ಸಹಜ ಜ್ಞಾನಿ ಸಂತ ತುಕಾರಾಮ

ಆಗಸದಲ್ಲಿ ಹಗ್ಗದಾಟ ನಡೆಸುವ ಡೊಂಬರು ಅಮರರಾಗುವುದಿಲ್ಲ. ಮೋಡಗಳ ಕುದುರೆ, ಯೋಧರು ನಿಜವಾದ ಯುದ್ಧಕ್ಕೆ ಒದಗುವುದಿಲ್ಲ. ಹಾಗೆಯೇ ಶಾಬ್ದಿಕ ಜ್ಞಾನವು ಬರಿಯ ತೌಡು ಕುಟ್ಟಿದಂತೆ ನಿಷ್ಪಲವಾದುದು ಎಂದವನು ಟೀಕಿಸುತ್ತಿದ್ದ. ಅವನ ಭಗವದ್ಭಕ್ತಿ ಹಾಗೂ ಸಾಧನೆಯ ಪ್ರಾಮಾಣಿಕತೆ ಅವನ ಟೀಕೆಗಳಿಗೆ ತೂಕ ತಂದುಕೊಟ್ಟಿದ್ದವು.

ಸಂತ ತುಕಾರಾಮ, ಭಕ್ತಿಚಳವಳಿಯ ಪರ್ವಕಾಲದಲ್ಲಿ, ಮರಾಠಾ ಪ್ರಾಂತ್ಯದಲ್ಲಿ ಆಗಿಹೋದ ಕ್ರಾಂತಿಕಾರಿ ಸಂತ. ಈತನ ಬದುಕೇ ಸ್ವಯಂಪಾಠ. ತನ್ನನ್ನು ಈತ ಜಗತ್ತಿನ ಪರೀಕ್ಷೆಗೆ ಅದೆಷ್ಟು ಒಡ್ಡಿಕೊಂಡನೆಂದರೆ, ಮತ್ತೆ ಮತ್ತೆ ಪರೀಕ್ಷೆಯ ಅಗ್ನಿಯಲ್ಲಿ ಹದಗೊಳ್ಳುತ್ತಾ ಪುಟವಿಟ್ಟ ಚಿನ್ನದಂತೆ ಪ್ರಖರವಾಗುತ್ತಲೇ ನಡೆದ.

ತುಕಾರಾಮನ ಬದುಕು ಬಲು ರೋಚಕ. ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ತಂದೆಯ ಮಗನಾಗಿ ಹುಟ್ಟಿದ್ದ ತುಕಾರಾಮ, ಅನಂತರದಲ್ಲಿ ತಾನು ಅದರ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ಆತ ಇದ್ದಕ್ಕಿದ್ದಂತೆ ಒಮ್ಮೆ ಅಂತರ್ಮುಖಿಯಾದ. ಮನೆಯಿಂದ ಹೊರಟು ದೋಹೊ ಸನಿಹದಲ್ಲಿರುವ ಭಾಂಬನಾಥ ಎಂಬ ಬೆಟ್ಟದಲ್ಲಿ ಏಳುದಿನ ಚಿಂತನೆಯಲ್ಲಿ ಕಳೆದ. ಆನಂತರ ಕಾನ್ಹೋಬಾ ಎಂಬವನು ಅವನನ್ನು ದೋಹೊಗೆ ಕರೆತರುತ್ತಾನೆ.

