ಕ್ಷಮಿಸುವುದು ಧೀರತನ. ಧೈರ್ಯವಂತರಷ್ಟೆ ಕ್ಷಮಿಸಬಲ್ಲರು, ಹೇಡಿಗಳಿಂದ ಅದು ಸಾಧ್ಯವಿಲ್ಲ….
ಮನುಷ್ಯರನ್ನು ಮನುಷ್ಯರನ್ನಾಗಿಸುವುದು ಯಾವುದು ಎಂದು ಕೇಳಲಾಯ್ತು. ಮೂಡಿಬಂದ ಒಕ್ಕೊರಲಿನ ಉತ್ತರ “ಕ್ಷಮೆ” ಎಂಬುದೇ ಆಗಿತ್ತು. ಮಿಕ್ಕೆಲ್ಲ ಪ್ರಾಣಿಗಳು ಕ್ರಿಯೆಗೆ ಪ್ರತಿಕ್ರಿಯೆ ತೋರಲು ಸಿದ್ಧವಾಗಿಯೇ ಇರ್ತವೆ. ಇನ್ನು ಕೆಲವು ಯಾರಿಂದಲಾದರೂ ಸಮಸ್ಯೆ ಒದಗುವ ಮೊದಲೇ ತನ್ನ ರಕ್ಷಣೆಗೆ ಸನ್ನದ್ಧವಾಗಿರ್ತವೆ. ಪ್ರಾಣಿಗಳಿಗೆ ತಮ್ಮ ಜೀವ ಮುಖ್ಯ. ತಮ್ಮ ಆಹಾರ ಮುಖ್ಯ. ತಮ್ಮ ನೆಲೆ ಮುಖ್ಯ. ಅವುಗಳ ಸೃಷ್ಟಿಯೇ ಹಾಗಿದೆ. ನಾಯಿಯ ಎದುರಿಟ್ಟ ಮೂಳೆ ತುಂಡನ್ನು ಮುಟ್ಟಿದರೆ ಅದು ಸುಮ್ಮನೆ ಬಿಡುವುದೇ? ಅದೇ, ಮನುಷ್ಯನ ಎದುರಿಟ್ಟ ಆಹಾರವನ್ನು ಮುಟ್ಟಿದರೆ ಏನು ಮಾಡುವರು? ನಾಯಿಯಂತೆ ಕಚ್ಚಲು ಅಥವಾ ಅಟ್ಟಿಸಿಕೊಂಡು ಬಂದರೆ ಅವರನ್ನು ಮನುಷ್ಯ ಅನ್ನುತ್ತಾರೆಯೇ?
ಇದೊಂದು ಸರಳ ಉದಾಹರಣೆಯಷ್ಟೆ. ಗಾಂಧೀಜಿ ಹೇಳುತ್ತಾರೆ, “ಕ್ಷಮಿಸಲು ಧೈರ್ಯ ಬೇಕಾಗುತ್ತದೆ. ಹೇಡಿಗಳಿಗೆ ಕ್ಷಮಿಸುವುದು ಸಾಧ್ಯವಾಗದು. ಕ್ಷಮೆಯೊಂದು ಧೀರತನ” ಎಂದು. ಹೌದಲ್ಲವೆ? ನಮಗೆ ಸಮಸ್ಯೆ ಉಂಟು ಮಾಡಿದಾಗ ನಾವು ಕೆರಳುವುದು ದೇಹಕ್ಕೋ ಆಸ್ತಿಪಾಸ್ತಿಗೋ ಹಾನಿಯಾಯಿತು ಎಂದಲ್ಲ, ನಮ್ಮ ಅಹಂಕಾರಕ್ಕೆ ಘಾಸಿಯಾಯಿತು ಎಂದು. ಅಹಂಕಾರವನ್ನು ಮೀರಲು ಧೀರತನ ಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ಕ್ಷಮಿಸಲು ನಾನು – ನನ್ನದೆನ್ನುವ ಸ್ವಾರ್ಥ ಬುದ್ಧಿಯ ತ್ಯಾಗವೂ ಬೇಕಾಗುತ್ತದೆ.
ಯಾರೋ ಕೇಳಿದರು, “ಕ್ಷಮೆ ಅಂದರೇನು, ಹೇಳು ಸೂಫಿ?”
ಸೂಫಿ ಹೇಳಿದ, “ಹೂವನ್ನು ಹೊಸಕಿದಾಗ ಹೊಮ್ಮುವ ಘಮಲು”.
ಕ್ಷಮೆಯನ್ನು ಇದಕ್ಕಿಂತ ಸರಳವಾಗಿ, ಸೊಗಸಾಗಿ ವಿವರಿಸಲು ಬರುತ್ತದೆಯೇ?