ಬಗಾಂಡ ಸಮುದಾಯದ ತಾಯ್ತಂದೆಯರು : ನಂಬಿ ಮತ್ತು ಕಿಂಟು ~ ಸೃಷ್ಟಿ ಕಥನಗಳು

ಉಗಾಂಡಾ ದೇಶದ ಬಗಾಂಡ ಜನಸಮುದಾಯದ ನಂಬಿಕಯೆ ಪ್ರಕಾರ ಕಿಂಟು ಮತ್ತು ನಂಬಿ ಮನುಕುಲದ ತಂದೆ ತಾಯಿಯರು.

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

kintu

ಸೃಷ್ಟಿಕರ್ತ ಗುಲು ಜಗತ್ತನ್ನು ಸೃಷ್ಟಿಸಿದ. ಸ್ವರ್ಗವನ್ನು ಸೃಷ್ಟಿಸಿ, ಹಂಡತಿ, ಮಕ್ಕಳೊಂದಿಗೆ ಸಂಸಾರ ನಡೆಸತೊಡಗಿದ. ಭೂಮಿಯಲ್ಲಿ ಪ್ರಾಣಿಗಳನ್ನು ಸೃಷ್ಟಿಸಿದ. ಆದರೂ ಏನೋ ಕೊರತೆ ಅನ್ನಿಸುತ್ತಿತ್ತು. ಕೊನೆಗೆ ಗುಲು ಒಬ್ಬ ಮನುಷ್ಯನನ್ನು ಸೃಷ್ಟಿಸಿ ಅವನಿಗೆ ‘ಕಿಂಟು’ ಎಂದು ಹೆಸರಿಟ್ಟ. ಅವನ ಜೊತೆಗಿರಲು ಒಂದು ಹಸುವನ್ನು ಸೃಷ್ಟಿಸಿದ. ಅಂದಿನಿಂದ ಕಿಂಟು ಭೂಮಿಯಲ್ಲಿ ತನ್ನ ಹಸುವಿನೊಂದಿಗೆ ಕೆಲಸ ಮಾಡಿಕೊಂಡು ಬಾಳತೊಡಗಿದ.

ಗುಲುವಿಗೆ ಹಲವು ಮಕ್ಕಳಿದ್ದರು. ಅವನು ಆಗೀಗ ಆ ಮಕ್ಕಳನ್ನು ಆಟವಾಡಿಸಲು ಭೂಮಿಗೆ ಕರೆದುಕೊಂಡು ಬರುತ್ತಿದ್ದ. ಹೀಗೊಮ್ಮೆ ಬಂದಾಗ ಗುಲುವಿನ ಮಗಳು ನಂಬಿ, ಹಸುವನ್ನು ಮೇಯಿಸುತ್ತ ಹಾಡುತ್ತಾ ಕುಳಿತಿದ್ದ ಕಿಂಟೊನನ್ನು ನೋಡಿದಳು. ಮೊದಲ ನೋಟದಲ್ಲೆ ಅವನ ಮೇಲೆ ಪ್ರೇಮವುಂಟಾಯಿತು. ಹಾಡು ಕೇಳುತ್ತ ಮೈಮರೆತು ನಿಂತಿದ್ದ ನಂಬಿಯನ್ನು ಅವಳ ಅಣ್ಣಂದಿರು ಬಂದರು. ಆದರೆ ನಂಬಿ ನಾನು ಸ್ವರ್ಗಕ್ಕೆ ಮರಳೋದಿಲ್ಲವೆಂದೂ, ಕಿಂಟೊನನ್ನು ಮದುವೆಯಾಗಿ ಭೂಮಿಯಲ್ಲೆ ಇರುತ್ತೇನೆಂದೂ ಹಠ ಹಿಡಿದಳು. ಅಣ್ಣಂದಿರು ಅದಕ್ಕೆ ಒಪ್ಪಲಿಲ್ಲ. ತಂದೆಯ ಬಳಿ ಮಾತಾಡೋಣ ಬಾ ಎಂದು ತಂಗಿಯನ್ನೂ ಕಿಂಟೋನನ್ನೂ ಎಳೆದುಕೊಂಡು ಹೋದರು.

ನಂಬಿ ಒಬ್ಬ ಮನುಷ್ಯನನ್ನು ಮದುವೆಯಾಗುವುದು ಗುಲುವಿಗೆ ಇಷ್ಟವಿರಲಿಲ್ಲ. ಆದರೆ ಮಗಳ ಹಠದ ಎದುರು ಅವನ ಇಷ್ಟಾನಿಷ್ಟಗಳು ಮುಖ್ಯವೆನಿಸಲಿಲ್ಲ. ಮದುವೆಯಾಗಿ ಸುಖವಾಗಿರಿ ಎಂದು ಹರಸಿ ಅವರಿಬ್ಬರನ್ನು ಬೀಳ್ಕೊಟ್ಟ. ಹಾಗೆಯೇ, “ಯಾವ ಕಾರಣಕ್ಕೂ ವಲುಂಬೆಯ ಕಣ್ಣಿಗೆ ಬೀಳಬೇಡಿ. ಸದ್ದಿಲ್ಲದಂತೆ ಭೂಮಿಗೆ ಇಳಿಯಿರಿ” ಎಂದು ಕಿವಿಮಾತು ಹೇಳಿದ.

