ಕತ್ತೆಗೆ ಓದಲು ಕಲಿಸುತ್ತೇನೆ ಅಂದ ನಸ್ರುದ್ದೀನ್!

Mulla

ತ್ತೊಮ್ಮೆ ರಾಜನಿಗೆ ಮುಲ್ಲಾ ನಸ್ರುದ್ದೀನನ್ನು ಪರೀಕ್ಷಿಸುವ ಮನಸ್ಸಾಯಿತು. ಹಾಗೆ ಅವನು ತನಗೆ ಅನುಮಾನ ಬಂದಾಗಲೆಲ್ಲ ನಸ್ರುದ್ದೀನನ್ನು ಕರೆಸಿಕೊಂಡು ಪರೀಕ್ಷೆ ಮಾಡುತ್ತಿದ್ದ. ಅದಕ್ಕೆ ಸರಿಯಾಗಿ ಪ್ರತಿತಂತ್ರ ಹೂಡಿ ನಸ್ರುದ್ದೀನನೂ ರಾಜನನ್ನು ಗೋಳುಹೊಯ್ದುಕೊಳ್ಳುತ್ತಿದ್ದ.

ನಸ್ರುದ್ದೀನನ್ನು ಕರೆಸಿಕೊಂಡ ರಾಜ, ‘ಕತ್ತೆಗೆ ಓದುವುದನ್ನು ಕಲಿಸಲು ನಿನ್ನಿಂದ ಸಾಧ್ಯವೇ?’ ಎಂದು ಸವಾಲು ಹಾಕಿದ.
ನಸ್ರುದ್ದೀನ್ ತುಂಬು ಆತ್ಮ ವಿಶ್ವಾಸದಿಂದ ‘ಯಾಕಾಗದು? ಖಂಡಿತಾ ಸಾಧ್ಯವಿದೆ. ನಾನು ಕತ್ತೆಗೆ ಓದುವುದನ್ನು ಕಲಿಸುತ್ತೇನೆ’ ಅಂದ.
ರಾಜನಿಗೆ ಅಚ್ಚರಿಯ ಜೊತೆಗೆ ಅನುಮಾನವೂ ಬಂದಿತು. ಈ ಸಲ ನನ್ನನ್ನು ಯಾಮಾರಿಸಲು ಬಿಡುವುದಿಲ್ಲವೆಂದು ನಿಶ್ಚಯಿಸಿ, “ಕಲಿಸಿ ತೋರಿಸು. ಇಲ್ಲವಾದರೆ ನಿನ್ನ ತಲೆ ಹಾರಿಸುತ್ತೇನೆ” ಎಂದು ಬೆದರಿಕೆಯೊಡ್ಡಿದ.

ನಸ್ರುದ್ದೀನ್ ಚೂರೂ ಅಳುಕಿಲ್ಲದೆ, ‘ನನಗೆ ಒಂದು ಕತ್ತೆ, 500 ಚಿನ್ನದ ನಾಣ್ಯಗಳು ಮತ್ತು ಎಂಟು ವರ್ಷಗಳ ಸಮಯ ಕೊಡಿ. ನಾನು ಕತ್ತೆಗೆ ಓದುವುದನ್ನು ಕಲಿಸಿ ಆಸ್ಥಾನಕ್ಕೆ ಕರೆತರುತ್ತೇನೆ” ಅಂದ.
ರಾಜ ವಿಧಿಯಿಲ್ಲದೆ ಅದಕ್ಕೆ ಒಪ್ಪಿಕೊಂಡು, ನಸ್ರುದ್ದೀನ್ ಕೇಳಿದ್ದನ್ನೆಲ್ಲ ವ್ಯವಸ್ಥೆ ಮಾಡಿಕೊಟ್ಟ.

ಕತ್ತೆಯನ್ನು ಎಳೆದುಕೊಂಡು ಮುಲ್ಲಾ ದರ್ಬಾರಿನಿಂದ ಹೊರಗೆ ಬಂದ ಮೇಲೆ ಗೆಳೆಯನೊಬ್ಬ “ಇದೇನು ಮಾಡಿದೆ ನಸ್ರುದ್ದೀನ್? ಕತ್ತೆಗೆ ಎಲ್ಲಾದರೂ ಓದುವುದನ್ನು ಕಲಿಸಲು ಸಾಧ್ಯವೇ?” ಎಂದು ಗಾಭರಿಯಿಂದ ಕೇಳಿದ.
ಗೆಳೆಯನ ಪ್ರಶ್ನೆಗೆ ನಸ್ರುದ್ದೀನ್, “ಸಾಧ್ಯವಾಗ್ತದೋ ಇಲ್ಲವೋ! ಸದ್ಯಕ್ಕಂತೂ ನನ್ನ ಬಳಿ ಒಂದು ಕತ್ತೆ ಮತ್ತೆ 500 ಚಿನ್ನದ ನಾಣ್ಯಗಳ ಜೊತೆಗೆ ಎಂಟು ವರ್ಷಗಳಷ್ಟು ಸುದೀರ್ಘ ಕಾಲವಿದೆ. ಎಂಟು ವರ್ಷಗಳ ಅವಧಿಯಲ್ಲಿ ಏನು ಬೇಕಾದರೂ ಆಗಬಹುದು. ಒಂದೋ ರಾಜ ಸತ್ತು ಹೋಗಬಹುದು ಅಥವಾ ನಾನೇ ಸಾಯಬಹುದು. ಅಥವಾ ಕತ್ತೆಯ ಆಯಸ್ಸು ಉಳಿದಿರದೆ ಕತ್ತೆಯೇ ಸತ್ತುಹೋಗಹುದು. ಏಳು ವರ್ಷಗಳ ಕಾಲ ಏನನ್ನೂ ಯೋಚನೆ ಮಾಡದೆ ಈ ಹಣದೊಂದಿಗೆ ಸುಖವಾಗಿದ್ದುಬಿಡುತ್ತೇನೆ. ಏಳನೇ ವರ್ಷದವರೆಗೆ ಯಾರೂ ಸಾಯದೆ ಹೋದರೆ, ಮುಂದಿನ ಉಪಾಯವನ್ನು ಆಗ ಕುಳಿತು ಹೆಣೆದರೂ ಸಾಕಾಗುತ್ತದೆ” ಅನ್ನುತ್ತಾ ಮುಗುಳ್ನಕ್ಕ.

 

Leave a Reply