ಭಗವದ್ಗೀತೆ; ಅಧ್ಯಾಯ 2 ಮತ್ತು 3 : ಸನಾತನ ಸಾಹಿತ್ಯ ~ ಮೂಲಪಾಠಗಳು #15

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ. 

ಅಧ್ಯಾಯ 2 : ಸಾಂಖ್ಯಯೋಗ

ಯುದ್ಧ ಮಾಡುವುದಿಲ್ಲ ಎಂದು ಕೈಚಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಆರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಯ ನಕ್ಷೆಯಂತಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲಿ ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು. 

ಅರ್ಜುನ ತನ್ನ ವಾದ ಸರಣಿಯ ಮೂಲಕ ತನ್ನನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾನೆ. ಇದೊಂದು ಆವೇಶ. ಆದರೆ ಅವನ ವಾದಗಳಿಗೆ ಎಳ್ಳಷ್ಟೂ ಮನ್ನಣೆ ನೀಡದ ಗೀತಾಚಾರ್ಯನು, “ಇಂತಹ ಕ್ಷುದ್ರ ಮಾನಸಿಕ ದೌರ್ಬಲ್ಯವನ್ನು ತೊಡೆದುಹಾಕಿ, ವೀರನಾಗಿ ಅನ್ಯಾಯದ ವಿರುದ್ಧ ಹೋರಾಡು” ಎಂದು ಬಿರುಸಾಗಿಯೇ ನುಡಿಯುತ್ತಾನೆ. ಈ ಮೂಲಕ ಅನುಕಂಪವನ್ನೂ ಸಹಾನುಭೂತಿಯನ್ನೂ ನಿರೀಕ್ಷಿಸುತ್ತಿದ್ದ ಅರ್ಜುನನ್ನು ದಿಗ್ಬ್ರಾಂತಗೊಳಿಸಿ ವಿಷಾದ ಮನಸ್ಥಿತಿಯಿಂದ ಹೊರಗೆ ತರುತ್ತಾನೆ. 

ಅಧ್ಯಾಯ 3 : ಕರ್ಮಯೋಗ

ಹಿಂದಿನ ಅಧ್ಯಾಯದಲ್ಲಿ ಭಗವಂತನ ಅರಿವು; ಹಾಗೂ ಆ ಅರಿವನ್ನು ಪಡೆಯುವ ಉಪಾಯವನ್ನು ವಿವರಿಸುವ ಶ್ರೀ ಕೃಷ್ಣ,  ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ. ಆದರೆ ಈ ಸಂದರ್ಭದಲ್ಲಿಯೇ ಈ ಹೇಳಿಕೆಗೆ ವ್ಯತಿರಿಕ್ತವಾಗಿ, ಕರ್ಮವನ್ನು (ಯುದ್ಧವನ್ನು) ಮಾಡು ಎನ್ನುತ್ತಾನೆ.

ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ತಾಮಸಿಕವಾದ, ರಾಗ – ದ್ವೇಷದಿಂದ ಕೂಡಿರುವ ಯುದ್ಧ ಯಾಕೆ ಬೇಕು? ಎಂದು ಅರ್ಜುನ  ಗೊಂದಲಗೊಳ್ಳುತ್ತಾನೆ. ಮೂರನೇ ಅಧ್ಯಾಯವು ಅರ್ಜುನನ ಈ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ. ಈ ಹಿಂದೆ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಹೇಳಿದ್ದ ಕೃಷ್ಣ,  ಯಾವ ನೆಲೆಯಲ್ಲಿ ಯಾವ  ಸ್ತರದಲ್ಲಿ ಯಾವುದು ಮುಖ್ಯ ಎನ್ನುವ ವಿಚಾರವನ್ನು ಇಲ್ಲಿ ವಿವರಿಸುತ್ತಾನೆ.

ಕರ್ಮಯೋಗದ ಬಗ್ಗೆ ವಿಶೇಷ ವಿವರಣೆ ಇಲ್ಲಿಂದ ಆರಂಭವಾಗುತ್ತದೆ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡೆದೇ ನಡೆಯುತ್ತದೆ. ಕರ್ಮ ಮಾಡುವುದನ್ನು ಬಿಟ್ಟ ತಕ್ಷಣ ಮೋಕ್ಷ ದೊರೆಯದು. ಮೂಲತಃ ಕರ್ಮವನ್ನು ತೊರೆಯುವುದೂ ಸಾಧ್ಯವಿಲ್ಲ. ಜ್ಞಾನಕ್ಕೆ ಪೂರಕವಲ್ಲದ ಯಾಂತ್ರಿಕ ಕರ್ಮವು ನಮ್ಮನ್ನು ಬಂಧಿಸುತ್ತದೆ.  ಜ್ಞಾನಕ್ಕೆ ಪೂರಕವಾದ ಕರ್ಮ ನಮ್ಮನ್ನು ಮುಕ್ತಗೊಳಿಸುತ್ತದೆ. ಕರ್ಮದ ಫಲವನ್ನು ಬಯಸದೇ ಇದ್ದ ತಕ್ಷಣ ಯಾವ ಸಿದ್ಧಿಯೂ ಆಗದು. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡೆಯಲು ಸಾಧ್ಯವಿಲ್ಲ ಎಂದು ಗೀತಾಚಾರ್ಯನು ವಿವರಿಸುತ್ತಾನೆ. 

Leave a Reply