ವಲುಂಬೆ, ನಂಬಿಯ ಅಣ್ಣಂದಿರಲ್ಲೊಬ್ಬ. ಅವನು ರೋಗ ಮತ್ತು ಮೃತ್ಯುವನ್ನು ಹರಡುವ ದೇವತೆ. ಅವನ ಕಣ್ಣಿಗೆ ಬಿದ್ದ ಯಾರೂ ಅದರಿಂದ ಪಾರಾಗಲು ಸಾಧ್ಯವಿರಲಿಲ್ಲ. ಹಾಗೆಂದೇ ಗುಲು ಆ ಸೂಚನೆ ನೀಡಿದ್ದು. ತಂದೆಗೆ ನಮಸ್ಕರಿಸಿ, ತನ್ನ ಕೋಳಿಮರಿಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ನಂಬಿ ಕಿಂಟುವಿನ ಜೊತೆ ಹೊರಟಳು.

ಕೆಳಗೆ ಇಳಿಯುತ್ತ ಇರುವಾಗ ನಂಬಿಗೆ ತನ್ನ ಕೋಳಿಗಳಿಗೆ ತಿನ್ನಿಸಲು ಕಾಳನ್ನೇ ತರಲಿಲ್ಲವೆಂದು ನೆನಪಾಯ್ತು. ಭೂಮಿಗೆ ಹೋದಕೂಡಲೆ ಹೊಸ ಸಂಸಾರ ಶುರು ಮಾಡಬೇಕು. ಕಾಳು ಕಡ್ಡಿ ಹೇಗೋ ಏನೋ ಎಂದು ಯೋಚಿಸಿದಳು. “ನೀನು ಇಲ್ಲೇ ಇರು, ಕಾಳು ತೆಗೆದುಕೊಂಡು ಬೇಗನೇ ಬಂದುಬಿಡುತ್ತೇನೆ” ಎಂದು ಕಿಂಟುವಿಗೆ ಹೇಳಿದಳು. ಅವನು ಗುಲುವಿನ ಮಾತನ್ನು ನೆನಪಿಸಿ “ನೀನು ಹೋಗುವುದು ಬೇಡವೇ ಬೇಡ” ಅಂದ. ನಂಬಿ ಕೇಳಲಿಲ್ಲ. ಹೋಗಿಯೇ ಹೋದಳು. ಕಾಳು ತೆಗೆದುಕೊಂಡು ಮರಳುವಾಗ ವಲುಂಬೆ ಸಿಕ್ಕುಬಿಟ್ಟ. “ಈ ಹೊತ್ತಿನಲ್ಲಿ ಒಬ್ಬಳೇ ಎಲ್ಲಿಗೆ ಹೋಗುತ್ತಿದ್ದೀಯ?” ಎಂದು ವಿಚಾರಿಸಿದ. ನಂಬಿ ಅದಕ್ಕೆ ಉತ್ತರ ಕೊಡದೆ ತನ್ನ ಪಾಡಿಗೆ ಮುಂದುವರಿದಳು. ವಲುಂಬೆ ಕುತೂಹಲ ತಾಳದೆ ಅವಳನ್ನು ಹಿಂಬಾಲಿಸಿದ. ಅವಳು ಕಿಂಟುವಿನೊಡನೆ ಪ್ರಯಾಣ ಮುಂದುವರಿಸಿದಾಗ ತಾನೂ ಅವರು ನಡೆದ ದಿಕ್ಕಿನಲ್ಲೇ ಸಾಗಿದ.

ಕಿಂಟು ಮತ್ತು ನಂಬಿ ಭೂಮಿಯ ಮೇಲೆ ಇಳಿದರು. ಗುಡಿಸಲು ಕಟ್ಟಿಕೊಂಡು ಸಂಸಾರ ಶುರು ಮಾಡಿದರು. ವಲುಂಬೆ ಕೂಡ ಜಾರಿಕೊಂಡು ಭೂಮಿಯ ಮೇಲೆ ಬಿದ್ದ. ಅವನು ಬಿದ್ದ ಕ್ಷಣದಿಂದ ಇಲ್ಲಿ ರೋಗ ರುಜಿನಗಳು ಶುರುವಾದವು. ಅಲ್ಲಿಯವರೆಗೆ ಭೂಮಿಯ ಮೇಲೆ ಸಾವು ಎಂಬುದಿರಲಿಲ್ಲ. ವಲುಂಬೆಯಿಂದಾಗಿ ಸಾವು ಕೂಡ ಬಂದು ವಕ್ಕರಿಸಿತು.

(ಚಿತ್ರ ಕೃಪೆ : ಇಂಟರ್ನೆಟ್)

Leave a Reply