ತನ್ನನ್ನು ತಾನು ತಿಳಿಯದಿರುವುದು ಕೂಡ ಚೇತನದ ಸ್ವಭಾವಗಳಲ್ಲೊಂದು

photoಚೇತನವು ಜೀವನದಾಯಿನಿಯಾಗಿದೆ. ಇದನ್ನು ಜೀವನ ಶಕ್ತಿ ಎಂದಾದರೂ ಕರೆಯಿರಿ, ಲೈಫ್‌ ಫೋರ್ಸ್‌ ಎಂದಾದರೂ ಅಥವಾ ಲೈಫ್ ಎನರ್ಜಿ ಎಂದಾದರೂ… ನಿಮಗೇನು ಇಷ್ಟ ಬರುತ್ತದೆಯೋ ಹಾಗೆ ಕರೆಯಿರಿ. ಎಲ್ಲಿ ಚೇತನ ಇರುವುದಿಲ್ಲವೋ ಅಲ್ಲಿ ಜೀವನವೂ ಇರುವುದಿಲ್ಲ  ~ Whosoever Ji

ಯಾವುದೆಲ್ಲವೂ ಚೇತನದೊಳಗೆ ಪ್ರತಿಬಿಂಬಿತವಾಗುತ್ತದೆಯೋ ಅವೆಲ್ಲವೂ ಚೇತನದ ಸಂಯೋಗದಿಂದ ಸಜೀವಗೊಳ್ಳುತ್ತವೆ. ಅದು ವಿಚಾರವಾಗಿರಲಿ ಅಥವಾ ಭಾವ; ವಾಸನೆಯಿರಲಿ ಅಥವಾ ಕಾಮನೆ; ಇಚ್ಛೆಯಾಗಿರಲಿ ಅಥವಾ ಭಯ. ಅದೇನೇ ಆಗಿದ್ದರೂ ಚೇತನದಲ್ಲಿ ಪ್ರಕಟಗೊಂಡ ಕೂಡಲೇ ಅದರೊಂದಿಗೆ ಸಂಯೋಗಗೊಂಡು ಸಜೀವಗೊಳ್ಳುತ್ತದೆ. ಚೇತನವು ಅದನ್ನು ಸಜೀವಗೊಳಿಸುತ್ತದೆ. ಏಕೆಂದರೆ ಚೇತನದ ಗೈರಿನಲ್ಲಿ ವಿಚಾರ, ಭಾವ, ಇಚ್ಛೆ ಇತ್ಯಾದಿಗಳು ಇರಲು ಸಾಧ್ಯವೇ ಇಲ್ಲ. ಈ ಎಲ್ಲವೂ ಇರಬೇಕೆಂದರೆ ಚೇತನ ಇರಬೇಕಾದುದು ಅನಿವಾರ್ಯ.

ಅಚ್ಚರಿಯೆಂದರೆ, ವಿಚಾರವು ಕಾಣಿಸುತ್ತದೆ, ಪ್ರಕಟಗೊಳ್ಳುತ್ತದೆ. ಆದರೆ ಚೇತನವು ಪ್ರಕಟಗೊಳ್ಳುವುದಿಲ್ಲ. ಇದು ಹೇಗೆಂದರೆ, ಕನ್ನಡಿಯಲ್ಲಿ ಪ್ರತಿಬಿಂಬ ಕಂಡಾಗ ಗಮನವು ಪ್ರತಿಬಿಂಬದತ್ತ ಹೋಗುತ್ತದೆಯೇ ಹೊರತು ಕನ್ನಡಿಯ ಕಡೆಗಲ್ಲ. ಹಾಗೆಯೇ ವಿಚಾರದ ಕಡೆಗೆ, ಭಾವದ ಕಡೆಗೆ, ಗಮನ ಹೋಗುತ್ತದೆಯೇ ಹೊರತು ಚೇತನದೆಡೆಗಲ್ಲ. ಚೇತನವು ಆಗ ವಿಸ್ಮೃತಿಗೊಳಗಾಗುತ್ತದೆ. ಚೇತನದ ಬೆಳಕಿನಲ್ಲಿ ವಿಚಾರ, ಭಾವ, ಇಚ್ಛೆ ಇತ್ಯಾದಿಗಳೇನಿವೆ, ಅವೆಲ್ಲವೂ ಪ್ರಕಟಗೊಳ್ಳುತ್ತವೆ. ಆದರೆ ಚೇತನವೇ ವಿಸ್ಮೃತಿಗೊಳಗಾಗುತ್ತದೆ. ಉದಾಹರಣೆಗೆ ನೋಡಿ, ಈ ಕೋಣೆಯಲ್ಲಿರುವ ಎಲ್ಲ ವಸ್ತುಗಳೂ ನಮಗೆ ಕಾಣುತ್ತಿವೆ. ಆದರೆ ಯಾವುದರ ಇರುವಿಕೆಯಿಂದ ಇವೆಲ್ಲವೂ ಕಾಣುತ್ತಿವೆಯೋ ಆ ಬೆಳಕಿನತ್ತ ನಮ್ಮ ಗಮನ ಹರಿಯುವುದಿಲ್ಲ.

