
ಬೇರು ಬಿಟ್ಟಿರುವುದನ್ನ, ಸಲಹುವುದು ಸುಲಭ.
ಹೊಸ ತಪ್ಪುಗಳನ್ನ, ತಿದ್ದುವುದು ಸುಲಭ.
ಗಡುಸಾಗಿರುವುದನ್ನ, ಮುರಿಯುವುದು ಸುಲಭ.
ಧೂಳಾದರೆ, ಗಾಳಿಯಲ್ಲಿ ಹರಿಬಿಡುವುದು ಸುಲಭ.
ಅವತಾರಕ್ಕಿಂತ ಮುಂಚೆಯೇ ಅನಾಹುತ ಗುರುತಿಸು.
ಹುಟ್ಟುವುದಕ್ಕಿಂತ ಮೊದಲೇ ತೊಟ್ಚಿಲು ಕಟ್ಚಿಸು.
ಮಹಾವೃಕ್ಷ ಕೂಡ, ಮೊಳಕೆಯೊಡೆಯುವುದು ಪುಟ್ಚ ಬೀಜದಿಂದಲೇ.
ಸಣ್ಣ ಹೆಜ್ಜೆ ಎತ್ತಿಟ್ಟಾಗಲೇ ಜೈತ್ರಯಾತ್ರೆಯ ಶುರುವಾತು.
ದುಡುಕಿದವ ಎಡವುತ್ತಾನೆ.
ಕೈಚಾಚಿದವ ಕಳೆದುಕೊಳ್ಳುತ್ತಾನೆ.
ಅಂತೆಯೇ ಸಂತ
ಮಾಗುವ ತನಕ ಕಾಯುತ್ತಾನೆ.
ಶುರುವಿನಲ್ಲಿ ಇದ್ದ ಸಮಾಧಾನ
ಕೊನೆಯವರೆಗೂ ಕಾಯ್ದುಕೊಳ್ಳುತ್ತಾನೆ.
ಅವನು ಕೂಡಿಟ್ಟಿಲ್ಲವಾದ್ದರಿಂದ
ಕಳೆದುಕೊಳ್ಳುವುದು ಏನೂ ಇಲ್ಲ.
ಅವನಿಗೆ ‘ಬೇಡ’ ಎನ್ನವುದೇ ‘ಬೇಕು’.
ಕಲಿಯದಿರುವುದನ್ನೇ ಅವ ಕಲಿತದ್ದು.
ಅವನನ್ನು ನೋಡಿದವರು
ತಾವು ಹಿಂದೆ ಹೇಗಿದ್ದೆವೆಂಬುದನ್ನ ನೆನಪಿಸಿಕೊಳ್ಳುತ್ತಾರೆ.
ಅವನಿಗೆ ತಾವೋ ಮೇಲೆಯೇ ಅಕ್ಕರೆ
ಅಂತೆಯೇ ಎಲ್ಲರ ಮೇಲೂ.