ಭಗವದ್ಗೀತೆ; ಅಧ್ಯಾಯ 8 ಮತ್ತು 9 : ಸನಾತನ ಸಾಹಿತ್ಯ ~ ಮೂಲಪಾಠಗಳು #18

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ. 

krsna

ಅಧ್ಯಾಯ 8 : ಅಕ್ಷರ ಬ್ರಹ್ಮ ಯೋಗ  

ರ್ಜುನನು “ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ?” ಇತ್ಯಾದಿ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಎಂಟನೇ ಅಧ್ಯಾಯ ಪ್ರಾರಂಭವಾಗುತ್ತದೆ.

ಈ ಪ್ರಶ್ನೆಗೆ ಗೀತಾಚಾರ್ಯನ ವಿವರಗಳು ಈ ಅಧ್ಯಾಯವನ್ನು ಆವರಿಸಿವೆ. ಅಸ್ತಿತ್ವ ಹಾಗೂ ಜೀವದ ಸ್ವಭಾವಗಳ ಕುರಿತು ವಿವರಿಸುವ ಶ್ರೀಕೃಷ್ಣ, ಎಲ್ಲಕ್ಕಿಂತ ಮೊದಲು ನಮ್ಮನ್ನು ನಾವು ತಿಳಿಯಬೇಕು, ಸ್ವ – ಭಾವವನ್ನು ಅರಿಯಬೇಕು ಎಂದು ಸೂಚಿಸುತ್ತಾನೆ. ನಾನು ಎಂದರೆ ಏನು? ನನ್ನಲ್ಲಿರುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು ಯಾವುವು ಎಂದು ಪರಾಮರ್ಶೆಗೊಳಪಡುತ್ತಾ ನಮ್ಮ ನಿಜರೂಪವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ವಿವರಿಸುತ್ತಾನೆ. ಈ ಅಧ್ಯಾಯದಲ್ಲಿ ‘ಅಕ್ಷರ’ವಾದ ಪರಬ್ರಹ್ಮವನ್ನು ಅರಿಯುವ ವಿಚಾರವು ಚರ್ಚೆಯಾಗುತ್ತದೆ.

ಅಧ್ಯಾಯ 9 : ರಾಜವಿದ್ಯಾ – ರಾಜಗುಹ್ಯ ಯೋಗ

ಜ್ಞಾನ ಎಂದರೆ ಭಗವಂತನ ಅರಿವು. ಎಲ್ಲವನ್ನು ತಿಳಿದ ಭಗವಂತನೆಡೆಗೆ ನಮ್ಮ ಮನಸ್ಸು ಹರಿಯುವಂತೆ ಮಾಡುವುದು ಜ್ಞಾನ. ಭಗವಂತ ಸರ್ವೋತ್ತಮ, ಭಗವಂತ ಸರ್ವಗತ, ಭಗವಂತ ಸರ್ವಜ್ಞ, ಇತ್ಯಾದಿಯಾಗಿ ತಿಳಿಯುವುದು ಜ್ಞಾನ. ಆ ನಂತರ ಅದರ ವಿವರಗಳ ಅರಿವು ವಿಜ್ಞಾನ (ವಿಶಿಷ್ಟವಾದ ಜ್ಞಾನ).  ಭಗವಂತ ಗುಣಪೂರ್ಣ ಎನ್ನುವುದು ಜ್ಞಾನ. ಭಗವಂತ ಜ್ಞಾನಪೂರ್ಣ, ಭಗವಂತ ಆನಂದಪೂರ್ಣ, ಭಗವಂತ ಸೌಂದರ್ಯಪೂರ್ಣ, ಭಗವಂತ ದಯಾಪೂರ್ಣ, ಹೀಗೆ ಒಂದೊಂದು ಗುಣಗಳ ಪೂರ್ಣತೆಯನ್ನು ವಿವರವಾಗಿ ಅನುಸಂಧಾನ ಮಾಡುವುದು ವಿಜ್ಞಾನ. 

ನಾವು ಭಗವಂತನನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅವರವರ ಮಟ್ಟಕ್ಕೆ ತಕ್ಕಂತೆ ಭಗವಂತನನ್ನು ಅರಿಯುವುದು ವಿಜ್ಞಾನ. ಹೀಗೆ ಭಗವಂತ ಸರ್ವೋತ್ತಮ ಎಂದು ತಿಳಿದುಕೊಳ್ಳುವುದು ಜ್ಞಾನವಾದರೆ, ಆ ಸರ್ವೋತ್ತಮ ತತ್ವವನ್ನು ವಿವರವಾಗಿ ಅದರ ಬೇರೆ ಬೇರೆ ಮುಖಗಳಿಂದ ಅವರವರ ಯೋಗ್ಯತೆಗೆ ತಕ್ಕಂತೆ  ಅನುಸಂಧಾನ ಮಾಡುವುದು ವಿಜ್ಞಾನ. ಹೀಗೆ ಅನುಸಂಧಾನ ಮಾಡುವುದರಿಂದ ಭಗವಂತ ಎಲ್ಲವುದಕ್ಕಿಂತ ವಿಲಕ್ಷಣ ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ.

ಒಂಭತ್ತನೇ ಅಧ್ಯಾಯದಲ್ಲಿ ಈ ಎಲ್ಲ ವಿವರಗಳು ಬರುತ್ತವೆ. ವಿಜ್ಞಾನ ಎಂದರೆ ರಾಸಾಯನಿಕಗಳೊಂದಿಗೋ ಭೌತ ವಸ್ತುಗಳೊಂದಿಗೋ ನಡೆಸುವ ಲೆಕ್ಕಾಚಾರವಲ್ಲ. ಆ ಎಲ್ಲ ಪರಿಕರಗಳ ಮೂಲಕ, ಅವುಗಳ ಅಸ್ತಿತ್ವಕ್ಕೆ, ವರ್ತನೆಗೆ ಮೂಲ ಕಾರಣವನ್ನು, ಅದರ ಮೂಲ ಸಂರಚನೆಯನ್ನು ಅರಿಯುವುದು. ಭಗವಂತನನ್ನು ಅರಿಯುವುದು ಎಂದರೆ ಸರ್ವಕಾರಣಕಾರಣವನ್ನು ಅರಿಯುವುದು.

ಈ ಸರ್ವಕಾರಣಕಾರಣವನ್ನು ಅರಿಯುವುದೇ ವಿಜ್ಞಾನದ ಮೂಲ ಉದ್ದೇಶವೂ ಆಗಿದೆ.  ಅದರ ಹಿಂದೆ ಜಗನ್ನಿಯಾಮಕನೊಬ್ಬನಿದ್ದಾನೆ ಎಂಬ ಅರಿವಿನಲ್ಲಿ ಅರಸಿದರೆ ಸಾಕ್ಷಾತ್ಕಾರ ಖಚಿತ ಎನ್ನುವುದು ಈ ಅಧ್ಯಾಯದ ಬೋಧನೆಯ ಸಾರಾಂಶ. 

Leave a Reply