ನೀವು ಯಾವಾಗಲಾದರೂ ಯೋಚಿಸಿದ್ದೀರಾ? ಬೆಳಕು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಬೆಳಕಿನ ಕಾರಣದಿಂದ ವಸ್ತುಗಳು ಕಾಣಿಸುತ್ತವೆ. ಹಾಗೆಯೇ ಚೇತನದ ಬೆಳಕಿನಲ್ಲಿ ವಿಚಾರಗಳು ಕಾಣಿಸಿಕೊಳ್ಳುತ್ತವೆ. ವಿಚಾರವು ಉದಿಸುತ್ತಲೇ ಚೇತನವು ಅದರೊಡನೆ ತಾದಾತ್ಮ್ಯಗೊಳ್ಳುತ್ತದೆ. ತಾದಾತ್ಮ್ಯಗೊಳ್ಳುವುದರ ಮೂಲಕ ವಿಚಾರವು ಜೀವಿತಗೊಳ್ಳುತ್ತದೆ, ಆದರೆ ಈ ಜೀವವು ಅದಕ್ಕೆ ಬಂದುದೆಲ್ಲಿಂದ?

ಅದು ಬಂದಿದ್ದು ಚೇತನದಿಂದ. ಈ ಚೇತನವು ಜೀವನದಾಯಿನಿಯಾಗಿದೆ. ಇದನ್ನು ಜೀವನ ಶಕ್ತಿ ಎಂದಾದರೂ ಕರೆಯಿರಿ, ಲೈಫ್‌ ಫೋರ್ಸ್‌ ಎಂದಾದರೂ ಅಥವಾ ಲೈಫ್ ಎನರ್ಜಿ ಎಂದಾದರೂ… ನಿಮಗೇನು ಇಷ್ಟ ಬರುತ್ತದೆಯೋ ಹಾಗೆ ಕರೆಯಿರಿ. ಎಲ್ಲಿ ಚೇತನ ಇರುವುದಿಲ್ಲವೋ ಅಲ್ಲಿ ಜೀವನವೂ ಇರುವುದಿಲ್ಲ. ಇಲ್ಲಿ ‘ಪ್ರಾಣ’ ಎನ್ನುವ ಮತ್ತೊಂದು ತತ್ತ್ವವೂ ಇದೆ, ಆದರೆ ನಾವಿಲ್ಲಿ ಆ ಕುರಿತು ಚರ್ಚಿಸುತ್ತಿಲ್ಲ. ಆ ಬಗ್ಗೆ ಮುಂದೆ ಮಾತಾಡೋಣ.

ನಿಮ್ಮೊಳಗೆ ಒಂದು ವಿಚಾರ ಉದಿಸುತ್ತದೆ; ನೀವು ಹೇಳುತ್ತೀರಿ – ‘ನನಗೆ ನೂರಕ್ಕೆ ನೂರು ಅದು ಗೊತ್ತಿದೆ. ಐ ಆಮ್‌ ಹಂಡ್ರೆಡ್‌ ಪರ್ಸೆಂಟ್‌ ಶ್ಯೂರ್‌!’ ಈ ಶತ ಪ್ರತಿಶತ ವಿಶ್ವಾಸ ಬಂದುದೆಲ್ಲಿಂದ? ಚೇತನವಿಲ್ಲದೆ ಹೋಗಿದ್ದರೆ ಈ ಶತ ಪ್ರತಿಶತ ಶ್ಯೂರಿಟಿಯನ್ನು ಯಾರು ನಿಶ್ಚಯಿಸುತ್ತಿದ್ದರು?

