ದರ್ವೇಶಿಗೆ ಗಿರಣಿಯಲ್ಲಿ ಕೇಳಿಸಿದ್ದೇನು? : ಸೂಫಿ ಕಥೆ

ಬು ಸಯೀದ್ ಒಬ್ಬ ದರ್ವೇಶಿ ಸೂಫಿ ಸಂತ. ಊರಿಂದೂರಿಗೆ ಅಲೆಯುತ್ತಾ ಇರುವುದೇ ಅವನ ಕೆಲಸ. ಅವನು ಹೋದಲ್ಲೆಲ್ಲ ಜನ ಅವನನ್ನು ಹಿಂಬಾಲಿಸುತ್ತಿದ್ದರು.

ಹೀಗೇ ಒಮ್ಮೆ ಅಬು ಸಯೀದ್ ಹೋಗುವಾಗ ದಾರಿಯಲ್ಲಿ ಒಂದು ಭತ್ತದ ಗಿರಣಿ ಸಿಕ್ಕಿತು. ಅಲ್ಲಿಂದ ಒಂದೇ ಸಮ ಗರಗರ ಸದ್ದು ಹೊಮ್ಮುತ್ತಿತ್ತು.

ಸಯೀದ್ ಕಣ್ಮುಚ್ಚಿ ತದೇಕಚಿತ್ತನಾಗಿ ಕೆಲಹೊತ್ತು ಅಲ್ಲಿಯೇ ನಿಂತ. ಅವನ ಮುಖ ಸಂತೋಷದಿಂದ ಕಂಗೊಳಿಸಿತು.

ಅದನ್ನು ಕಂಡ ಶಿಷ್ಯರು ಏನಾಯಿತೆಂದು ವಿಚಾರಿಸಿದರು. ಅವರು ಗಿರಣಿಯ ಸದ್ದಿಗೆ ಕಿವಿ ಮುಚ್ಚಿಕೊಂಡಿದ್ದರು.

ಸಯೀದ್, “ನನಗೆ ಈ ಗಿರಣಿಯಲ್ಲಿ ಮಧುರ ದಿವ್ಯವಾಣಿ ಕೇಳಿಸಿತು” ಅಂದ.

“ನಮಗಂತೂ ಕರ್ಕಶ ಸದ್ದಿನ ವಿನಾ ಬೇರೇನೂ ಕೇಳಿಸ್ತಿಲ್ಲ. ನಿಮಗೇನು ಕೇಳಿಸಿತೋ ಹೇಳಿ” ಎಂದು ಶಿಷ್ಯರು ದುಂಬಾಲು ಬಿದ್ದರು.

ಪ್ರಸನ್ನಚಿತ್ತನಾಗಿ, “ಗಿರಣಿ ಹೇಳುತ್ತಿದೆ; ಈ ಜಗತ್ತಿನಲ್ಲಿ ಏನೆಲ್ಲ ಒಳ್ಳೆಯದಿವೆಯೋ ಅವೆಲ್ಲ ನನ್ನೊಳಗಿದೆ. ನನ್ನ ಬಳಿ ಒರಟಾಗಿ ಬಂದುದನ್ನು ನಾನು ನುಣುಪಾಗಿ ರೂಪುಗೊಳಿಸಿ ಹೊರಹಾಕುತ್ತೇನೆ. ನನ್ನ ಒಳಗೂ ಹೊರಗೂ ತಿರುಗಿ ತಿರುಗಿ ಬೇಡವಾದ್ದನ್ನು ಬಿಸುಟು ತಿರುಳನ್ನು ಮಾತ್ರ ಬಳಸಿಕೊಳ್ತೇನೆ – ಎಂದು. ಇದು ದಿವ್ಯವಾಣಿಯಲ್ಲವೆ? ಇದು ಮಧುರವಾಗಿಲ್ಲವೆ?” ಕೇಳಿದ ಅಬು ಸಯೀದ್.

Leave a Reply