ತಾವೋ ತಿಳಿವು #80 ~ ಕೊನೆಯ ಕಂತು

ತಾವೋ ಪ್ರವರ್ತಕ ಲಾವೋತ್ಸುವಿನ ‘ತಾವೊ ತೆ ಚಿಂಗ್’ ಅಥವಾ ‘ದಾವ್ ದ ಜಿಂಗ್’ ಅನ್ನು ಅರಳಿ ಬಳಗದ ಲೇಖಕ ಚಿದಂಬರ ನರೇಂದ್ರ ಕನ್ನಡಕ್ಕೆ ತಂದಿದ್ದಾರೆ. ಕಳೆದ  ನಾಲ್ಕು ತಿಂಗಳಿನಿಂದ 79 ಕಂತುಗಳಲ್ಲಿ ಈ ಅನುವಾದವನ್ನು ಪ್ರಕಟಿಸಿದ್ದು, ಇಂದಿನದು ‘ತಾವೋ ತಿಳಿವು’ ಸರಣಿಯ ಕೊನೆಯ ಕಂತು. ಮುಂದಿನ ದಿನಗಳಲ್ಲಿ ಖಲೀಲ್ ಗಿಬ್ರಾನ್’ರ ‘ಪ್ರವಾದಿ’ ಕೃತಿಯು ಚಿದಂಬರ ನರೇಂದ್ರ ಅವರು ಅನುವಾದದಲ್ಲಿ ಪ್ರಕಟವಾಗಲಿದೆ. 
ಓದುಗರ ಆಸಕ್ತಿ ಮತ್ತು ಪ್ರೀತಿಗೆ ಶರಣು ~ ಅರಳಿ ಬಳಗ

ಧಿಕಾರ ಚಲಾಯಿಸುವ ಹುಕಿ ಇಲ್ಲದಿರುವುದರಿಂದ
ಸಂತ ಭಾರಿ ಶಕ್ತಿಶಾಲಿ.
ಸದಾ ಅಧಿಕಾರದ ಚಿಂತೆ ಮಾಡುತ್ತಾರಾದ್ದರಿಂದ
ಸಾಮಾನ್ಯರು ನಿರಂತರ ವಂಚಿತರು.

ಸಂತ ಏನೂ ಮಾಡುವುದಿಲ್ಲವಾದರೂ
ಮಾಡಲು ಏನೂ ಉಳಿದಿರುವುದಿಲ್ಲ.
ಸಾಮಾನ್ಯರು ಸದಾ ಕೆಲಸದಲ್ಲಿ ನಿರತರಾದರೂ
ಮಾಡುವುದು ಮುಗಿಯುವುದೇ ಇಲ್ಲ.

ಅಂತಃಕರುಣಿ ಏನೋ ಮಾಡುತ್ತಾನಾದರೂ
ಏನೋ ಮಾಡುವುದು ಉಳಿದುಹೋಗಿರುತ್ತದೆ.
ನ್ಯಾಯವಂತ ಎಷ್ಟೋ ಮಾಡುತ್ತಾನಾದರೂ
ಎಷ್ಟೋ ಹಾಗೆಯೇ ಉಳಿಸಿರುತ್ತಾನೆ.
ಆಚಾರವಂತರು ಅಷ್ಟಿಷ್ಟು ಮಾಡುತ್ತಾರಾದರೂ
ಜನ ತಲೆದೂಗದಿದ್ದಾಗ, ತೋಳು ಮೇಲೇರಿಸುತ್ತಾರೆ.

ತಾವೋ ಮರೆಯಾದಾಗ ನ್ಯಾಯ ಉಳಿದುಕೊಳ್ಳುತ್ತದೆ.
ನ್ಯಾಯ ಮರೆಯಾದಾಗ ನೈತಿಕತೆ ಹುಟ್ಟಿಕೊಳ್ಳುತ್ತದೆ.
ನೈತಿಕತೆ ಮರೆಯಾದಾಗ ಆಚರಣೆಯ ಮರವಣಿಗೆ.
ಆಚರಣೆ, ನಂಬಿಕೆಯ ಹೊಟ್ಟು
ಅರಾಜಕತೆಯ ಆರಂಭ.

ಅಂತೆಯೇ ಸಂತನಿಗೆ
ಮೇಲ್ನೋಟಕ್ಕಿಂತ ಒಳನೋಟದಲ್ಲಿ ಆಸಕ್ತಿ.
ಹೂವಿಗಿಂತ ಹಣ್ಣಿನ ಬಗ್ಗೆ ಆಸ್ಥೆ.
ಸ್ವಂತ ಅಭಿಪ್ರಾಯಗಳಿಗಿಂತ
ನಿಜ ಸ್ಥಿತಿಯ ಮೇಲೆ ಹೆಚ್ಚು ಗಮನ.

ಅಂತೆಯೇ ಸಂತ
ಎಲ್ಲ ಭ್ರಮೆಗಳಿಂದ ಮುಕ್ತ.

 

ಲೇಖಕರ ಕುರಿತು:
ChiNa

ಚಿದಂಬರ ನರೇಂದ್ರ
ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

Leave a Reply