ನೀವು ಹೇಳುತ್ತೀರಿ, ‘ನನಗೆ ನಿನ್ನ ಮೇಲೆ ವಿಪರೀತ ಪ್ರೇಮವಿದೆ. ಎಷ್ಟೆಂದರೆ, ಅದನ್ನು ಮಾತಿನಲ್ಲಿ ಹೇಳಲಾಗುತ್ತಿಲ್ಲ!’ ಈ ಬಗೆಯ ಭಾವ ಉಂಟಾದಾಗ, ಅದರಲ್ಲೂ ಇಷ್ಟು ತೀವ್ರವಾಗಿ ಉಂಟಾದಾಗ ನೀವು ಬೇರೆ ಯಾರ ಮಾತನ್ನೂ ಕೇಳಲು ಸಿದ್ಧರಿರುವುದಿಲ್ಲ. ಅಲ್ಲವೆ? ಏಕೆ ಹೀಗಾಗುತ್ತದೆ? ಏಕೆಂದರೆ, ಚೇತನವು ಏನನ್ನು ನೋಡುತ್ತದೆಯೋ, ತಿಳಿಯುತ್ತದೆಯೋ, ಅದರೊಂದಿಗೆ ತದ್ರೂಪಗೊಳ್ಳುತ್ತದೆ; ಇದು ಅದರ ಸ್ವಭಾವ. ಯಾಕೆ ಹಾಗೆ ತದ್ರೂಪಗೊಳ್ಳುತ್ತದೆ, ಅದು ಹೇಗೆ ಘಟಿಸುತ್ತದೆ ಎಂದೆಲ್ಲ ಕೇಳಬೇಡಿ. ಒಟ್ಟಾರೆಯಾಗಿ ಅದು ತದ್ರೂಪ ಹೊಂದುತ್ತದೆ. 

ವಿಚಾರವನ್ನು ತಿಳಿಯುತ್ತಲೇ ವಿಚಾರ ರೂಪ ಹೊಂದುತ್ತದೆ. ಅದು ಹೀಗೆ ವಿಚಾರ ರೂಪ ತಳೆದಾಗ ಅದನ್ನು ವಿಚಾರ ಚೇತನವೆಂದು ಕರೆಯಲಾಗುತ್ತದೆ. ಇದೇ ಬಗೆಯಲ್ಲಿ ಭಾವ ಚೇತನ, ದೇಹ ಚೇತನ, ಸ್ವಪ್ನ ಚೇತನ, ಸುಷುಪ್ತಿ ಚೇತನ, ಜಾಗೃತ ಚೇತನ ಇತ್ಯಾದಿ ಉಂಟಾಗುತ್ತವೆ. ಚೇತನದ ಅರಿವಿಗೆ ಏನೆಲ್ಲ ನಿಲುಕುತ್ತದೆಯೋ  ಅವೆಲ್ಲವೂ ಸಚೇತನಗೊಳ್ಳುತ್ತ ಸಾಗುತ್ತವೆ. ಆ ಎಲ್ಲವುಗಳೊಂದಿಗೆ ತಾದಾತ್ಮ್ಯಗೊಳ್ಳುವುದರಿಂದ ಇದು ಘಟಿಸುತ್ತದೆ. ಚೇತನವು ತನ್ನನ್ನು ತಾನು ತಿಳಿದಿಲ್ಲದಿರುವುದೇ ಇದಕ್ಕೆ ಕಾರಣ.

ತನ್ನನ್ನು ತಾನು ತಿಳಿಯದಿರುವುದು ಕೂಡ ಚೇತನದ ಸ್ವಭಾವಗಳಲ್ಲೊಂದು. ಇದು ಅದರ ಸಹಜ ಪ್ರಕೃತಿ.  ಎಲ್ಲ ಅರಿವೂ ಅದರಿಂದಲೇ ಘಟಿಸುತ್ತಿದ್ದರೂ ಅದು ತನ್ನ ಕುರಿತಾದ ಅರಿವಿನ ಬಗ್ಗೆ ನಿರ್ಲಕ್ಷ್ಯದಿಂದ ಇರುತ್ತದೆ. ತನ್ನ ಬಗೆಗಿನ ಅನುಭವವಾಗಲೀ ತಿಳಿವಳಿಕೆಯಾಗಲೀ ಅದಕ್ಕೆ ಇರುವುದಿಲ್ಲ. ತನ್ನ ಬಗ್ಗೆ ಅದಕ್ಕೆ ಯಾವ ಜ್ಞಾನವೂ ಇರುವುದಿಲ್ಲ. ಚೇತನವು ತಿಳಿಯುವಂಥದ್ದೇನೂ ಇಲ್ಲದಿರುವಾಗ ಅದನ್ನು ಒಂದು ಬಗೆಯ ಉದಾಸೀನ ಆವರಿಸಿಕೊಳ್ಳುತ್ತದೆ. ಇದರಿಂದ ಚೇತನವು ಶಿಥಿಲಗೊಳ್ಳುತ್ತ ಸಾಗುತ್ತದೆ, ನಿಷ್ಕ್ರಿಯವಾಗುತ್ತದೆ. ಕ್ರಮೇಣ ಅಂತತಃ ನಾಶಗೊಳ್ಳುತ್ತ ಹೋಗುತ್ತದೆ.

ಈ ಅವಸ್ಥೆಯನ್ನೆ ನಾವು ನಿದ್ರಾವಸ್ಥೆ ಎಂದು ಕರೆಯುವುದು. ಅಥವಾ ಚೇತನದ ‘ಸುಷುಪ್ತಿ ಕಾಲ’ ಎನ್ನುವುದು. ಯಾವಾಗ ‘ಅರಿವು’ ನಾಶಗೊಳ್ಳುತ್ತದೆಯೋ ಆಗ ‘ಇರುವು’ ಕೂಡ ಅನುಭವಕ್ಕೆ ನಿಲುಕದಾಗುತ್ತದೆ. 