ಮರಳುವಾಗ ತುಕಾರಾಮನು ಇಂದ್ರಾಯಣಿಯ ಹೊಳೆಯ ದಡದಲ್ಲಿ ಕೂತನು. ಸೂರ್ಯೋದಯದ ಕಾಲಕ್ಕೆ ಸ್ನಾನ ಮುಗಿಸಿ ಅವರಿಬ್ಬರೂ ಏಳು ದಿನಗಳ ಉಪವಾಸವನ್ನು ತೊರೆದರು. ಅನಂತರ ತುಕಾರಾಮನು ಕಾನ್ಹೋಬಾನನ್ನು ಮನೆಗೆ ಕಳುಹಿಸಿ ಆ ಕಿರ್ದಿ ಪುಸ್ತಕವನ್ನು ತರಿಸಿದನು. ಆನಂತರ ಆ ಕಾಗದ ಪತ್ರವನ್ನು ಸರಿಯಾಗಿ ಇಬ್ಭಾಗ ಮಾಡಿದನು. ಅದರಲ್ಲಿಯ ಒಂದು ಭಾಗವನ್ನು ಕಾನ್ಹೋಬಾನಿಗೆ ನೀಡಿದನು. ತನ್ನ ಪಾಲಿಗೆ ಬಂದ ಕಾಗದ ಪತ್ರಗಳನ್ನು ಇಂದ್ರಾಯಣಿಯ ಹೊಳೆಯಲ್ಲಿ ಮುಳುಗಿಸಿದನು.
ಬಾಹ್ಯನೋಟಕ್ಕೆ ಈ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಘಟನೆಯೂ ಯಾರಿಗೇ ಆದರೂ ಅಸಾಧಾರಣವೆನ್ನಿಸುತ್ತದೆ. ಸಂಪನ್ನ ಪರಿಸ್ಥಿತಿಯ ಪರಿವಾರದಲ್ಲಿರುವ ವ್ಯಕ್ತಿಯು ಈ ಬಗೆಯ ನಿರ್ಣಯವನ್ನು ಅಪರೂಪಕ್ಕೆ ತೆಗೆದುಕೊಳ್ಳುತ್ತಾನೆ. ಸಂಸಾರಿಕ ಹೊಣೆಯನ್ನು ಹೊತ್ತನಂತರ ತುಕಾರಾಮನು ಕೈಕೊಂಡ ಮಹತ್ವದ ನಿರ್ಣಯವೆಂದು ಈ ಘಟನೆಯನ್ನು ಪರಿಗಣಿಸಬಹುದು. ಒಂದರ್ಥದಲ್ಲಿ ಈ ನಿರ್ಣಯವು ತುಕಾರಾಮನ ಜೀವನದ ಆರಂಭದ ಬಿಂದುವಾಗಿತ್ತು.

ಈ ಘಟನೆಯು ತುಕಾರಾಮನ ಜೀವನದಲ್ಲಿ ನಡೆಯದೇ ಹೋಗಿದ್ದರೆ, ಇಂದು ನಮ್ಮೆದುರಿಗಿದ್ದ ತುಕಾರಾಮನು ಪ್ರಾಯಶಃ ನಮಗೆ ಸಿಗುತ್ತಲೇ ಇರುತ್ತಿರಲಿಲ್ಲ. ಈ ಘಟನೆಯ ನಂತರ ಧಾರ್ಮಿಕತೆಯತ್ತ ಮುಖ ಮಾಡುವ ತುಕಾರಾಮ ಶ್ರೇಷ್ಠ ಭಕ್ತನಾಗಿ ಜನಮಾನಸದಲ್ಲಿ ಸ್ಥಾಯಿಯಾಗುತ್ತಾನೆ.

