ಅ ಈ ಕಥೆಯಲ್ಲಿ ನೀತಿಯನ್ನು ನೀವೇ ಹುಡುಕಿಕೊಳ್ಳಿ : ಅಧ್ಯಾತ್ಮ ಡೈರಿ

ಇದು ಎಷ್ಟಾಯಿತೆಂದರೆ, ಬೆಳಗಾಗುವ ಹೊತ್ತಿಗೆ ಊರ ಪಂಚಾಯ್ತಿ ಕಟ್ಟೆಯಲ್ಲಿ ಜನ ಸೇರಿದರು. ಭೀಮ್ಯಾನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು. ಮೊದಲು ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಆಮೇಲೆ ಮುತ್ತಿಗೆ ಹಾಕುವುದು, ಆಮೇಲೆ ಭೀಮ್ಯಾನ ಕೊಲೆಗಾರರ ಮೇಲೆ ಮುಗಿಬೀಳುವುದು – ಎಂದು ನಿರ್ಧಾರವಾಯಿತು ~ ಅಲಾವಿಕಾ

ಮ್ಮೆ ಊರಿನ ಅಂಚಿನಲ್ಲೊಬ್ಬ ವ್ಯಕ್ತಿ ಅವಡುಗಚ್ಚಿಕೊಂಡು ಶಾಪ ಹಾಕುತ್ತಾ, ಆಗಾಗ ಕುತ್ತಿಗೆಗೆ ಸುತ್ತಿಕೊಂಡ ಟವಲಿನ ತುದಿಯಿಂದ ಕಣ್ಣೊರೆಸಿಕೊಳ್ಳುತ್ತಾ ಕುಳಿತಿದ್ದ. “ಪಾಪಿಗಳು ಅವನನ್ನು ಕೊಂದೇಬಿಟ್ಟರು! ಭೀಮ್ಯಾ…. ನೀನು ಕೈತಪ್ಪಿ ಹೋದಲ್ಲೋ….” ಎಂದು ಬಂಡೆಗಲ್ಲಿಗೆ ಕೈಬಡಿದು ರೋದಿಸುತ್ತಿದ್ದ.

ಅಲ್ಲೊಬ್ಬ ದಾರಿಹೋಕ ಇದನ್ನು ಕಂಡ. ಅವನ ರೋದನೆ ಕಂಡು ದಾರಿಹೋಕನ ಎದೆಕರಗಿತು.  ಕೊಂಚ ನಿಂತು, “ಏನಾಯಿತು?” ಎಂದು ವಿಚಾರಿಸಿದ. ಅಳುತ್ತಿದ್ದ ವ್ಯಕ್ತಿ ಆಕಾಶದತ್ತ ಮುಖ ಮಾಡಿ “ಭೀಮ್ಯಾ….” ಎಂದು ದುಃಖಿಸಿದ. “ಹತ್ತು ಆಳು ಸೇರಿ ಮಾಡಿದಂತಿದ್ದ… ಅವನನ್ನು ಕೊಂದೇಬಿಟ್ಟರು” ಎಂದು ಬಿಕ್ಕಳಿಸಿದ. ಕೈಲಿದ್ದ ಕುಡುಗೋಲು ನೆಲಕ್ಕೆ ಅಪ್ಪಳಿಸಿ, “ಅವರನ್ನು ಸುಮ್ಮನೆ ಬಿಡೋದಿಲ್ಲ” ಎಂದು ಶಪಥ ಮಾಡಿದ.

ದಾರಿಹೋಕ ತನ್ನ ಸಂತಾಪ ಸೂಚಿಸಿ ಮುಂದಕ್ಕೆ ಹೊರಟ. ದಾರಿಯಲ್ಲಿ ಎದುರಾದವರಿಗೆಲ್ಲ ಭೀಮ್ಯಾನ ದುರಂತ ಕಥೆ ಹೇಳಿದ. ಅವನಿಂದ ಕೇಳಿಸಿಕೊಂಡವರು “ಭೀಮ್ಯಾನನ್ನು ಅವರು ಕೊಂದೇಬಿಟ್ಟರು. ಕೊಂದವರನ್ನು ಸುಮ್ಮನೆ ಬಿಡಬಾರದು” ಎಂದು ಮತ್ತೊಬ್ಬರಿಗೆ ಕಥೆಯನ್ನು ದಾಟಿಸಿದರು. ಹೀಗೆ ಊರು ತಲುಪಿಕೊಂಡ ಭೀಮ್ಯಾನ ಕಥೆ ಬೆಳಗಾಗುವುದರ ಒಳಗೆ ಪ್ರತಿ ಮನೆಯಲ್ಲೂ ಸೇರಿಕೊಂಡಿತು. ಎಲ್ಲರೂ ಮುಷ್ಠಿಗಟ್ಟಿ ಭೀಮ್ಯಾನನ್ನು ಕೊಂದವರಿಗೆ ತಕ್ಕ ಶಾಸ್ತಿಯಾಗಬೇಕು ಅನ್ನುವವರೇ. ಅವನು ಹಾಗಿದ್ದ, ಹೀಗಿದ್ದ ಎಂದು ಹಾಡಿಹೊಗಳುವವರೇ.

