ತಾವೋ ತಿಳಿವು #79 ~ ಪೂರ್ಣವಾಗುವುದೆಂದರೆ ತಾವೋಗೆ ಮರಳುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao1

ಪೂರ್ಣವಾಗಬೇಕಾದರೆ, ಚೂರುಚೂರಾಗು.
ನೇರವಾಗಬೇಕಾದರೆ, ಬಾಗು, ಮಣಿ.
ತುಂಬಿಕೊಳ್ಳಬೇಕಾದರೆ, ಖಾಲಿಯಾಗು.
ಮತ್ತೆ ಹುಟ್ಟಬೇಕಾದರೆ ಮೂದಲು ಸತ್ತು ನೋಡು
ಕಳೆದುಕೊಂಡವ ಶ್ರೀಮಂತ
ಕೂಡಿಟ್ಟವ ತಬ್ಬಿಬ್ಬು.

ಅಂತೆಯೇ ಸಂತ
ಒಂದನ್ನು ಮುಂದಿಟ್ಟುಕೊಂಡು
ಇನ್ನೊಂದನ್ನು ಒರೆಗೆ ಹಚ್ಚುತ್ತಾನೆ.

ಅವ ಪರದೆಯ ಹಿಂದೆ ಇರುವುದರಿಂದ
ಜನ ಅವನ ಬೆಳಕನ್ನು ಮಾತ್ರ ಕಾಣುತ್ತಾರೆ.
ಸ್ವಂತ ಸಮರ್ಥನೆಗೆ ಇಳಿಯುವದಿಲ್ಲವಾದ್ದರಿಂದ
ತಾನೇ ಸ್ವತಃ ಪ್ರಮಾಣವಾಗಿದ್ದಾನೆ.
ತನ್ನ ಬಗ್ಗೆ ಮಾತಾಡುವದಿಲ್ಲವಾದಿದರಿಂದ
ಜನರ ದನಿಯಾಗಿದ್ದಾನೆ.
ಸ್ಪರ್ಧೆಗಳಿಂದ ದೂರವಿರುವುದರಿಂದ
ಸೋಲು ಗೆಲುವುಗಳಿಂದ ಮುಕ್ತನಾಗಿದ್ದಾನೆ.

“ ಪೂರ್ಣವಾಗಬೇಕಾದರೆ, ಚೂರುಚೂರಾಗು “
ಎಂಬ ಪುರಾತನ ಸೂರಿಗಳ ನುಡಿ
ಬರೀ ಒಣ ಉಪದೇಶವಲ್ಲ.

ಪೂರ್ಣವಾಗುವುದೆಂದರೆ
ತಾವೋಗೆ ಮರಳುವುದು

Leave a Reply