ತುಕಾರಾಮ ಆಗಿಹೋದ ಕಾಲದಲ್ಲಿ ಶೂದ್ರರಿಗೆ ವೇದದ ಅಧಿಕಾರವಿರಲಿಲ್ಲ. ಅವನು ವೇದವನ್ನು ಉಚ್ಚರಿಸುವಂತಿಲ್ಲ ಮತ್ತು ಆಲಿಸುವಂತಿಲ್ಲ. ಈ ನಿಯಮ ಮುರಿದವರ ಬಾಯಿ, ಕಿವಿಯಲ್ಲಿ ಕಾದ ಎಣ್ಣೆ ಸುರಿಯುವ ಕ್ರೂರ ಶಿಕ್ಷೆಯಿತ್ತು. ಧರ್ಮಶಾಸ್ತ್ರದ ನಿಯಮದ ಪ್ರಕಾರ ತುಕಾರಾಮನು ಅಬ್ರಾಹ್ಮಣ ರೈತನಾಗಿದ್ದರಿಂದ ಶೂದ್ರನಾಗಿದ್ದ, ಹೀಗಾಗಿ ಅವನಿಗೆ ವೇದದ ಅಧಿಕಾರವಿರಲಿಲ್ಲ. ಅವನಿಗೆ ಬರೆಯುವ ಅಧಿಕಾರವೂ ಇಲ್ಲವಾಗಿತ್ತು. ಆದರೆ ಸ್ವತಃ ವಿಠೋಬನೇ ತುಕಾರಾಮನ ಕನಸಿನಲ್ಲಿ ಬಂದು, ಸಂತ ನಾಮದೇವರು ಅಪೂರ್ಣಗೊಳಿಸಿದ್ದ ಕೋಟ್ಯಭಂಗ ರಚನೆಯ ಕಾರ್ಯವನ್ನು ಮುಂದುವರೆಸುವಂತೆ ನಿರ್ದೇಶಿಸುತ್ತಾನೆ. ಅಲ್ಲಿಂದ ಮುಂದೆ ತುಕಾರಾಮನ ಸಾಹಿತ್ಯ ಭಕ್ತಿ ಸೇವೆ ಆರಂಭವಾಗುತ್ತದೆ. ಅಭಂಗಗಳ ಮೂಲಕ ಅವನು ಸಮಾಜದ ಢಾಂಬಿಕ ಭಕ್ತಿಯನ್ನೂ ಒಂದು ವರ್ಗದವರು ಧರ್ಮದ ಹೆಸರಲ್ಲಿ ನಡೆಸುವ ಶೋಷಣೆಯನ್ನೂ ವ್ಯಂಗ್ಯದಿಂದ ಪ್ರಶ್ನಿಸುತ್ತಾನೆ. ಅಂಧಶ್ರದ್ಧೆಯನ್ನು ಭಂಜಿಸುವ ಆಯುಧವಾಗಿ ಅಭಂಗಗಳನ್ನು ಬಳಸಿಕೊಳ್ಳುತ್ತಾನೆ.

ಪಂಡಿತರು ವೇದದ ಅರ್ಥ ತಿಳಿದುಕೊಳ್ಳದೆ ಕೇವಲ ಗಿಳಿಪಾಠ ಮಾಡುತ್ತಾರೆನ್ನುವದು ತುಕಾರಾಮನ ಮಹತ್ವದ ಆಕ್ಷೇಪವಾಗಿತ್ತು. “ಅರ್ಥವರಿಯದೇ ಮಾಡಿದ ಪಾಠವು ಎತ್ತು ಅಥವಾ ಕುದುರೆಯ ಒಜ್ಜೆ ಹೊತ್ತಂತೆ, ಹೀಗೆ ಪಾಠಾಂತರ ಮಾಡುವ ಜನ ಒಜ್ಜೆ ಹೊತ್ತು ಮುಳ್ಳು ತಿನ್ನುವ ಒಂಟೆಯಂತಿರುತ್ತಾರೆ” ಎಂದೆಲ್ಲ ಮೂದಲಿಸುತ್ತಿದ್ದ ತುಕಾರಾಮ. ಪೊಳ್ಳು ಪಂಡಿತರ ವಿರುದ್ಧ ಅವನು ಝಳಪಿಸಿದ ಮಾತಿನ ಚೂರಿ ಬಹಳ ಹರಿತವಿತ್ತು ಎಂಬುವುದರಲ್ಲಿ ಸಂಶಯವೇ ಇಲ್ಲ.

