ಮಧುರ ಭಕ್ತಿಯ ಅಸೀಮ ಶಕ್ತಿ

ಭಕ್ತಿ ಒಂದು ವಿಶಿಷ್ಟ ಭಾವ ವಿಶೇಷ. ಅದು ಶ್ರದ್ಧೆ, ಬದ್ಧತೆಗಳ ಮೇಲೆ ಪ್ರಕಟಗೊಳ್ಳುತ್ತದೆ. ಅಲ್ಲಿ ತರ್ಕಕ್ಕೆ, ವಿಚಾರಕ್ಕೆ ಆಸ್ಪದವಿಲ್ಲ. ಹಾಗೆಂದೇ ಕೂದಲೆಳೆಯ ದೋಷ ಉಂಟಾದರೂ ಭಕ್ತಿಯು ಭಯೋತ್ಪಾದಕವಾಗುತ್ತದೆ. ಈ ಭಕ್ತಿಗೆ ಪ್ರೇಮವನ್ನು ಬೆರೆಸಿದರೆ ಉಂಟಾಗುವ ಮಾಧುರ್ಯ ನಮ್ಮನ್ನು ಕರ್ಮಠತೆಯಿಂದ ಹೊರತಂದು ಸಲಹುತ್ತದೆ ~ ಸಾ.ಹಿರಣ್ಮಯಿ

ಹುಶಃ ಮಾನವ ತನ್ನ ಬದುಕನ್ನು ಸಹ್ಯವೂ ಸುಂದರವೂ ಆಗಿಸಿಕೊಳ್ಳಲು ಕಂಡುಕೊಂಡ ಮಾರ್ಗಗಳಲ್ಲೇ ಅತ್ಯುನ್ನತವಾದದ್ದು ಪ್ರೇಮ. ಇದರ ನಂತರದಲ್ಲಿ ಬರುವುದು ‘ಭಕ್ತಿ’. ಜಗತ್ತನ್ನು ಬೆಸೆಯಬಲ್ಲ ಕೊಂಡಿಗಳೇನಾದರೂ ಇದ್ದರೆ ಅವು ಪ್ರೇಮ ಮತ್ತು ಭಕ್ತಿಗಳಷ್ಟೆ. ಇವು ಅತ್ಯಂತ ಮಧುರವೂ ಶಕ್ತವೂ ಆದ ಭಾವವಿಶೇಷಗಳು. ಅವುಗಳಲ್ಲಿ ಪ್ರೇಮವು ತಾನೇ ಭಗವಂತನೆಂಬ ಅರಿವನ್ನು ಪಡೆಯುವ ಅದ್ವೈತವನ್ನು ಪ್ರತಿಪಾದಿಸುತ್ತದೆ. ಮತ್ತು ಭಕ್ತಿಯು ದ್ವೈತವನ್ನು ಕಾಯ್ದುಕೊಂಡು ಪಾರಮಾರ್ಥಿಕತೆಗೆ ಕೈಚಾಚುವ ಮಾಧ್ಯಮದಂತೆ ವರ್ತಿಸುತ್ತದೆ. 

ಭಕ್ತಿಯು ಜ್ಞಾನದ ಆಸರೆಯನ್ನು ಬೇಡುವುದಿಲ್ಲ. ಅಲ್ಲಿ ನಂಬಿಕೆಯೇ ಪ್ರಧಾನ. ಭಕ್ತಿ ಒಂದು ಬಹು ಆಯಾಮಗಳ, ಬಹು ಸಾಧ್ಯತೆಯ ಘಟನೆ. ಅದು ವ್ಯಕ್ತಿಯಲ್ಲಿ ಅದಾಗಲೇ ಇರುವಂಥದ್ದಲ್ಲ. ಅದು ಘಟಿಸುವಂಥದ್ದು. ಅದು ವ್ಯಕ್ತಿಯ ಸಾಮರ್ಥ್ಯದ ಘನಿಷ್ಠ ಅಭಿವ್ಯಕ್ತಿ. ಈ ಅಭಿವ್ಯಕ್ತಿಗೆ ಒಂದು ಅವಲಂಬನೆ ಬೇಕಾಗುತ್ತದೆ. ಯಾರೇ ಆದರೂ ತಮ್ಮಲ್ಲಿ ತಾವು ಭಕ್ತಿ ಇರಿಸಿಕೊಳ್ಳಲಾರರು. ಭಗವಂತ, ತಾಯ್ತಂದೆಯರು, ಗುರುಹಿರಿಯರು, ಕೊನೆಗೆ ದೇಶವೆಂಬ ಗಡಿಯೊಳಗಿನ ನೆಲದ ತುಂಡಾದರೂ ಈ ಅಭಿವ್ಯಕ್ತಿಗೆ ಅವಶ್ಯಕ. ಈ ಮೂಲಕವೇ ತಮ್ಮನ್ನು ತಾವು ಬಿಟ್ಟುಕೊಳ್ಳುತ್ತ ತಾವು ಭಕ್ತಿ ಇರಿಸಿಕೊಂಡಿರುವ ಶಕ್ತಿ/ವ್ಯಕ್ತಿ/ವಸ್ತುವಿಗೆ ಶರಣಾಗುತ್ತ, ಅದಕ್ಕೆ ಸಮರ್ಪಿತವಾಗುತ್ತ ಜೀವನದ ಸಾರ್ಥಕತೆಯನ್ನೂ ಆ ಮೂಲಕ ಮೋಕ್ಷವನ್ನೂ ಸಾಧಿಸುವ ಪ್ರಕ್ರಿಯೆ ಇದು.