ಚೇತನದ ಮತ್ತೂ ಒಂದು ಅವಸ್ಥೆ ಇದೆ. ಯಾವಾಗ ಅದು ಅರಿಯುವಂಥದ್ದು ಏನೂ ಉಳಿಯುವುದಿಲ್ಲವೋ ಆಗ ಅದು ತನ್ನನ್ನು ತಾನು ಜಾಗೃತಗೊಳಿಸಿಕೊಳ್ಳುತ್ತದೆ. ತನ್ನನ್ನು ಅರಿಯುವ ನಿಟ್ಟಿನಲ್ಲಿ ಎಚ್ಚರಗೊಳ್ಳುತ್ತದೆ. ಹೀಗೆ ಎಚ್ಚರಗೊಂಡು ತನ್ನನ್ನು ತಾನು ಅರಿಯುವ ಸ್ಥಿತಿಯನ್ನು ತಲುಪುವುದೇ ಧ್ಯಾನಾವಸ್ಥೆ.

ಧ್ಯಾನದ ಅರ್ಥವೇ ಇದು – ಚೇತನವು ತನ್ನನ್ನು ತಾನು ಅರಿಯುವ ಯತ್ನ ನಡೆಸುವುದು. ಯಾವಾಗ ಚೇತೋದರ್ಪಣದಿಂದ ಹೊರಗಿನ ಎಲ್ಲ ಬಿಂಬಗಳೂ ಹೊರಟುಹೋಗುವವೋ, ಅದಕ್ಕೆ ಇನ್ನು ಪ್ರತಿಬಿಂಬಿಸುವಂಥದ್ದು ಏನೂ ಇರುವುದಿಲ್ಲವೋ ಆಗ ಅದು ತನ್ನನ್ನೇ ತಾನು ಪ್ರತಿಬಿಂಬಿಸಿಕೊಳ್ಳುತ್ತದೆ. ಸಚೇತನಗೊಳ್ಳುತ್ತದೆ. ಯಾವಾಗ ಅದು ಹೊರಗಿನ ವಸ್ತುಗಳಿಂದ ರಿಕ್ತವಾಗಿ ಶೂನ್ಯವಾಗುತ್ತದೆಯೋ ಆಗ ಅದು ತನ್ನನ್ನು ಗಮನಿಸಿಕೊಳ್ಳತೊಡಗುತ್ತದೆ. ಹೀಗೆ ಸಚೇತನಗೊಳ್ಳುವ ಸ್ಥಿತಿಯೇ ಧ್ಯಾನ.

ಈ ಅವಸ್ಥೆಯಲ್ಲಿ ಚೇತನವು ಮತ್ತೇನನ್ನೋ ಅರಿಯುವ ಯತ್ನ ನಡೆಸುತ್ತಿಲ್ಲ. ತನ್ನನ್ನು ತಾನು ಅರಿಯುವ ಯತ್ನ ನಡೆಸುತ್ತಿದೆಯಷ್ಟೆ. ಈಗ ಚೇತನವು ‘ಇರುವಿಕೆ’ಯ ಭಾವದಲ್ಲಿ, ‘ಇದ್ದೇನೆ’ ಎಂಬ ಅರಿವಿನಲ್ಲಿ ಸ್ಥಿತವಾಗಿದೆ. ದೃಢವಾಗಿದೆ. ಎಲ್ಲಿಯವರೆಗೆ ಚೇತನವು ಹೀಗೆ ಸ್ವಯಂ ಭಾವದಲ್ಲಿ ಸ್ಥಿರವಾಗಿರುತ್ತದೆಯೋ ಅಲ್ಲಿಯವರೆಗೆ ಧ್ಯಾನಾವಸ್ಥೆಯು ಇರುತ್ತದೆ.

ಚೇತನದ ಈ ಅವಸ್ಥೆಯನ್ನು ಹೊಂದುವುದೇ, ಚೇತನದ ಈ ಅವಸ್ಥೆಯನ್ನು ವಿಕಸಿತಗೊಳಿಸಿಕೊಳ್ಳುವುದೇ ಎಲ್ಲ ಧ್ಯಾನಿಗಳ ಗುರಿಯಾಗಿರುತ್ತದೆ. ಈ ಅವಸ್ಥೆಯನ್ನು ಪಡೆಯುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಅಭ್ಯಾಸ ಬೇಕಾಗುತ್ತದೆ. ಪ್ರಾಮಾಣಿಕ ಪ್ರಯತ್ನ ಹಾಕಬೇಕಾಗುತ್ತದೆ.

Leave a Reply