ಕತ್ತಿಯು ಕತ್ತರಿಸುತ್ತದೋ ಇಲ್ಲವೋ;
ಪ್ರಶ್ನೆ ಅದಲ್ಲ.
ಅದನ್ನು ನೋಡಿದ ಮಾತ್ರಕ್ಕೇ ಕಣ್ಣಗುಡ್ಡೆ ಕಳಚಿ ಬಿತ್ತು,
ಅವನು ಅದನ್ನು ಮರಳಿ ಕಣ್ಣಗೂಡಿನಲ್ಲಿ ಇರಿಸಿದ
ಒಮ್ಮೆ ಬೌದ್ಧ ಸಾಧಕ ಶಾಂತಿದೇವ ರಾಜಾ ಅರಿಭೀಷಣನ ಅಂಗರಕ್ಷಕನಾಗಿ ನೇಮಕಗೊಂಡ. ಬೇರೆಯವರಂತಲ್ಲದೆ, ಅವನು ರಾಜನ ರಕ್ಷಣೆಗೆ ಮರದ ಕತ್ತಿಯನ್ನೇ ಬಳಸುತ್ತಿದ್ದ. ಬಾಕಿ ಅಂಗರಕ್ಷಕರಿಗೆ ಇದೊಂದು ವಿಚಿತ್ರವಾಗಿ ತೋರುತ್ತಿತ್ತು. “ಅವನನ್ನು ಕೆಲಸದಿಂದ ತೆಗೆದುಬಿಡಿ. ಮರದ ಕತ್ತಿಯನ್ನಿಟ್ಟುಕೊಂಡು ಅವನೇನು ನಿಮ್ಮ ರಕ್ಷಣೆ ಮಾಡುತ್ತಾನೆ?” ಎಂದು ದೂರಿದರು. ರಾಜನಿಗೆ ಶಾಂತಿದೇವನ ಕತ್ತಿಯ ಬಗ್ಗೆ ತಿಳಿದಿದ್ದು ಆವಾಗಲೇ.
ಅರಿಭೀಷಣ ಶಾಂತಿದೇವನಿಗೆ ಕರೆ ಕಳಿಸಿ, “ಎಲ್ಲಿ, ನಿನ್ನ ಕತ್ತಿಯನ್ನು ತೋರಿಸು” ಎಂದು ಕೇಳಿದ.
“ನಾನೇನೋ ತೋರಿಸುವೆ, ಆದರೆ ಅದು ಬಹಳ ಅಪಾಯಕಾರಿ” ಎಂದ ಶಾಂತಿದೇವ, “ಅದನ್ನು ಅರೆಕ್ಷಣ ನೋಡಿದರೂ ನಿಮಗೆ ಸಮಸ್ಯೆ ಉಂಟಾಗಬಹುದು” ಎಂದು ಎಚ್ಚರಿಸಿದ.
“ಅದೇನೂ ಪರವಾಗಿಲ್ಲ. ನನಗೆ ಸಮಸ್ಯೆಯಾದರೂ ಸರಿ, ನಾನದನ್ನು ನೋಡಬೇಕು. ಎಲ್ಲಿ, ತೋರಿಸು” ಎಂದು ರಾಜ ಒತ್ತಾಯಪಡಿಸಿದ.
ಶಾಂತಿದೇವ ಬೇರೆ ವಿಧಿಯಿಲ್ಲದೆ “ಹೋಗಲಿ ಒಂದು ಕಣ್ಣನ್ನಾದರೂ ಮುಚ್ಚಿಕೊಂಡಿರಿ” ಎಂದು ಸೂಚಿಸಿದ.
ರಾಜ ಒಂದು ಕಣ್ಣು ಮುಚ್ಚಿಕೊಂಡು, ಕತ್ತಿಯನ್ನು ತೋರಿಸಲು ಹೇಳಿದ.
ಶಾಂತಿದೇವ ಒರೆಯಿಂದ ಕತ್ತಿ ತೆಗೆಯುತ್ತಲೇ ಸೂರ್ಯನಂಥ ಬೆಳಕಿನ ಸೆಳಕು ಹೊಮ್ಮಿ ಅರಿಭೀಷಣನ ಕಣ್ಣು ಹೊಕ್ಕಿತು. ಅದರ ಪ್ರಖರತೆ ತಾಳಲಾಗದೆ ಅವನ ಕಣ್ಣುಗುಡ್ಡೆ ಕಳಚಿ ಹೊರಬಿದ್ದಿತು.
ಅರಿಭೀಷಣ ಗಾಬರಿಯಿಂದ “ನಿನ್ನ ಕತ್ತಿ ವಾಪಸು ತೆಗೆದುಕೋ, ಒಳಗಿಟ್ಟುಬಿಡು ಈಗಲೇ” ಎಂದು ಕೂಗತೊಡಗಿದ.
ಶಾಂತಿದೇವ ಕತ್ತಿಯನ್ನು ಒರೆಯಲ್ಲಿಟ್ಟು, ಕೆಳಗೆ ಬಿದ್ದಿದ್ದ ಕಣ್ಣಗುಡ್ಡೆಯನ್ನು ರಾಜನ ಕಣ್ಣಿನಲ್ಲಿ ಮರಳಿ ಕೂಡಿಸಿದ.
ಆಮೇಲೆ ಯಾವತ್ತೂ ರಾಜ ಅವನ ತಂಟೆಗೆ ಹೋಗಲಿಲ್ಲ.
ಆಕರ : 61 Green Koans | ಸಂಗ್ರಹ ಮತ್ತು ಅನುವಾದ : ಅಲಾವಿಕಾ