ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ
ತಾವೋ ಒಂದು ಮಹಾನದಿ
ಸತತವಾಗಿ ಎಲ್ಲ ದಿಕ್ಕುಗಳಲ್ಲಿ ಹರಿಯುತ್ತದೆ.
ಈ ನದಿಯಿಂದಲೇ ಎಲ್ಲ ಹುಟ್ಟಿವೆಯಾದರೂ
ನದಿ ಯಾವುದನ್ನೂ ಹುಟ್ಟಿಸಿಲ್ಲ.
ಮೂರ್ತಿ ಕೆತ್ತುವುದರಲ್ಲಿ ತಾವೋ ಎಷ್ಟು ಮಗ್ನವಾಗಿದೆಯೆಂದರೆ
ಕೆತ್ತಿದ ಯಾವ ಮೂರ್ತಿಯ ಗುರುತು ಪರಿಚಯವೂ ಅದಕ್ಕಿಲ್ಲ.
ಅನಂತ ವಿಶ್ವಗಳನ್ನು ತಾವೋ ಸಲಹುತ್ತದೆಯಾದರೂ
ಎಂದೂ ಯಾವುದಕ್ಕೂ ಅಂಟಿಕೊಂಡಿಲ್ಲ.
ತಾವೋ ಎಲ್ಲರೊಳಗೆ ಒಂದಾಗಿದೆ
ಆದರೆ ಎಲ್ಲೂ ಹಕ್ಕಿನ ಮಾತಾಡುವುದಿಲ್ಲ
ಆದ್ದರಿಂದ ಅದು ವಿನಮ್ರ.
ಎಲ್ಲವೂ ತಾವೋ ಒಳಗೆ ಒಂದಾಗಿವೆ
ಆದರೂ ತಾವೋ ಗೆ ಅಧಿಕಾರದ ಹುಕಿಯಿಲ್ಲ
ಆದ್ದರಿಂದ ಅದು ಪ್ರಚಂಡ.
ತಾವೋಗೆ ತನ್ನ ಮಹತ್ವದ ಬಗ್ಗೆ ಅರಿವಿಲ್ಲ
ಆದ್ದರಿಂದ ಅದು ಮಹಾತ್ಮ .