ಶಾಬ್ದಿಕ ಜ್ಞಾನಕ್ಕಿಂತ ನಿಜದ ಅನುಭವಕ್ಕೆ ನಿಜವಾದ ಮಹತ್ವವಿದೆ ಎನ್ನುವದು ತುಕಾರಾಮನ ಅನ್ನಿಸಿಕೆಯಾಗಿತ್ತು. ಹೀಗಾಗಿ ಯಾರೂ ದಂತಕಥೆ ಅಥವಾ ಟೊಳ್ಳುಕಥೆಯನ್ನು ಹೇಳಬೇಡಿ ಎಂದವನು ಹೇಳುತ್ತಿದ್ದ. ಖೊಟ್ಟಿ ಮನುಷ್ಯನು ನೀಡಿದ ಊಟದ ಆಮಂತ್ರಣವನ್ನು ಉಂಡ ಬಳಿಕವೇ ಖರೇ ಎಂದು ಭಾವಿಸಬೇಕು ಎಂದವನು ಶಬ್ದಜಾಲ ಬಳಸುವವರನ್ನು ಕುರಿತು ವ್ಯಂಗ್ಯವಾಡುತ್ತಿದ್ದ. ಆಗಸದಲ್ಲಿ ಹಗ್ಗದಾಟ ನಡೆಸುವ ಡೊಂಬರು ಅಮರರಾಗುವುದಿಲ್ಲ. ಮೋಡಗಳ ಕುದುರೆ, ಯೋಧರು ನಿಜವಾದ ಯುದ್ಧಕ್ಕೆ ಒದಗುವುದಿಲ್ಲ. ಹಾಗೆಯೇ ಶಾಬ್ದಿಕ ಜ್ಞಾನವು ಬರಿಯ ತೌಡು ಕುಟ್ಟಿದಂತೆ ನಿಷ್ಪಲವಾದುದು ಎಂದವನು ಟೀಕಿಸುತ್ತಿದ್ದ. ಅವನ ಭಗವದ್ಭಕ್ತಿ ಹಾಗೂ ಸಾಧನೆಯ ಪ್ರಾಮಾಣಿಕತೆ ಅವನ ಟೀಕೆಗಳಿಗೆ ತೂಕ ತಂದುಕೊಟ್ಟಿದ್ದವು.

ಶೂದ್ರರಿಗೆ ವೇದದ ಅಧಿಕಾರವನ್ನು ನಿರಾಕರಿಸುವ ವ್ಯವಸ್ಥೆಯ ವಿರುದ್ಧ ತುಕಾರಾಮನು ಬಂಡಾಯ ಹೂಡಿದ. “ನಾನು ವಿಠ್ಠಲನ ಕೃಪೆಯಿಂದ ವೇದದ ಬಗೆಗೆ ಮಾತನಾಡುತ್ತೇನೆ. ವೇದದ ಅರ್ಥ ನಮಗೆ ಗೊತ್ತು. ಉಳಿದವರು ಕೇವಲ ಅದರ ಹೊರೆಯನ್ನು ತಲೆಯ ಮೇಲೆ ಹೊರಬೇಕು. ಅನ್ನ ಕೇವಲ ನೋಡುವವರಿಂದಲೇ ರುಚಿ ಗೊತ್ತಾಗುವುದಿಲ್ಲ. ಅದನ್ನು ತಿಂದು ನೋಡಬೇಕಾಗುತ್ತದೆ. ಧನ ಹೊರುವ ಕೂಲಿ ಮಾಡುವ ಮನುಷ್ಯನು ಕೇವಲ ಧನದ ಒಜ್ಜೆಯನ್ನು ಹೊರುತ್ತಾನೆ. ನಮಗೆ ದೇವರ ಸ್ವರೂಪದ ಮೂಲ ದೊರಕ್ಕಿದ್ದರಿಂದ ಫಲವೂ ಸಹಜವಾಗಿ ಲಭಿಸುತ್ತದೆ” ಎಂದವನು ಯಾವುದೇ ಅಳುಕಿಲ್ಲದೆ ತನ್ನ ವಾದ ಮಂಡಿಸುತ್ತಿದ್ದ.

ಅಧ್ಯಾತ್ಮವು ತುಕಾರಾಮನ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಅವನ ಸ್ಥಾಯಿ ಭಾವವಾಗಿತ್ತು. ಅದು ಅವನ ಉಸಿರಾಟದಷ್ಟೆ ಸಹಜವಾಗಿತ್ತು. ಅವನ ಸಾವಿರಾರು ಅಭಂಗಗಳೇ ಈ ಮಾತಿಗೆ ಪುರಾವೆಯಾಗಿದೆ.

 

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.