ಹಾಗೆಂದು ಬರಿದೇ ಭಕ್ತಿಯು ಕೇವಲ ಕರ್ಮಠರನ್ನು ಸೃಷ್ಟಿಸುತ್ತದೆ. ಅಲ್ಲಿ ಪ್ರೇಮವೂ ಇದೆ ಎಂದಾಗ ಮಾತ್ರ ಸರ್ವಶಕ್ತನೊಡನೆ ತಾದಾತ್ಮ್ಯ ಸಾಧ್ಯವಾಗುತ್ತದೆ. ಅಂಥಾ ಪ್ರೇಮ ಮೂಡುವುದು ಭಗವಂತನನ್ನು ಅರಿತಾಗ ಮಾತ್ರ. ಮತ್ತು ಅಂಥಹ ಅರಿವಿಗೆ ಜ್ಞಾನ ಅತ್ಯವಶ್ಯಕ. ಕೃಷ್ಣ ಚೈತನ್ಯರು ಈ ಅಂಶವನ್ನು ಬಹಳ ಸೊಗಸಾಗಿ ಪ್ರತಿಪಾದಿಸುತ್ತಾರೆ. 

ಕೃಷ್ಣ ಚೈತನ್ಯರ ಅವತಾರದ ಕುರಿತು ಹೇಳಲಾಗುವ ವಿವರಣೆಗಳಲ್ಲಿ ಒಂದು ಹೀಗಿದೆ: ಕೃಷ್ಣನಿಗೆ ರಾಧೆಯ ಪ್ರೀತಿಯೊಂದು ಸೋಜಿಗ. ಆತ ರಾಧೆಯ ಪ್ರೇಮವನ್ನೇನೋ ಪರಿಭಾವಿಸಬಲ್ಲವನಾಗಿದ್ದ, ಯಾಕೆಂದರೆ ಆತ ಸ್ವತಃ ಪ್ರೇಮಿಸಿದ್ದ. ಆದರೆ ಆಕೆಯ ಭಕ್ತಿಯನ್ನ ತಿಳಿಯಲಾಗಲಿಲ್ಲ. ಅವಳ ಸಮರ್ಪಣಾ ಭಾವ ಅವನಿಗೊಂದು ವಿಸ್ಮಯವಾಗೇ ಉಳಿದಿತ್ತು. ಆ ಅಚ್ಚರಿಯನ್ನು ಅನುಭವಿಸಲೆಂದೇ ರಾಧಾ ಕೃಷ್ಣರ ಸಮ್ಮಿಲಿತ ಭಾವಾವೇಶ ಒಗ್ಗೂಡಿ ಚೈತನ್ಯಾವತಾರವಾಯಿತು! ಚೈತನ್ಯರು ಮಧುರ ಭಕ್ತಿಯ ಅಧ್ವರ್ಯುವಾಗಿ ಪೂರ್ವ ಭಾರತದಲ್ಲಿ ಭಕ್ತಿ ಚಳವಳಿಯ ಹಬ್ಬುವಿಕೆಗೆ ಕಾರಣರಾದರು. ಅವರ ಜನ್ಮದ ವೇಳೆಗೆ ವಂಗ, ಉತ್ಕಲ ದೇಶಗಳು ಜಾತೀಯ ಮೇಲುಕೀಳುಗಳಿಂದ ರೋಗಗ್ರಸ್ತವಾಗಿದ್ದವು. ಸಮುದಾಯವನ್ನು ಪ್ರೇಮದಿಂದ ಗೆಲ್ಲುವುದು ಸುಲಭದ ಮಾತಲ್ಲ. ಪ್ರೇಮಿಸುವವನು ಬೋಧಿಸಲಾರ, ಶಿಕ್ಷಿಸಲಾರ, ಸರಿ ತಪ್ಪುಗಳ ಭೇದವನ್ನೂ ಮಾಡಲಾರ. ಆದ್ದರಿಂದ ಅಲ್ಲಿ ಆ ಎಲ್ಲವನ್ನೂ ಮಾಡಬಲ್ಲ ಭಕ್ತಿ ಬೀಜದ ಬಿತ್ತನೆ ಅನಿವಾರ್ಯವಾಗಿತ್ತು. ಚೈತನ್ಯರು ಆ ಕೆಲಸ ಮಾಡಿದರು. ಕೃಷ್ಣಭಕ್ತಿಯನ್ನು ಬಿತ್ತಿದರು. ಪೂರ್ವದ ರಾಜ್ಯಗಳು ಭಾರೀ ಪರಿವರ್ತನೆಯನ್ನೆ ಕಂಡವು.

ಭಕ್ತಿಯ ಸ್ವಾರಸ್ಯವೇ ಅಂಥದ್ದು. ಅದು ಸ್ವಾರ್ಥಿ. ಈ ಸ್ವಾರ್ಥ ವಿಚಿತ್ರ ಸಾತ್ವಿಕ ಸ್ವಾರ್ಥ. ಅದು ತನ್ನ ಅಭಿವ್ಯಕ್ತಿಯ ಅನುಭವ ಸುಖವನ್ನು ಬಯಸುತ್ತದೆ. ಈ ಬಗ್ಗೆ ಕಬೀರರ ದೋಹೆಯೊಂದಿದೆ. ಸ್ವತಃ ರಾಮನೇ ಬಂದು ಕರೆದರೂ ಆತ ಹೋಗಲೊಲ್ಲನಂತೆ. ಅವನಿಗೆ ರಾಮನಿಗಿಂತ ರಾಮನಾಮ ಜಪವೇ ಪ್ರಿಯವಂತೆ! ಆತನಿಗೆ ಆ ಪ್ರಕ್ರಿಯೆಯ ಆನಂದವೇ ಭಗವಂತ. ಅದನ್ನು ಬಿಟ್ಟುಕೊಡಲು ಆತ ಬಯಸೋದಿಲ್ಲ. ಬೇಡರ ಕಣ್ಣಪ್ಪ ತನ್ನ ಕಣ್ಣನ್ನೆ ಕಿತ್ತು ಶಿವಪ್ಪನಿಗೆ ಅರ್ಪಿಸುವಾಗಲೂ ಅಲ್ಲಿ ಶಿವನನ್ನು ಪಡೆಯುವ ಹಂಬಲ ಇರುವುದಿಲ್ಲ. ಅಲ್ಲಿ ಆತನಿಗೆ ಸೇವೆ ಸಲ್ಲಿಸುವ ಉತ್ಕಟ ವಾಂಛೆ ಇರುತ್ತದೆ.

ಭಕ್ತಿ ಮುಗ್ಧತೆ, ನಿಷ್ಕಾಪಟ್ಯ ಹಾಗೂ ಸಂಪೂರ್ಣ ಸಮರ್ಪಣಾ ಭಾವಗಳಿದ್ದರೆ ಮಾತ್ರ ಸಾಧ್ಯವಾಗುವಂಥದ್ದು. ತರ್ಕದ ಠೇಂಕಾರದಿಂದ ಅದು ಹೊರತು. ಹಾಗೆಂದೇ ತಿಮ್ಮಪ್ಪ ಯಾರೋ ಕುಹಕಿಗಳ ಹೇಳಿಕೆ ಕೇಳಿ `ಕೋಣ.. ಕೋಣ..’ ಎಂದು ಜಪ ಮಾಡಿದಾಗ ಸಾಕ್ಷಾತ್ ಕೋಣದ ರೂಪದಲ್ಲಿ ಭಗವಂತ ಪ್ರತ್ಯಕ್ಷವಾಗಿದ್ದು. ಇದೇ ತಿಮ್ಮಪ್ಪ ಮುಂದೆ ಕನಕ ದಾಸರಾಗಿದ್ದು. ಭಕ್ತಶ್ರೇಷ್ಠರೆನ್ನಿಸಿಕೊಂಡವರೆಲ್ಲರೂ ಇಂಥಾ ಶ್ರದ್ಧಾಳುಗಳೇ. ಶ್ರದ್ಧೆಯಿಲ್ಲದೆ ಭಕ್ತಿ ಸಾಧ್ಯವೇ ಇಲ್ಲ. ಅಥವಾ ಭಕ್ತಿಯ ಬಳುವಳಿಯಾಗಿ ಶ್ರದ್ಧೆಯೂ ಬರುತ್ತದೆ. ಇವುಗಳಲ್ಲಿ ಒಂದಿಲ್ಲದೆ ಹೋದರೆ ಭಕ್ತಿಯ ಪ್ರಕ್ರಿಯೆಯು ಪರಿಪೂರ್ಣವಾಗುವುದಿಲ್ಲ.

ಭಕ್ತನಿಗೆ ಭಗವಂತ ಪಾರದರ್ಶಕ ಗಾಜಿನಂತೆ. ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಾ ಗಾಜಿನ ಮೇಲಿರುವ ಮಸುಕನ್ನೆಲ್ಲ ತೊಡೆದು ಕಣ್ತೆರೆದಾಗ ಆಚೆಗಿನ ಅದ್ಭುತಗಳು ಗೋಚರಿಸುತ್ತವೆ. ಭಗವಂತ ಮತ್ತೊಂದು ಲೋಕವನ್ನು ಭಕ್ತನಿಗೆ ಕಾಣಿಸುತ್ತಾನೆ. ಭಕ್ತನು ತಾನೇ ಭಗವಂತನಾಗುವ ಗೋಜಿಗೆ ಹೋಗದೆ, ಭಗವಂತನ ಮೂಲಕ ಸೃಷ್ಟಿಯನ್ನು ನೋಡುತ್ತಾನೆ, ಅರಿಯುತ್ತಾನೆ. 

ಭಕ್ತಿ ಅತ್ಯಂತ ಸದೃಢವಾದ ಮಾನಸಿಕತೆಯನ್ನು ಸೃಷ್ಟಿಸುತ್ತದೆ. ಪರಿಣಾಮಕ್ಕಿಂತ ಪ್ರಕ್ರಿಯೆಯನ್ನೆ ಹೆಚ್ಚು ಸುಖಿಸುವ ಅದು, ಯಾವ ಹಂತದವರೆಗೆ ಬೇಕಿದ್ದರೂ ಸಮರ್ಪಣೆಗೆ ಸಿದ್ಧವಾಗಿರುತ್ತದೆ. ಹಾಗೆಂದೇ ರಾಷ್ಟ್ರಭಕ್ತಿ, ರಾಜಭಕ್ತಿಗಳ ಪರಿಕಲ್ಪನೆ ಹುಟ್ಟಿಕೊಂಡಿದ್ದು. 
ಹಾಗೆಂದ ಮಾತ್ರಕ್ಕೆ ಭಕ್ತಿ ಭಕ್ತರನ್ನು ಅಡಿಯಾಳಾಗಿಸಿಕೊಳ್ಳುವುದಿಲ್ಲ. ಅದು ಏಕನಿಷ್ಠೆಯನ್ನು ಪ್ರತಿಪಾದಿಸುವ ಮೂಲಕ ಧೃಢತೆಯನ್ನೂ ನಿಖರತೆಯನ್ನೂ ಕಟ್ಟಿಕೊಡುತ್ತದೆ. ಒಂದು ಗುರಿ ನಿಗದಿತವಾದಾಗ ಮತ್ತು ಒಂದೇ ದಾರಿಯ ಮೂಲಕ ನಡೆಯಬೇಕು ಎಂದಾಗ ಅದನ್ನು ಸಾಧಿಸುವ ಛಲ ವ್ಯಕ್ತಿಯಲ್ಲಿ ಹೆಚ್ಚುವರಿ ಜಾಗೃತಿಯನ್ನೂ ತನ್ನ ಪಥದಲ್ಲೇ ಸಾಗಿ ಬರುತ್ತಿರುವ ಇತರರೊಂದಿಗೆ ಸೌಹಾರ್ದವನ್ನೂ ಒಗ್ಗಟ್ಟನ್ನೂ ಮೂಡಿಸುತ್ತದೆ. ಭಾರತದಲ್ಲಿ ಭಕ್ತಿಯ ಹೆಸರಲ್ಲಿ ನಡೆದ ಚಳವಳಿಗಳು ಯಶಸ್ವಿಯಾಗಿದ್ದು, ಒಂದು ಕ್ರಾಂತಿಯೇ ಆಗಿಹೋಗಿದ್ದು ಈ ಕಾರಣದಿಂದಲೇ.

Leave a Reply