ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ
ತಾವೋ ನೆಲದಲ್ಲಿ ಬೇರು ಬಿಟ್ಟಿದ್ದನ್ನ
ಕೀಳಲಾಗುವುದಿಲ್ಲ.
ತಾವೋ ಅಪ್ಪಿಕೊಂಡವರು
ಜಾರಿಕೊಳ್ಳುವುದಿಲ್ಲ.
ತಲತಲಾಂತರದಿಂದ ಹರಿದು ಬಂದಿದ್ದರೂ
ತಾವೋ ಕೊಂಚವೂ ಹರಿದು ಹೋಗಿಲ್ಲ.
ಬದುಕಿನಲ್ಲಿ ಮನೆ ಮಾಡಿದಾಗ
ತಾವೋ ಗುಣ, ಸಾಚಾ
ಕುಟುಂಬದಲ್ಲಿ ಬೇರೂರಿದಾಗ, ಅಪಾರ.
ಸಮಾಜದಲ್ಲಿ ಗಟ್ಚಿಯಾದಾಗ, ಶಾಶ್ವತ.
ದೇಶದಲ್ಲಿ ನೆಲೆಯಾದಾಗ, ಏಳಿಗೆ.
ಜಗತ್ತಿನಲ್ಲಿ ಒಂದಾದಾಗ, ಸಾರ್ವತ್ರಿಕ.
ಆದ್ದರಿಂದ,
ನಿನ್ನ ಕಣ್ಣಿಂದ ಇತರರನ್ನು ನೋಡುವಂತೆ
ಕುಟುಂಬಗಳನ್ನ, ಕುಟುಂಬದ ಕಣ್ಣಿಂದ ಕಾಣು.
ಸಮಾಜಗಳನ್ನ, ಸಮಾಜದ ಕಣ್ಣಿಂದ ಕಾಣು.
ದೇಶಗಳನ್ನ, ದೇಶದ ಕಣ್ಣಿಂದ ಕಾಣು; ಜಗತ್ತುಗಳನ್ನ, ಜಗತ್ತಿನ ಕಣ್ಣಿಂದ ಕಾಣು.
ಇದೆಲ್ಲ ನಿಜ ಅಂತ ಏನು ಖಾತ್ರಿ?
ಹೀಗೆ ನೋಡುವುದರಿಂದ.