ಇದು ಎಷ್ಟಾಯಿತೆಂದರೆ, ಬೆಳಗಾಗುವ ಹೊತ್ತಿಗೆ ಊರ ಪಂಚಾಯ್ತಿ ಕಟ್ಟೆಯಲ್ಲಿ ಜನ ಸೇರಿದರು. ಭೀಮ್ಯಾನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು. ಮೊದಲು ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಆಮೇಲೆ ಮುತ್ತಿಗೆ ಹಾಕುವುದು, ಆಮೇಲೆ ಭೀಮ್ಯಾನ ಕೊಲೆಗಾರರ ಮೇಲೆ ಮುಗಿಬೀಳುವುದು – ಎಂದು ನಿರ್ಧಾರವಾಯಿತು.

ಊರಿನ ಒಬ್ಬಳು ಬುದ್ಧಿವಂತೆ ರಾತ್ರಿಯಿಂದ ಈ ಎಲ್ಲವನ್ನೂ ನೋಡುತ್ತಿದ್ದಳು. ಇದೇನು ನಡೆಯುತ್ತಿದೆ ಎಂದು ತಲೆ ಕೆಡಿಸಿಕೊಂಡಿದ್ದಳು. ಪಂಚಾಯ್ತಿಯಲ್ಲಿ ಸೇರಿದವರು ತಮ್ಮತಮ್ಮ ಬಡಿಗೆ ತರಲು ಹೊರಡುವ ಮೊದಲು ಎದ್ದು ನಿಂತು, “ನನ್ನದು ಮೂರು ಪ್ರಶ್ನೆಗಳಿವೆ. ದಯವಿಟ್ಟು ಉತ್ತರಿಸಿ” ಎಂದಳು. ಊರಿನ ಜನ ಅದೇನೆಂದು ಕೇಳಿದರು. ಬುದ್ಧಿವಂತೆ ಗಂಟಲು ಸರಿಮಾಡಿಕೊಂಡು ಕೇಳತೊಡಗಿದಳು:

“ಈ ಭೀಮ್ಯಾ ಯಾರು? ಅವನನ್ನು ಕೊಂದವರು ಯಾರು? ಯಾಕಾಗಿ ಅವನು ಸತ್ತ? ಇವಕ್ಕೆ ಉತ್ತರ ಹೇಳಿ. ಆಮೇಲೆ ಮುಂದಿನದು ಮಾಡೋಣ” ಅಂದಳು.

ಊರವರೆಲ್ಲರೂ ಮುಖ ಮುಖ ನೋಡಿಕೊಂಡರು. ಮೊದಲಿಗೆ ಭೀಮ್ಯಾ ಯಾರೆಂದೇ ಯಾರಿಗೂ ಗೊತ್ತಿಲ್ಲ. ಬಾಕಿ ಉತ್ತರಗಳು ಗೊತ್ತಿರುವ ಚಾನ್ಸೇ ಇಲ್ಲ!

ಅಷ್ಟು ಹೊತ್ತಿಗೆ ಬೆಳಗಿನ ವಿತರಕ ಪತ್ರಿಕೆಗಳನ್ನು ಹೇರಿಕೊಂಡು ಸೈಕಲಿನಲ್ಲಿ ಬಂದ. ಒಳಪುಟದಲ್ಲಿ ದರೋಡೆ, ಹತ್ತಾರು ಅತ್ಯಾಚಾರ ಪ್ರಕರಣ, ಕೊಲೆ ಇತ್ಯಾದಿಗಳನ್ನು ನಡೆಸಿದ್ದ ಭೀಮ್ಯಾ ಎನ್ನುವವನು ಆಕ್ಸಿಡೆಂಟಿಗೆ ಸಿಕ್ಕು ಸತ್ತುಹೋಗಿದ್ದಾನೆ ಅನ್ನುವ ಸುದ್ದಿ ಪ್ರಕಟವಾಗಿತ್ತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply